ವೈದ್ಯರಿಗೆ ಶಸ್ತ್ರ ಚಿಕಿತ್ಸೆಯನ್ನು ಮಾಡಲು ಅನುಮತಿ : ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ಸ್ವಾಗತ

Kanandanet NEWS ಇತ್ತೀಚೆಗೆ ಕೇಂದ್ರ ಸರಕಾರ ಗೆಜೆಟ್ ಅಧಿಸೂಚನೆಯಲ್ಲಿ ಶಲ್ಯ ತಂತ್ರ ಮತ್ತು ಶಾಲಾಕ್ಯ ತಂತ್ರ ವಿಷಯದಲ್ಲಿ ಸ್ನಾತಕೋತ್ತರ ಪಡೆದ ವೈದ್ಯರಿಗೆ ಶಸ್ತ್ರ ಚಿಕಿತ್ಸೆಯನ್ನು ಮಾಡಲು ಅನುಮತಿ ನೀಡಿರುವ ಕೇಂದ್ರ ಸರಕಾರ ಮತ್ತು ಸಿ.ಸಿ.ಐ.ಎಂ ಗಳ ನಿರ್ಧಾರವನ್ನು ಅತ್ಯಂತ ಹಳೆಯ, ಬಲಿಷ್ಠ ಹಾಗೂ ರಾಷ್ಟ್ರದ ದೊಡ್ಡ ಭಾರತೀಯ ವೈದ್ಯಪದ್ಧತಿಗಳ ಸಂಘಟನೆಯಾದ ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ಸ್ವಾಗತಿಸುತ್ತದೆ.

ಭಾರತೀಯ ವೈದ್ಯಕೀಯ ಸಂಘವು ಕೇಂದ್ರ ಸರಕಾರ ಮತ್ತು ಸಿ.ಸಿಐ.ಎಂ ಗಳ ಈ ನಿರ್ಧಾರವನ್ನು ವಿರೋಧಿಸಿ ದಿನಾಂಕ ೧೧/೧೨/೨೦೨೦ರಂದು ರಾಷ್ಟ್ರವ್ಯಾಪಿ ಬಂದ್ ಗೆ ಕರೆ ನೀಡಿದ್ದಾರೆ. ಈ ವಿರೋಧವನ್ನು ಆಯುವೇದ ವೈದ್ಯರು ಖಂಡಿಸುತ್ತೇವೆ. ವೈದ್ಯಕೀಯ ಶಾಸ್ತ್ರವು ಸುಶ್ರುತನನ್ನು ಶಸ್ತ್ರಚಿಕಿತ್ಸಾ ಪಿತಾಮಹನೆಂದು ಕರೆಯುತ್ತಾರೆ. ೫೦೦೦ ವರ್ಷಗಳ ಹಿಂದೆಯೇ ಆಯುರ್ವೇದ ಶಾಸ್ತ್ರದಲ್ಲಿ ಸುಶ್ರುತರು ಪ್ಲಾಸ್ಟಿಕ್ ಸರ್ಜರಿ, ಕರ್ಣ ಶಸ್ತ್ರಚಿಕಿತ್ಸೆ, ಗುದಗತ ರೋಗಗಳ ಶಸ್ತ್ರಚಿಕಿತ್ಸೆ ಇತ್ಯಾದಿ ಸೂಕ್ಷ್ಮ ಹಾಗೂ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದು ಅವುಗಳ ಬಗ್ಗೆ ಶಾಸ್ತ್ರದಲ್ಲಿಯೂ ಸಹ ಉಲ್ಲೇಖವಿದೆ.ಭಾರತೀಯ ವೈದ್ಯಪದ್ದತಿಗಳ ವೈದ್ಯರು ತಮ್ಮ ಶಿಕ್ಷಣದಲ್ಲಿ ಈ ಎಲ್ಲಾ ಶಸ್ತ್ರಚಿಕಿತ್ಸೆಗಳನ್ನು ಅಧ್ಯಯನ ಮಾಡಿ ಪ್ರಾತ್ಯಕ್ಷಿಕ ತರಬೇತಿಯನ್ನು ಪಡೆದಿರುತ್ತಾರೆ.
ಆಯುರ್ವೇದ ವೈದ್ಯರ ಬಹುದಿನಗಳ ಈ ಬೇಡಿಕೆಯನ್ನು ಕೇಂದ್ರ ಸರಕಾರವು ಅನುಮತಿ ನೀಡಿರುವುದು ದೂರದೃಷ್ಠಿ ಹಾಗೂ ಗ್ರಾಮೀಣ ಜನರ ಆರೋಗ್ಯದ ಕಾಳಜಿಯನ್ನು ವ್ಯಕ್ತಪಡಿಸುತ್ತದೆ. ಈ ಆದೇಶ ಭಾರತೀಯ ವೈದ್ಯಪದ್ದತಿಗಳ ವೈದ್ಯರಿಗೆ ಕಾನೂನಿನ ಸುಭದ್ರತೆಯನ್ನು ನೀಡುತ್ತದೆ. ಕಾರಣ ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ವತಿಯಿಂದ ದೇಶದ ಹೆಮ್ಮೆಯ ಪ್ರಧಾನಮಂತ್ರಿ  ನರೇಂದ್ರ ಮೋದಿಯವರಿಗೆ, ಕೇಂದ್ರ ಆಯುಷ್ ಇಲಾಖೆ ಹಾಗೂ ಸಿ.ಸಿ.ಐ.ಎಂ ಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಆದರೆ ವಿಷಾದದ ಸಂಗತಿಯೆಂದರೆ ಭಾರತೀಯ ವೈದ್ಯಕೀಯ ಸಂಘವು ಕೇಂದ್ರ ಸರಕಾರ ಮತ್ತು ಸಿ.ಸಿ.ಐ.ಎಂ ಗಳ ಈ ನಿರ್ಧಾರಕ್ಕೆ ವಿರೋಧವನ್ನು ವ್ಯಕ್ತಪಡಿಸಿ ದಿನಾಂಕ ೧೧/೧೨/೨೦೨೦ರಂದು ರಾಷ್ಟ್ರವ್ಯಾಪಿ ಮುಷ್ಕರವನ್ನು ಹಮ್ಮಿಕೊಂಡಿದ್ದಾರೆ, ಇದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮೇಲೆ ಒತ್ತಡ ಹೇರುವ ತಂತ್ರವಾಗಿದೆ. ಯಾವುದೇ ಪರಿಸ್ಥಿತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಭಾರತೀಯ ವೈದ್ಯಕೀಯ ಸಂಘದ ಈ ಮನವಿಯನ್ನು ಪುರಸ್ಕಾರ ಮಾಡಬಾರದೆಂದು ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ವತಿಯಿಂದ ಒತ್ತಾಯ ಪೂರ್ವಕವಾಗಿ ಆಗ್ರಹಿಸುತ್ತೇವೆ. ಡಾ.ಸಿ.ಎಸ್.ಕರಮುಡಿ ರಾಜ್ಯ ಪ್ರಧಾನಕಾರ್ಯದರ್ಶಿ, ಡಾ.ಬಿ.ಎಲ್.ಕಲ್ಮಠ, ಖಜಾಂಚಿ, ಡಾ.ಶ್ರೀನಿವಾಸ ಹ್ಯಾಟಿ, ಸಂಘಟನಾ ಕಾರ್ಯದರ್ಶಿ, ಜಿಲ್ಲಾಧ್ಯಕ್ಷ ಡಾ.ಮಂಜುನಾಥ ಅಕ್ಕಿ, ಕಾರ್ಯದರ್ಶಿ ಡಾ. ಮಂಜುನಾಥ ಸಜ್ಜನ್, ಖಜಾಂಚಿ ಡಾ.ಶಿವನಗೌಡ ಪಾಟೀಲ, ರಾಜ್ಯ ಮಹಿಳಾ ಕಾರ್ಯದರ್ಶಿ ಡಾ. ಕಸ್ತೂರಿ ಕರಮುಡಿ, ಜಿಲ್ಲಾ ಮಹಿಳಾ ಅಧ್ಯಕ್ಷೆ ಡಾ. ರುದ್ರಾಕ್ಷಿ, ಡಾ. ಪ್ರಭು ನಾಗಲಾಪೂರ ಹಾಗೂ ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error