ವಿಶ್ವಸಂಸ್ಥೆಯ ಸಭೆ : ‘ಪೆಲೆಟ್ ಗನ್ ಸಂತ್ರಸ್ತೆ’ಯ ನಕಲಿ ಚಿತ್ರ ತೋರಿಸಿದ ಪಾಕ್!

ವಿಶ್ವಸಂಸ್ಥೆಯ ಸಭೆಯಲ್ಲಿ ಭಾರತದ ವಿರುದ್ಧ ಆರೋಪಿಸಲು ‘ಪೆಲೆಟ್ ಗನ್ ಸಂತ್ರಸ್ತೆ’ಯ ನಕಲಿ ಚಿತ್ರ ತೋರಿಸಿದ ಪಾಕ್!

ಹೊಸದಿಲ್ಲಿ,ಸೆ.24: ಭಾರತವು ಜಮ್ಮು-ಕಾಶ್ಮೀರದಲ್ಲಿ ದೌರ್ಜನ್ಯಗಳನ್ನು ನಡೆಸುತ್ತಿದೆ ಎಂದು ಆರೋಪಿಸುವ ಪಾಕಿಸ್ತಾನದ ಪ್ರಯತ್ನವು ಅದರ ರಾಯಭಾರಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ‘ಪೆಲೆಟ್ ಗನ್ ಸಂತ್ರಸ್ತೆ’ಯ ನಕಲಿ ಚಿತ್ರ ಪ್ರದರ್ಶಿಸುವುದರೊಂದಿಗೆ ಅದಕ್ಕೇ ತಿರುಗೇಟಾಗಿ ಪರಿಣಮಿಸಿದೆ.

ಪಾಕಿಸ್ತಾನವು ‘ಭಯೋತ್ಪಾದನೆಯ ರಫ್ತು ರಾಷ್ಟ್ರ’ವಾಗಿದೆ ಎಂದು ಟೀಕಿಸಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಶನಿವಾರ ಮಾಡಿದ್ದ ಕಟುವಾದ ಭಾಷಣಕ್ಕೆ ಉತ್ತರಿಸುತ್ತಿದ್ದ ವಿಶ್ವಸಂಸ್ಥೆಯಲ್ಲಿ ಪಾಕ್ ರಾಯಭಾರಿಯಾಗಿರುವ ಮಲೀಹಾ ಲೋಧಿ ಅವರು, ಭಾರತವು ಕಾಶ್ಮೀರದ ‘ಪ್ರಮುಖ ವಿಷಯ’ವನ್ನೇ ತನ್ನ ಭಾಷಣದಲ್ಲಿ ಕೈಬಿಟ್ಟಿದೆ ಎಂದು ಆರೋಪಿಸಿದರು.

ತನ್ನ ‘ಉತ್ತರಿಸುವ ಹಕ್ಕಿನ’ ನಡುವೆ ಅವರು ಮುಖದ ತುಂಬ ಗಾಯಗಳಾಗಿದ್ದ ಯುವತಿಯೋರ್ವಳ ಚಿತ್ರವನ್ನು ಪ್ರದರ್ಶಿಸಿ ‘ಇದು ಭಾರತೀಯ ಪ್ರಜಾಪ್ರಭುತ್ವದ ಮುಖ’ವಾಗಿದೆ ಎಂದು ಹೇಳಿದರು.

ಲೋಧಿ ಪ್ರದರ್ಶಿಸಿದ್ದ ಈ ‘ಪೆಲೆಟ್ ಗನ್ ಸಂತ್ರಸ್ತೆ’ಯ ಚಿತ್ರವು ಇಸ್ರೇಲ್ ವಾಯುಪಡೆಯ ದಾಳಿಯಲ್ಲಿ ಸಿಡಿಗುಂಡುಗಳಿಂದ ಗಾಯಗೊಂಡಿದ್ದ ರಾವಿಯಾ ಅಬೂ ಜೋಮ್ ಎಂಬ 17ರ ಹರೆಯದ ಗಾಝಾ ಯುವತಿಯದ್ದಾಗಿದೆ ಎನ್ನುವುದು ಲೋಧಿಯವರ ಭಾಷಣದ ನಂತರವಷ್ಟೇ ಬೆಳಕಿಗೆ ಬಂದಿದೆ.

ಫೋಟೊ ಜರ್ನಲಿಸ್ಟ್ ಹೈದಿ ಲೆವಿನ್ ಅವರು 2014,ಜುಲೈನಲ್ಲಿ ಗಾಝಾ ಯುದ್ಧವನ್ನು ವರದಿ ಮಾಡುತ್ತಿದ್ದಾಗ ರಾವಿಯಾಳ ಈ ಚಿತ್ರವನ್ನು ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದರು. ಈ ರಾವಿಯಾಗೆ ಭಾರತ ಅಥವಾ ಜಮ್ಮು-ಕಾಶ್ಮೀರದೊಂದಿಗೆ ಯಾವುದೇ ಸಂಬಂಧವಿಲ್ಲ.

ಈ ಹಸಿಹಸಿ ಸುಳ್ಳಿನ ಬಳಿಕವೂ ತನ್ನ ಭಾಷಣವನ್ನು ಮುಂದುವರಿಸಿದ ಲೋಧಿ, ಭಾರತವು ದಕ್ಷಿಣ ಏಷ್ಯಾದಲ್ಲಿ ‘ಭಯೋತ್ಪಾದನೆಯ ತಾಯಿಯಾಗಿದೆ’ ಎಂದು ಬಣ್ಣಿಸಿದರ ಲ್ಲದೆ, ಅದು ಪಾಕಿಸ್ತಾನದ ವಿವಿಧ ಭಾಗಗಳಲ್ಲಿ ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿದೆ ಎಂದು ಆರೋಪಿಸಿದರು.

ಕೆಳದರ್ಜೆಯ ವಿದೇಶಾಂಗ ಸೇವೆ ಅಧಿಕಾರಿಗಳು ಸಾಮಾನ್ಯವಾಗಿ ಇಂತಹ ಉತ್ತರ ಗಳನ್ನು ನೀಡುತ್ತಾರೆ, ಆದರೆ ಪಾಕಿಸ್ತಾನದ ರಾಯಭಾರಿ ಭಾರತದ ವಿರುದ್ಧ ವಾಗ್ಯುದ್ಧಕ್ಕೆ ವಿಶ್ವಸಂಸ್ಥೆಯ ವೇದಿಕೆಯನ್ನು ಬಳಸಿಕೊಂಡಿದ್ದು ಪ್ರಾಮುಖ್ಯ ಪಡೆಯುತ್ತದೆ. ಇದರೊಂದಿಗೆ ನಕಲಿ ಚಿತ್ರವನ್ನು ಪ್ರದರ್ಶಿಸಿ ಪಾಕಿಸ್ತಾನವು ಯಡವಟ್ಟು ಮಾಡಿಕೊಂಡಿದೆ. ಇದನ್ನು ಕಾಶ್ಮೀರದಲ್ಲಿಯ ಪರಿಸ್ಥಿತಿಯ ಬಗ್ಗೆ ವಿಶ್ವಸಂಸ್ಥೆಯನ್ನು ತಪ್ಪುದಾರಿಗೆಳೆಯುವ ಪ್ರಯತ್ನವೆಂದೂ ಅರ್ಥೈಸಬಹುದಾಗಿದೆ.

Please follow and like us:
error