ವಿಧಾನಸಭೆ ಕಲಾಪ ಚಿತ್ರೀಕರಣಕ್ಕೆ ದೃಶ್ಯ ಮಾಧ್ಯಮಗಳಿಗೆ ನಿರ್ಬಂದಿಸಿ ಆದೇಶ

ಬೆಂಗಳೂರು :  ಮೂರು ದಿನಗಳ ವಿಧಾನಸಭೆಯ ಚಳಿಗಾಲದ ಅಧಿವೇಶನದ ಕಲಾಪದ ನೇರ ಚಿತ್ರೀಕರಣಕ್ಕೆ ಖಾಸಗಿ ಸುದ್ದಿ ವಾಹಿನಿಗಳಿಗೆ ನಿರ್ಬಂಧ ವಿಧಿಸಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೊರಡಿಸಿರುವ ಆದೇಶ ಹಾಗೂ ರಾಜ್ಯ ಸರಕಾರದ ಜಾಣ ಮೌನಕ್ಕೆ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಸಂಸತ್ ಮಾದರಿಯಲ್ಲಿ ರಾಜ್ಯದಲ್ಲಿಯೂ ದೃಶ್ಯ ಮಾಧ್ಯಮಗಳಿಂದ ವಿಧಾನಸಭೆಯ ಕಲಾಪದ ಚಿತ್ರೀಕರಣಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಸರಕಾರಿ ಸ್ವಾಮ್ಯದ ದೂರದರ್ಶನದಿಂದ ಖಾಸಗಿ ಸುದ್ದಿ ವಾಹಿನಿಗಳು ಮುದ್ರಿತ ದೃಶ್ಯಗಳನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಖಾಸಗಿ ಸುದ್ದಿ ವಾಹಿನಿಗಳ ಕ್ಯಾಮರಗಳು ಹಾಗೂ ಮುದ್ರಣ ಮಾಧ್ಯಮಗಳ ಕ್ಯಾಮರಗಳು ವಿಧಾನಸಭೆಯ ಆವರಣದೊಳಗೆ ಪ್ರವೇಶಿಸಲು ಅವಕಾಶ ನೀಡದಂತೆ ಮಾರ್ಷಲ್‌ಗಳಿಗೆ ಸ್ಪೀಕರ್ ಕಚೇರಿಯಿಂದ ಸ್ಪಷ್ಟ ಸೂಚನೆ ನೀಡಲಾಗಿದೆ. ಅಲ್ಲದೇ, ವಿಧಾನಸಭೆ ಆವರಣದೊಳಗೆ ಕಡ್ಡಾಯವಾಗಿ ಮೊಬೈಲ್ ಫೋನ್, ಟ್ಯಾಬ್‌ಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.

ಈ ಅಧಿವೇಶನದಲ್ಲಿ ನೆರೆ ಪರಿಹಾರ ಸೇರಿದಂತೆ ಅನೇಕ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಸದನದಲ್ಲಿ ಕೋಲಾಹಲ ಎಬ್ಬಿಸಲು ನಿರ್ಧರಿಸಿವೆ. ನೆರೆ ಪರಿಹಾರ ವಿತರಣೆಯಲ್ಲಿ ಕೇಂದ್ರ ಸರಕಾರ ಮಾಡಿರುವ ವಿಳಂಬ, ರಾಜ್ಯ ಸರಕಾರದಿಂದ ನಿರೀಕ್ಷಿತ ಮಟ್ಟದ ಪರಿಹಾರ ದೊರಕದೆ, ಜನ ಸಾಮಾನ್ಯರು ಪರದಾಡುತ್ತಿರುವ ವಿಚಾರಗಳು ಸದನದಲ್ಲಿ ಚರ್ಚೆಗೊಳಪಟ್ಟು ಸರಕಾರ ಮುಜುಗರಕ್ಕೆ ಸಿಲುಕಲಿದೆ. ಅದರಲ್ಲೂ ಪ್ರಮುಖವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿರುವ ರಾಜ್ಯದ ಖಜಾನೆ ಖಾಲಿಯಾಗಿದೆ, ತಂತಿಯ ಮೇಲಿನ ನಡಿಗೆ ಹೇಳಿಕೆ, ಸಚಿವರಾದ ಜೆ.ಸಿ.ಮಾಧುಸ್ವಾಮಿ ಹಾಗೂ ಕೆ.ಎಸ್.ಈಶ್ವರಪ್ಪ ಸಂತ್ರಸ್ತರ ಬಗ್ಗೆ ಲಘುವಾಗಿ ಮಾತನಾಡಿರುವುದು, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಸುರೇಶ್ ಅಂಗಡಿ, ಸಂಸದರಾದ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ನೀಡಿರುವ ವಿವಾದಿತ ಹೇಳಿಕೆಗಳು ಸದನದಲ್ಲಿ ಪ್ರತಿಧ್ವನಿಸುವ ಸಾಧ್ಯತೆಗಳು ಹೆಚ್ಚಿವೆ.

ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳಾದರೂ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಮಾಡದೆ ಇರುವುದರಿಂದ, ನೆರೆ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ ಎಂದು ಪ್ರತಿಪಕ್ಷಗಳು ಹಾಗೂ ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗಳ ಕ್ಯಾಮರಾಗಳು ಮತ್ತು ಮುದ್ರಣ ಮಾಧ್ಯಮಗಳ ಕ್ಯಾಮರಾಗಳಿಗೆ ವಿಧಾನಸಭೆ ಪ್ರವೇಶ ನಿಷೇಧಿಸುವ ಬಗ್ಗೆ ಹಲವು ದಿನಗಳಿಂದ ಗಂಭೀರ ಚರ್ಚೆ ನಡೆಯುತ್ತಿತ್ತು. ಇತ್ತೀಚೆಗಷ್ಟೇ ಕೆಲ ಸಚಿವರು, ಸ್ಪೀಕರ್‌ರನ್ನು ಭೇಟಿ ಮಾಡಿ ಈ ಬಗ್ಗೆ ಮಾತುಕತೆ ನಡೆಸಿದ್ದರು ಎನ್ನಲಾಗುತ್ತಿದೆ.

ಲೋಕಸಭೆ ಮತ್ತು ರಾಜ್ಯಸಭೆ ಮಾದರಿಯಲ್ಲಿ ಮಾಧ್ಯಮಗಳಿಗೆ ಪ್ರವೇಶ ನೀಡುವ ಬಗ್ಗೆ ಸ್ಪೀಕರ್ ಚಿಂತನೆ ನಡೆಸಿ, ಅದನ್ನು ಈ ಅಧಿವೇಶನದಿಂದಲೇ ಅನ್ವಯಿಸುವಂತೆ ಜಾರಿಗೆ ತಂದಿದ್ದಾರೆ. ದಿನಪತ್ರಿಕೆ ಹಾಗೂ ಸುದ್ದಿ ವಾಹಿನಿಗಳ ವರದಿಗಾರರಿಗೆ ಮಾತ್ರ ವಿಧಾನಸಭೆಯೊಳಗೆ ಪ್ರವೇಶ ನೀಡಲಾಗಿದೆ. ವಾರಪತ್ರಿಕೆ, ಪಾಕ್ಷಿಕ ಹಾಗೂ ಮಾಸಿಕ ಪತ್ರಿಕೆಗಳ ಪ್ರತಿನಿಧಿಗಳಿಗೆ ವೀಕ್ಷಕರ ಗ್ಯಾಲರಿಯಲ್ಲಿ ಸ್ಥಳಾವಕಾಶ ಕಲ್ಪಿಸಲಾಗುತ್ತಿದೆ.

ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ಮಾಧ್ಯಮಗಳ ಸ್ವಾತಂತ್ರ್ಯ ಕುರಿತಾಗಿ ಮೊಸಳೆ ಕಣ್ಣೀರು ಸುರಿಸುತ್ತೆ. ಆದರೆ, ಅಧಿಕಾರಕ್ಕೆ ಬಂದರೆ ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸ ನಡೆಸುತ್ತಿದೆ. ಇದೊಂದು ನಾಚಿಕೆಗೇಡಿನ ನಿರ್ಧಾರ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

Please follow and like us:

Related posts