ಕೊಪ್ಪಳ: ಜೂನ್ 25 ರಿಂದ ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭಗೊಳ್ಳುತ್ತಿದ್ದು, ಇಂದು ಅಣುಕು ಪರೀಕ್ಷೆ ನಡೆಸಲಾಯಿತು. ಈ ವೇಳೆ ನಗರದ ಸರಕಾರಿ ಬಾಲಕರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಹೊಸ ಕಟ್ಟಡದ ಪರೀಕ್ಷಾ ಕೇಂದ್ರದಲ್ಲಿ ಕಾಣಿಸಿಕೊಂಡ ನಿಂಬೆಹಣ್ಣು ಕೆಲ ಕಾಲ ಆತಂಕ ಉಂಟು ಮಾಡಿತ್ತು.
ಕರ್ಚೀಫ್ನಲ್ಲಿ ಕಟ್ಟಿದ್ದ ನಿಂಬೆಹಣ್ಣಿನ ಗೂಡನ್ನು ಕಟ್ಟಡದ ಮೂಲೆಯೊಂದರಲ್ಲಿ ಎಸೆಯಲಾಗಿತ್ತು. ಈಚೆಗಷ್ಟೇ ಪಿಯುಸಿ ಇಂಗ್ಲಿಷ್ ಪತ್ರಿಕೆಯ ಪರೀಕ್ಷೆ ನಡೆದಾಗ ಹೊಸ ಕಟ್ಟಡವನ್ನು ಬಳಸಲಾಗಿತ್ತು. ಹೊಸ ಕಟ್ಟಡ ಬಳಸುವ ಮುನ್ನ ಪೂಜೆ ಮಾಡುವುದು ಸಹಜ. ವಾಸ್ತವವಾಗಿ ಈ ಕಟ್ಟಡ ಇನ್ನೂ ಅಧಿಕೃತವಾಗಿ ಉದ್ಘಾಟನೆಗೊಂಡಿಲ್ಲ. ಹಾಗಾಗಿ ಸಂಕ್ಷಿಪ್ತವಾಗಿ ಪೂಜೆ ಮಾಡಿರಬಹುದು. ಆ ವೇಳೆ ಹೊಸ ಕಟ್ಟಡಕ್ಕೆ ದೃಷ್ಟಿ ತಾಗದಿರಲಿ ಎಂದು ನಿಂಬೆಹಣ್ಣನ್ನು ಇಟ್ಟಿರಬಹುದು. ಅದನ್ನ ತಂದು ಮೂಲೆಯಲ್ಲಿ ಇಟ್ಟಿರಬಹುದು. ಇದು ಯಾವುದೇ ಮಾಟ-ಮಂತ್ರ ಅಲ್ಲ. ಪಾಲಕರು, ವಿದ್ಯಾರ್ಥಿಗಳು ಆತಂಕಗೊಳ್ಳಬಾರದು. ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಅವಘಡ ಸಂಭವಿಸದಂತೆ ಕ್ರಮ ಕೈಗೊಳ್ಳಲಾಗಿದೆ. ಪರೀಕ್ಷೆ ಬರೆಯಲು ಹಾಜರಾಗುವ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅನ್ಯ ವ್ಯಕ್ತಿಗಳು ಪರೀಕ್ಷಾ ಕೇಂದ್ರ ಪ್ರವೇಶಿಸದಂತೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ನ್ಯೂಟನ್ ತಿಳಿಸಿದರು.