ವಿದ್ಯಾಗಮ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಶುದ್ಧ ಭಾಷಾ ಕಲಿಕೆಗೆ ಆದ್ಯತೆ ನೀಡಿ: ಸುರಳ್ಕರ್ ವಿಕಾಸ್ ಕಿಶೋರ್

ಕೊಪ್ಪಳ,  : ವಿದ್ಯಾಗಮ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಭಾಷಾ ಕಲಿಕೆ ಹಾಗೂ ಗಣಿತದ ಬೇಸಿಕ್ ವಿಷಯಗಳನ್ನು ಕಲಿಸಲು ಆದ್ಯತೆ ನೀಡಿ ಎಂದು ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಹೇಳಿದರು.
ಮಂಗಳವಾರದAದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮನ್ವಂತರ ಮತ್ತು ವಿದ್ಯಾಗಮ ಕಾರ್ಯಕ್ರಮದ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್-19 ಹಿನ್ನೆಲೆಯಲ್ಲಿ ಆಗಸ್ಟ್ 31 ರವರೆಗೆ ಶಾಲೆಗಳು ಮುಚ್ಚಲ್ಪಡುವ ಕಾರಣ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ನಿರಂತರ ಸಂಪರ್ಕ ಮತ್ತು ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಕಡಿಮೆಯಾಗದಂತೆ ಅವರನ್ನು ಚಟುವಟಿಕೆಯಿಂದಿಡುವ ಉದ್ದೇಶದಿಂದ ಅನೌಪಚಾರಿಕ ಶಿಕ್ಷಣಕ್ಕೆ ವಿದ್ಯಾಗಮ ಕಾರ್ಯಕ್ರಮ ಅನುಷ್ಠಾನಕ್ಕೆ ಸರ್ಕಾರ ಆದೇಶ ಹೊರಡಿಸಿದ್ದು, ಜಿಲ್ಲೆಯಲ್ಲಿ ಈಗಾಗಲೇ ವಿದ್ಯಾಗಮ ಕಾರ್ಯಕ್ರಮ ಅನುಷ್ಠಾನಗೊಂಡು ಸಮರ್ಪಕವಾಗಿ ನಡೆಯುತ್ತಿದೆ. ಆದರೆ ಮ್ಕಕಳಿಗೆ ಔಪಚಾರಿಕ ಪಠ್ಯವನ್ನು ಬೋಧಿಸುವ ಮೊದಲು ಮಾತೃಭಾಷೆಯೊಂದಿಗೆ, ಇಂಗ್ಲೀಷ್, ಹಿಂದಿ ಭಾಷೆಗಳು ಮತ್ತು ಗಣಿತ ವಿಷಯದ ಕುರಿತು ಸಾಮಾನ್ಯ ಜ್ಞಾನ ಮೂಡಿಸಬೇಕು. ಭಾಷೆಯ ಆಲಿಸುವಿಕೆ, ಉಚ್ಛಾರ, ಬರವಣಿಗೆ, ಓದುವಿಕೆ ಕುರಿತು ಮಕ್ಕಳು ಪರಿಪೂರ್ಣ ಜ್ಞಾನ ಹೊಂದಬೇಕು. ಭಾಷಾ ಪಾಂಡಿತ್ಯ ಗಳಿಸಿದ ವಿದ್ಯಾರ್ಥಿ ಯಾವುದೇ ವಿಷಯದಲ್ಲಿ ಉತ್ತಮವಾಗಿ ಶಿಕ್ಷಣ ಕಲಿಯಬಲ್ಲ. ಆದ್ದರಿಂದ ಮಕ್ಕಳಿಗೆ ಭಾಷಾ ಜ್ಞಾನ ಕಲಿಸಿ. ತರಗತಿಯಲ್ಲಿ ಅತೀ ಕಡಿಮೆ ಅಂಕ ಪಡೆಯುವ ಹಾಗೂ ಶಿಕ್ಷಣದಲ್ಲಿ ಹಿಂದೆ ಉಳಿಯುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಿಶೇಷ ಸಮಯವನ್ನು ಮೀಸಲಿಟ್ಟು, ಕಲಿಕೆಯಲ್ಲಿ ಆಸಕ್ತಿ ಮೂಡಿಸಿ. ಕೋವಿಡ್ ಅವಧಿಯನ್ನು ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಸಮರ್ಪಕವಾಗಿ ಬಳಸಿ. ಭಾಷೆಗಳು ಮತ್ತು ಗಣಿತ ವಿಷಯದ ಬಗ್ಗೆ ಸಣ್ಣ ಸಣ್ಣ ಪರೀಕ್ಷೆಗಳನ್ನು ಆಯೋಜಿಸಿ ಮಕ್ಕಳ ಸಾಮರ್ಥ್ಯವನ್ನು ಹೆಚ್ಚಿಸಿ ಎಂದು ಅವರು ಸಲಹೆ ನೀಡಿದರು.
ಜಿಲ್ಲೆಯ ನಾಗರಿಕರು, ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವನ್ನು ಹೆಚ್ಚಿಸುವ ಉದ್ದೇಶದಿಂದ ಜಿಲ್ಲಾಡಳಿತದಿಂದ ಮನ್ವಂತರ ಕಾರ್ಯಕ್ರಮ ಆಯೋಜಿಸಲಾಗಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಒಟ್ಟು 5,421 ಜನರು ಸ್ಪರ್ಧೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಆಗಸ್ಟ್.25 ರಂದು ವಿಮರ್ಶೆಗಳನ್ನು ಸಲ್ಲಿಸಲು ಕೊನೆಯ ದಿನವಾಗಿದ್ದು, ಈಗಾಗಲೇ ನಿರ್ಧರಿಸಿದಂತೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಸಮಿತಿಗಳು ನಿಗದಿತ ಅವಧಿಯಲ್ಲಿ ಸ್ಫರ್ಧಿಗಳು ಕಳುಹಿಸಿದ ವಿಮರ್ಶೆಗಳನ್ನು ಪರಿಶೀಲಿಸಿ ಸಂದರ್ಶನಕ್ಕೆ ಆಯ್ಕೆ ಮಾಡಬೇಕು. ಇದಕ್ಕಾಗಿ ಸಾಹಿತ್ಯಾಸಕ್ತಿ ಇರುವ ಶಿಕ್ಷಕರು, ಕಾಲೇಜು ಪ್ರಾಧ್ಯಾಪಕರನ್ನು ಸಂಪರ್ಕಿಸಿ ಸ್ಪರ್ಧೆಯ ನಿಯಮಗಳು, ವಿಮರ್ಶೆಯ ಮಾನದಂಡಗಳನ್ನು ತಿಳಿಸಿ ಎಂದು ಅವರು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ರಾಮೇಶ್ವರ, ಯುನಿಸೆಫ್‌ನ ಜಿಲ್ಲಾ ಸಂಯೋಜಕ ಹರೀಶ್ ಜೋಗಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ದೊಡ್ಡಬಸಪ್ಪ ನೀರಲಕೇರಿ, ವಿದ್ಯಾಗಮ ಕಾರ್ಯಕ್ರಮದ ನೋಡಲ್ ಅಧಿಕಾರಿ ಶರಣಬಸನಗೌಡ ಸೇರಿದಂತೆ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error