ವಿದೇಶಿ  ಪತ್ನಿ ಇರುವವರಿಗೆ ನೊಬೆಲ್ ಪ್ರಶಸ್ತಿ ಎಂದ ಬಿಜೆಪಿಯ ರಾಹುಲ್ ಸಿನ್ಹಾ  

ಕೋಲ್ಕತ್ತಾ, : “ವಿದೇಶಿ ದ್ವಿತೀಯ ಪತ್ನಿ ಇರುವವರು ಹೆಚ್ಚಾಗಿ ನೊಬೆಲ್ ಪ್ರಶಸ್ತಿ ಪಡೆಯುತ್ತಿದ್ದಾರೆ. ಇದು ನೊಬೆಲ್ ಪ್ರಶಸ್ತಿ ಪಡೆಯುವುದಕ್ಕೆ ಇರುವ ಪದವಿ ಎಂದು ನನಗೆ ಗೊತ್ತಿಲ್ಲ” ಎಂದು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಪಕ್ಷದ ಪಶ್ಚಿಮಬಂಗಾಳದ ಘಟಕಾಧ್ಯಕ್ಷ ರಾಹುಲ್ ಸಿನ್ಹಾ ಶನಿವಾರ ಹೇಳಿದ್ದಾರೆ. ಭಾರತೀಯ ಮೂಲದ ಅಮೆರಿಕ ಪ್ರಜೆ ಅಭಿಜಿತ್ ಬ್ಯಾನರ್ಜಿ ಅವರು ನೊಬೆಲ್ ಪ್ರಶಸ್ತಿಗೆ ಆಯ್ಕೆಯಾದ ಬಳಿಕ ರಾಹುಲ್ ಸಿನ್ಹಾ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಅಭಿಜಿತ್ ಬ್ಯಾನರ್ಜಿ ಅವರ ಚಿಂತನೆ ಅಥವಾ ನ್ಯಾಯ್ ಅನ್ನು ದೇಶದ ಜನರು ತಿರಸ್ಕರಿಸಿದ್ದಾರೆ ಎಂಬ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿನ್ಹಾ, ವಿದೇಶಿ ದ್ವಿತೀಯ ಪತ್ನಿ ಇರುವ ವ್ಯಕ್ತಿ ಹೆಚ್ಚಾಗಿ ನೊಬೆಲ್ ಪ್ರಶಸ್ತಿ ಪಡೆಯುತ್ತಾರೆ ಎಂದಿದ್ದಾರೆ.

2019ರ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಮಹತ್ವಾಕಾಂಕ್ಷೆಯ ಸಾಮಾಜಿಕ ಕಲ್ಯಾಣ ಕಾರ್ಯಕ್ರಮ ನ್ಯೂಂತಮ್ ಆಯ್ ಯೋಜನೆ (ಕನಿಷ್ಠ ಆದಾಯ ಖಾತರಿ ಕಾರ್ಯಕ್ರಮ) ರೂಪಿಸಲು ಅಭಿಜಿತ್ ಬ್ಯಾನರ್ಜಿ ನೆರವು ನೀಡಿದ್ದರು. ಈ ಯೋಜನೆ ಬಡವರಲ್ಲಿ ಬಡವರಾಗಿರುವ ಶೇ. 20 ಕುಟುಂಬಗಳಿಗೆ ತಲಾ 72 ಸಾವಿರ ರೂಪಾಯಿ ಒದಗಿಸುವ ಭರವಸೆ ನೀಡಿತ್ತು. ಆದರೆ, ಕಾಂಗ್ರೆಸ್ ಈ ಚುನಾವಣೆಯಲ್ಲಿ ಸೋತಿತ್ತು.

ಪಿಯೂಷ್ ಗೋಯಲ್ ಸರಿಯಾಗಿಯೇ ಹೇಳಿದ್ದಾರೆ. ಯಾಕೆಂದರೆ, ಈ ಜನರು ಆರ್ಥಿಕತೆಗೆ ಎಡಪಂಥೀಯ ನೀತಿಯ ಬಣ್ಣ ಬಳಿಯುತ್ತಿದ್ದಾರೆ. ಆರ್ಥಿಕತೆ ಎಡಪಂಥೀಯ ಮಾರ್ಗದಲ್ಲಿ ಸಾಗಲು ಅವರು ಬಯಸುತ್ತಿದ್ದಾರೆ. ಆದರೆ, ದೇಶಕ್ಕೆ ಈಗ ಎಡಪಂಥೀಯ ಚಿಂತನೆ ಅಗತ್ಯ ಇಲ್ಲ ಎಂದು ಸಿನ್ಹಾ ಹೇಳಿದ್ದಾರೆ.

 

 

Please follow and like us:
error