ವಾಮಾಚಾರ ಶಂಕೆಯಲ್ಲಿ 107 ಜನರ ಹತ್ಯೆ

ಗುವಾಹಟಿ, ನ.30: ಅಸ್ಸಾಂನಲ್ಲಿ ವಾಮಾಚಾರ ನಡೆಸಿದ್ದಾರೆ ಎಂಬ ಶಂಕೆಯಲ್ಲಿ 2011ರ ಬಳಿಕ ಒಟ್ಟು 107 ಜನರನ್ನು ಹತ್ಯೆ ಮಾಡಲಾಗಿದೆ ಎಂದು ರಾಜ್ಯದ ಸಂಸದೀಯ ವ್ಯವಹಾರಗಳ ಸಚಿವ ಚಂದ್ರಮೋಹನ್ ಪಟೋವರಿ ವಿಧಾನಸಭೆಯಲ್ಲಿ ಶನಿವಾರ ಮಾಹಿತಿ ನೀಡಿದ್ದಾರೆ.

ವಾಮಾಚಾರ ನಡೆಸಿರುವ ಆರೋಪದಲ್ಲಿ ದ್ವೇಷ ಸಾಧನೆಗೆ ಸಂಬಂಧಿಸಿದ ಘಟನೆಯಲ್ಲಿ 2011ರಿಂದ 2016ರ ಮೇ ತಿಂಗಳಿನವರೆಗೆ 84 ಜನ ಮೃತಪಟ್ಟಿದ್ದರೆ, 2916ರಿಂದ 2019ರ ಅಕ್ಟೋಬರ್‌ವರೆಗಿನ ಅವಧಿಯಲ್ಲಿ ಮತ್ತೆ 23 ಮಂದಿಯನ್ನು ಹತ್ಯೆ ಮಾಡಲಾಗಿದೆ ಎಂದು ಕಾಂಗ್ರೆಸ್ ಶಾಸಕಿ ನಂದಿತಾ ದಾಸ್ ಅವರ ಲಿಖಿತ ಪ್ರಶ್ನೆಗೆ ಉತ್ತರಿಸುತ್ತಾ ಸಚಿವರು ತಿಳಿಸಿದ್ದಾರೆ. ರಾಜ್ಯ ಸರಕಾರ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ‘ಅಸ್ಸಾಂ ದ್ವೇಷ ಸಾಧನೆ(ನಿಷೇಧ, ತಡೆ ಮತ್ತು ರಕ್ಷಣೆ) ಕಾಯ್ದೆ 2015ನ್ನು ಪ್ರಕಟಿಸಿದ್ದು, ಮೂಢನಂಬಿಕೆಯ ವಿರುದ್ಧ ಜನಜಾಗೃತಿ ಅಭಿಯಾನವನ್ನು ರಾಜ್ಯದ್ಯಂತ ಆಯೋಜಿಸಿದೆ ಎಂದು ಸಚಿವರು ತಿಳಿಸಿದ್ದಾರೆ.

ಬೋಡೋಲ್ಯಾಂಡ್ ಪ್ರಾದೇಶಿಕ ವಲಯದ ಜಿಲ್ಲೆಗಳ ವ್ಯಾಪ್ತಿಯ ಕೊಕ್ರಜಾರ್, ಚಿರಂಗ್ ಮತ್ತು ಉದಲ್‌ಗುರಿ ಜಿಲ್ಲೆಗಳಲ್ಲಿ ಕ್ರಮವಾಗಿ 22,19 ಮತ್ತು 11 ಸಾವಿನ ಪ್ರಕರಣ ವರದಿಯಾಗಿದೆ. ಬಿಸ್ವನಾಥ್ ಜಿಲ್ಲೆಯಲ್ಲಿ 9, ಗೋಲ್‌ಪಾರದಲ್ಲಿ 7, ನಾಗೌನ್ ಮತ್ತು ತೀನ್‌ಸುಖಿಯಾದಲ್ಲಿ ತಲಾ 6, ಕರ್ಬಿ ಆಂಗ್ಲೋಂಗ್ ಮತ್ತು ಮಜುಲಿ ಜಿಲ್ಲೆಗಳಲ್ಲಿ ತಲಾ 4 ಮಂದಿಯನ್ನು ಹತ್ಯೆ ಮಾಡಲಾಗಿದೆ. 2016ರ ಮೇ ತಿಂಗಳಿನ ಬಳಿಕ ರಾಜ್ಯದಲ್ಲಿ ಹತ್ಯೆಗೊಳಗಾದ 23 ವ್ಯಕ್ತಿಗಳಲ್ಲಿ 11 ಮಹಿಳೆಯರು ಸೇರಿದ್ದಾರೆ ಎಂದು ಸಚಿವರು ವಿವರಿಸಿದ್ದಾರೆ.

Please follow and like us:
error