ವಲಸೆ ಕಾರ್ಮಿಕರಿಂದ ಬಸ್, ರೈಲು ಪ್ರಯಾಣ ದರ ಪಡೆಯಬಾರದು: ಸುಪ್ರೀಂ ಆದೇಶ

ಪ್ರಯಾಣದ ವೇಳೆ ಉಚಿತ ಆಹಾರ, ನೀರು ಒದಗಿಸಿ ಎಂದ ನ್ಯಾಯಾಲಯ

ಹೊಸದಿಲ್ಲಿ: ಲಾಕ್‍ಡೌನ್‍ನಿಂದಾಗಿ ಅತಂತ್ರರಾಗಿ ಇರುವ ಉದ್ಯೋಗವನ್ನೂ ಕಳೆದುಕೊಂಡು ತಮ್ಮ ಊರುಗಳತ್ತ ಪ್ರಯಾಣಿಸುತ್ತಿರುವ ವಲಸಿಗ ಕಾರ್ಮಿಕರ ರೈಲು ಹಾಗೂ ಬಸ್ ಪ್ರಯಾಣ ದರಗಳನ್ನು ರಾಜ್ಯ ಸರಕಾರಗಳೇ ಭರಿಸಬೇಕೆಂದು ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದೆ. ವಲಸಿಗ ಕಾರ್ಮಿಕರಿಂದ ಬಸ್ ಅಥವಾ ರೈಲು ಪ್ರಯಾಣ ದರವನ್ನು ಪಡೆಯಬಾರದು ಎಂದು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಸ್ ಕೆ ಕೌಲ್ ಹಾಗೂ ಎಂ ಆರ್ ಶಾ ಅವರ ನೇತೃತ್ವದ ಪೀಠ ಆದೇಶಿಸಿದೆ. ವಲಸಿಗ ಕಾರ್ಮಿಕರ ಪ್ರಯಾಣ ವೆಚ್ಚವನ್ನು ಅವರನ್ನು ಕಳುಹಿಸಿ ಕೊಡುವ ಹಾಗೂ ಅವರು ತೆರಳುವ ರಾಜ್ಯಗಳ ಸರಕಾರಗಳು ಅವುಗಳ ನಡುವಿನ ಹೊಂದಾಣಿಕೆಯಂತೆ ಭರಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಲಾಕ್‍ಡೌನ್‍ನಿಂದ ವಿವಿಧೆಡೆ ಅತಂತ್ರರಾಗಿರುವ ವಲಸಿಗ ಕಾರ್ಮಿಕರಿಗೆ ಆಯಾಯ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳೇ ಆಹಾರ ಒದಗಿಸಬೇಕು. ವಲಸಿಗ ಕಾರ್ಮಿಕರು ರೈಲು ಹಾಗೂ ಬಸ್ ಹತ್ತಲು ಕಾಯುವ ಸಮಯದಲ್ಲಿ ಅವರಿಗೆ ಎಲ್ಲಿ ಆಹಾರ ವಿತರಿಸಲಾಗುವುದು ಎಂಬ ಕುರಿತು ಅವರಿಗೆ ಮಾಹಿತಿ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ. ಅವರ ರೈಲು ಪ್ರಯಾಣದ ವೇಳೆ ಅವರು ಯಾವ ರಾಜ್ಯದಿಂದ ಹೊರಡುತ್ತಾರೆಯೋ ಅದೇ ರಾಜ್ಯದ ಸರಕಾರಗಳು ಅವರಿಗೆ ಊಟ ಮತ್ತು ನೀರು ಒದಗಿಸಬೇಕು. ಉಳಿದ ಹಾದಿಯಲ್ಲಿ ಅವರಿಗೆ ರೈಲ್ವೆ ಇಲಾಖೆ ಆಹಾರ ಒದಗಿಸಬೇಕು. ಬಸ್ಸುಗಳಲ್ಲಿಯೂ ವಲಸಿಗ ಕಾರ್ಮಿಕರಿಗೆ ಆಹಾರ ಮತ್ತು ನೀರು ಒದಗಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಇದೇ ವಿಚಾರದ ಕುರಿತಂತೆ ಮೇ 26ರಂದು ವಿಚಾರಣೆ ವೇಳೆ ವಲಸಿಗ ಕಾರ್ಮಿಕರ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಂಡಿದ್ದ ನ್ಯಾಯಾಲಯ, ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಕೆಲವೊಂದು ಲೋಪಗಳಾಗಿವೆ ಎಂದು ಹೇಳಿತ್ತಲ್ಲದೆ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ, ಆಹಾರ ಮತ್ತು ಆಶ್ರಯ ತಕ್ಷಣ ಒದಗಿಸಬೇಕೆಂದು ಸೂಚಿಸಿತ್ತು.

Please follow and like us:
error