ವರನಟ ಡಾ.ರಾಜ್ ಅವರ ಯೋಗಗುರು,ನಿವೃತ್ತ ಡಿಐಜಿ ಡಾ.ಹೆಚ್.ಎಫ್.ನಾಯ್ಕರ್ ನಿಧನ

ಕನ್ನಡದ ವರನಟ ಡಾ.ರಾಜ್‌ಕುಮಾರ ಅವರ ಮೆಚ್ಚಿನ ಯೋಗಗುರು , ಕೆಎಸ್‌ಆರ್‌ಪಿ ನಿವೃತ್ತ ಡಿ.ಐ.ಜಿ.ಡಾ.ಹೆಚ್.ಎಫ್.ನಾಯ್ಕರ (85) ಇಂದು ( ಮೇ.20) ರಂದು ಶೇಷಾದ್ರಿಪುರಂ ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು.ಮೃತರು ಪತ್ನಿ ,ಮೂವರು ಪುತ್ರರು ಹಾಗೂ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ.
ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಪಶುಪತಿಹಾಳ ಗ್ರಾಮದವರಾದ ಇವರು ಕಳೆದ ಸುಮಾರು ಐದು ದಶಕಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು.ಜೆಪಿನಗರದ ನಿವಾಸಿಯಾಗಿದ್ದ ಇವರು, ಕನಕಪುರ ರಸ್ತೆಯ ಬಿ.ಎಂ.ಕಾವಲ್‌ನಲ್ಲಿ ಮಹಾಯೋಗಕ್ಷೇತ್ರ ಸ್ಥಾಪಿಸಿ ವರನಟ ಡಾ.ರಾಜ್‌ಕುಮಾರ ಸೇರಿದಂತೆ ,ಅನೇಕ ರಾಜಕಾರಣಿಗಳು, ನಟರು,ನ್ಯಾಯಾಧೀಶರು, ಹಿರಿಯ ಅಧಿಕಾರಿಗಳು ಹಾಗೂ ಸಹಸ್ರಾರು ಜನರಿಗೆ ಅವರದೇ ಆದ ” ಮುತ್ತಿನ ನಡುಮನೆ” ಮಾರ್ಗದ ಮೂಲಕ ಹಠಯೋಗದ ಸಾಧನೆ ಮಾಡಿಸಿದ್ದರು.ಇಂದಿಗೂ ಪ್ರತಿ ಭಾನುವಾರ ವಾರಾಂತ್ಯದ ಯೋಗ ತರಬೇತಿ ನೀಡುತ್ತಿದ್ದರು.
ಅರ್ಥಪೂರ್ಣವಾದ ಯೋಗ,ತತ್ವಪದಗಳನ್ನು ರಚಿಸಿ,ಸ್ವತಃ ಹಾಡಲೂ ಕೂಡ ಬಲ್ಲವರಾಗಿದ್ದ ಇವರ ಪ್ರತಿಭೆಯ ಕುರಿತು, ಧಾರವಾಡ ಕರ್ನಾಟಕ ಕಾಲೇಜಿನಲ್ಲಿ ಅವರ ವಿದ್ಯಾಗುರುವಾಗಿದ್ದ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ವಿ.ಕೃ.ಗೋಕಾಕ ಅವರು ತಮ್ಮ ಅಭಿಪ್ರಾಯಗಳನ್ನು ದಾಖಲಿಸಿದ್ದರು ಹಾಗೂ ನಿರಂತರವಾಗಿ ಜಂಟಿಯಾಗಿ ಯೋಗಸಾಧನೆ ಮಾಡುತ್ತಿದ್ದರು.
#ಸಂತಾಪ: ಯೋಗಗುರು ಡಾ.ಹೆಚ್.ಎಫ್.ನಾಯ್ಕರ್ ಅವರ ನಿಧನಕ್ಕೆ ಅವರ ಹುಟ್ಟೂರು ಧಾರವಾಡ ಜಿಲ್ಲೆಯ ಪಶುಪತಿಹಾಳ ಗ್ರಾಮದಲ್ಲಿ ಅವರ ಬಂಧುಗಳು,ಶಿಷ್ಯರು ಸಭೆ ಸೇರಿ ಶ್ರದ್ಧಾಂಜಲಿ ಅರ್ಪಿಸಿ,ತೀವ್ರ ಸಂತಾಪ ಸೂಚಿಸಿದರು.
Please follow and like us:
error