ಲೌಡ್ ಸ್ಪೀಕರ್ ಎಜುಕೇಷನ್! Positive news @ corona time

ಲಾಕ್ ಡೌನ್ ಕಾರಣ ಶಾಲೆಗಳು ಮುಚ್ಚಿ ದೇಶದಲ್ಲಿ ಆನ್ ಲೈನ್ ಕಲಿಕೆ ಶುರುವಾಗಿದೆ. ನಗರ, ಪೇಟೆ ಮಕ್ಕಳು, ಉಳ್ಳವರ ಮಕ್ಕಳು ಬಹುಸುಲಭದಲ್ಲಿ ಆನ್ ಲೈನ್ ಶಿಕ್ಷಣ ಪಡೆಯಬಹುದು. ಆದರೆ, ದುಬಾರಿ ಸ್ಮಾರ್ಟ್ ಫೋನ್, ವಿದ್ಯುತ್ ಸಂಪರ್ಕದ ಗುಣಮಟ್ಟ, ದುರ್ಬಲ ಸಿಗ್ನಲ್ ಮೊದಲಾದ ಕಾರಣಗಳಿಗೆ ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಇದು ದುಬಾರಿ ಮಾತ್ರವಲ್ಲ ದುರ್ಲಭವೂ ಆಗಿದೆ. ಕೆಲವು ಹಳ್ಳಿಗಳು ಲೌಡ್ ಸ್ಪೀಕರ್ ಗಳನ್ನು ಬಳಸಿ ಈ ಸವಾಲನ್ನು ಎದುರಿಸಲು ಪ್ರಯತ್ನಿಸುತ್ತಿವೆ. ಛತ್ತೀಸ್ ಗಢದ ಬಸ್ತಾರ್ ಜಿಲ್ಲೆಯ ಭಟ್ಪಾಲ್ ಇಂತಹ ಒಂದು ಹಳ್ಳಿ.

ಭಟ್ಪಾಲ್ ನ ಗ್ರಾಮ ಪಂಚಾಯತ್ ತನ್ನ 300 ಮನೆಗಳ ಸುತ್ತಲಿನ ಆರು ಎತ್ತರದ ಕಂಬಗಳಲ್ಲಿ ಲೌಡ್ ಸ್ಪೀಕರುಗಳನ್ನು ಕಟ್ಟಿ ಅವುಗಳ ಮೂಲಕ ಮಕ್ಕಳಿಗೆ ಕಲಿಸುವ ವ್ಯವಸ್ಥೆ ಮಾಡಿದೆ. ಪಂಚಾಯತ್ ಕಟ್ಟಡದಿಂದ ಈ ಲೌಡ್ ಸ್ಪೀಕರುಗಳನ್ನು ನಿಯಂತ್ರಿಸಲಾಗುತ್ತದೆ. ನಿಗದಿತ ಸಮಯದಲ್ಲಿ ಮಕ್ಕಳು ಲೌಡ್ ಸ್ಪೀಕರುಗಳ ಸುತ್ತ ಕುಳಿತು ಶಿಕ್ಷಕರು ಮೊದಲೇ ರೆಕಾರ್ಡ್ ಮಾಡಿದ ಪಾಠಗಳನ್ನು ಕೇಳಿಸಿಕೊಂಡು ಕಲಿಯುತ್ತವೆ. ಹರ್ಯಾಣದ ಗುರುಗಾಂವ್ ನ ಶಿಕ್ಷಣ ಇಲಾಖೆ ನೂಹ್ ಗ್ರಾಮದಲ್ಲಿ ಮಸೀದಿಗಳಲ್ಲಿ ಈಗಾಗಲೇ ಇರುವ ಲೌಡ್ ಸ್ಪೀಕರ್ ಗಳನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳಲು ಅಲ್ಲಿನ ಮೌಲಿಗಳನ್ನು ಸಂಪರ್ಕಿಸಿದೆ. ಲೌಡ್ ಸ್ಪೀಕರ್ ಶಿಕ್ಷಣದ ಮೂಲಕ ಶಾಲಾ ಮಕ್ಕಳು ಮಾತ್ರವಲ್ಲದೆ ಹಳ್ಳಿಯ ಇತರ ಅನಕ್ಷರಸ್ಥ ವಯಸ್ಕರೂ ಚೂರುಪಾರು ಇಂಗ್ಲೀಷ್, ಗಣಿತ, ಸಮಾಜ, ಚರಿತ್ರೆ ಮೊದಲಾದವುಗಳನ್ನು ಕಲಿಯಲು ಸಾಧ್ಯವಾಗುವುದು ಒಂದು ಹೆಚ್ಚುವರಿ ಪ್ರಯೋಜನ.

Panju Gangolli

Please follow and like us:
error