ಲಸಿಕೆ ವಿಚಾರದಲ್ಲಿ ಸುಳ್ಳು ಮಾಹಿತಿ – ಕೇಂದ್ರ,ರಾಜ್ಯ ಸರ್ಕಾರಗಳು ಜನರಿಗೆ ದ್ರೋಹವೆಸಗಿವೆ- ಸಿದ್ದರಾಮಯ್ಯ

ಬೆಂಗಳೂರು :  ಲಸಿಕೆ ಲಭ್ಯ ಇಲ್ಲ ಎಂದಾದರೆ ಎಲ್ಲರಿಗೂ ಹಾಕುವುದಾಗಿ ಸರ್ಕಾರ ಏಕೆ ಹೇಳಬೇಕಿತ್ತು? ರಾಜ್ಯದಲ್ಲಿ ಲಸಿಕೆ ಅಭಿಯಾನಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡುವ ಅಗತ್ಯವಾದರೂ ಏನಿತ್ತು? ಲಸಿಕೆ ವಿಚಾರದಲ್ಲಿ ಸುಳ್ಳು ಮಾಹಿತಿ ನೀಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರಿಗೆ ದ್ರೋಹವೆಸಗಿವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು

18 ವರ್ಷ ಮೀರಿದ ಎಲ್ಲರಿಗೂ ಲಸಿಕೆ ಹಾಕುವುದಾಗಿ ಪ್ರಧಾನಿಯವರು ಘೋಷಣೆ ಮಾಡಿದರು. ಆದರೆ, 45, 60 ವರ್ಷ ಮೀರಿದವರಿಗೇ ಇನ್ನೂ ಸಿಗುತ್ತಿಲ್ಲ. ಮೊದಲ ಡೋಸ್ ಪಡೆದವರೇ ಎರಡನೇ ಡೋಸ್‍ಗೆ ಪರದಾಡುತ್ತಿದ್ದಾರೆ.  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮೇ ಒಂದರಂದು ಲಸಿಕೆ ಅಭಿಯಾನ ಉದ್ಘಾಟಿಸಿದರು. ಆಗ ವ್ಯಾಕ್ಸಿನ್ ಎಲ್ಲಿತ್ತು? ಮುಖ್ಯ ಕಾರ್ಯದರ್ಶಿಗಳು ಮೇ ಮೂರು ಅಥವಾ ನಾಲ್ಕನೇ ವಾರದಲ್ಲಿ ಲಸಿಕೆ ಬರುತ್ತದೆ ಎಂದಿದ್ದಾರೆ. ಆರೋಗ್ಯ ಸಚಿವರು 15 ದಿನ ಲಸಿಕೆ ಹಾಕಲು ಸಾಧ್ಯವಿಲ್ಲ ಎನ್ನುತ್ತಾರೆ. ಇದನ್ನು ಜವಾಬ್ದಾರಿಯುತ ಸರ್ಕಾರ ಎಂದು ಕರೆಯಲು ಆಗುವುದೇ?

ಜನರು ಲಸಿಕೆಗಾಗಿ ಸರತಿ ಸಾಲಿನಲ್ಲಿ ದಿನಗಟ್ಟಲೇ ಕಾಯುತ್ತಿದ್ದಾರೆ, ಮತ್ತೊಂದೆಡೆ ಆಕ್ಸಿಜನ್ ಸಿಗದೆ ಸೋಂಕಿತರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಎರಡನೇ ಅಲೆ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮಾಹಿತಿ ಇತ್ತು. ತಜ್ಞರೂ ಸಹ ವರದಿ ನೀಡಿದ್ದರು. ಆದರೆ ತಜ್ಞರ ವರದಿಯನ್ನು ಉಭಯ ಸರ್ಕಾರಗಳು ನಿರ್ಲಕ್ಷಿಸಿದ ಪರಿಣಾಮವಾಗಿ ಇಂದು ಕೆಟ್ಟ ಪರಿಸ್ಥಿತಿ ಎದುರಿಸುವಂತಾಗಿದೆ.

ರಾಜ್ಯದಲ್ಲಿ ಲಾಕ್‍ಡೌನ್ ಘೋಷಣೆಯಾಗಿದೆ. ಆದರೆ, ಕಟ್ಟುನಿಟ್ಟಾಗಿ ಮಾಡಿಲ್ಲ. ವಲಸೆ ಹೋಗಿರುವ ಕಾರ್ಮಿಕರಿಗೆ ಯಾವುದೇ ಪರಿಹಾರ ಘೋಷಣೆ ಮಾಡಿಲ್ಲ. ಅವರು ಬದುಕುವುದಾದರೂ ಹೇಗೆ? ಬಡಜನರ ಜೀವ ಉಳಿಯಬೇಕು ಎಂದರೆ ಕೂಡಲೇ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು.

18ವರ್ಷ ಮೀರಿದವರು ರಾಜ್ಯದಲ್ಲಿ 3.26 ಕೋಟಿ ಜನ ಇದ್ದಾರೆ. ಅವರಿಗೆ ಆರೂವರೆ ಕೋಟಿ ಡೋಸ್ ಲಸಿಕೆ ಬೇಕು. ಎರಡು, ಮೂರು ತಿಂಗಳಲ್ಲಿ ಎಲ್ಲರಿಗೂ ವ್ಯಾಕ್ಸಿನ್ ನೀಡಿದಾಗ ಮಾತ್ರ ಈ ರೋಗ ತಡೆಯಲು ಸಾಧ್ಯ. 3ನೇ ಅಲೆ ಕಾಡುವ ಮುನ್ನ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಲಸಿಕೆ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ

Please follow and like us:
error