ಬೆಂಗಳೂರು, ಜ. 4: ಪರಿಹಾರ ಧನ ನೀಡಲು ಲಂಚ ಕೇಳುವ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹೊರವಲಯದ ಹರಳೂರು ಮುದ್ದೇನಹಳ್ಳಿಯಲ್ಲಿನ ರಕ್ಷಣಾ, ಏರೋಸ್ಪೇಸ್ ಹೈಟೆಕ್ ಇಂಡಸ್ಟ್ರಿ ಲೇಔಟ್ ಕೈಗಾರಿಕಾ ಪ್ರದೇಶಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆಂದು ರೈತರಿಂದ ಭೂ ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಪರಿಹಾರ ನೀಡುವುದು ಸರಕಾರದ ಕರ್ತವ್ಯ. ಈ ಹಿನ್ನೆಲೆಯಲ್ಲಿ ಪರಿಹಾರ ಬಿಡುಗಡೆಗೆ ಅಧಿಕಾರಿಗಳು ಲಂಚಕ್ಕೆ ಕೈಚಾಚಿದರೆ ಅಂತಹ ಅಧಿಕಾರಿಗಳ ವಿರುದ್ಧ ದೂರು ನೀಡಿ. ತಕ್ಷಣವೇ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ತಾಲೂಕಿನ ಹರಳೂರು, ಪೋಲನಹಳ್ಳಿ, ಮುದ್ದೇನಹಳ್ಳಿ ಸೇರಿದಂತೆ ಹಲವು ಕಡೆ ದಿಢೀರ್ ಭೇಟಿ ನೀಡಿದ ಅವರು, ಅಲ್ಲಿನ ರೈತರೊಂದಿಗೆ ಮಾತುಕತೆ ನಡೆಸಿದರು. ಪರಿಹಾರ ವಿತರಣೆಯಲ್ಲಿ ಯಾವುದಾದರೂ ಲೋಪವಾಗುತ್ತಿದೆಯೇ ಎಂಬುದರ ಬಗ್ಗೆ ಮಾಹಿತಿ ಪಡೆದರು.
ನೂತನ ಕೈಗಾರಿಕಾ ಪ್ರದೇಶಕ್ಕೆಂದು ಸರಕಾರ 1,800 ಎಕರೆ ಪ್ರದೇಶವನ್ನ ಸ್ವಾಧೀನಪಡಿಸಿಕೊಂಡಿದೆ. ಇಲ್ಲಿ ಹಲವು ಬಗೆಯ ಕೈಗಾರಿಕೆಗಳನ್ನು ಸ್ಥಾಪಿಸಲಾಗುತ್ತದೆ ಎಂದ ಅವರು, ಕೈಗಾರಿಕಾ ಪ್ರದೇಶಗಳು ಅಭಿವೃದ್ಧಿ ಹೊಂದಿದರೆ ಉದ್ಯೋಗ ಸೃಷ್ಟಿಯಾಗುತ್ತದೆ. ಇಲ್ಲಿ ರೈತರ ಮಕ್ಕಳಿಗೆ ಉದ್ಯೋಗ ಲಭಿಸುತ್ತದೆ. ಕೈಗಾರಿಕೆಗೆಂದು ಭೂಮಿ ಕೊಟ್ಟಿರುವ ರೈತರ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ಪರಿಹಾರಗಳನ್ನು ಸೂಚಿಸಬೇಕು ಎಂದರು.
ರಾಜ್ಯ ಸರಕಾರ ಕೈಗಾರಿಕೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿರುವುದರಿಂದ ದೇಶ ವಿದೇಶಗಳ ಉದ್ಯಮಿಗಳು ಬಂಡವಾಳ ಹೂಡಿಕೆಗೆ ಮುಂದಾಗುತ್ತಿದ್ದಾರೆ. ಅಲ್ಲದೆ, ದೇವನಹಳ್ಳಿಯಲ್ಲಿ ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನನಿಲ್ದಾಣ ಇರುವುದರಿಂದ ಈ ಪ್ರದೇಶ ಮತ್ತಷ್ಟು ಅಭಿವೃದ್ಧಿ ಕಾಣಲಿದೆ ಎಂದು ಹೇಳಿದರು.