ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸಮಾಜಘಾತುಕ ಶಕ್ತಿ: ಸಚಿವ ಈಶ್ವರಪ್ಪ

ಶಿವಮೊಗ್ಗ : ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸಮಾಜಘಾತುಕ ಶಕ್ತಿ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಸಾರಿಗೆ ನೌಕರರ ಕೆಲವು ಬೇಡಿಕೆಗಳನ್ನು ಈಡೇರಿಸಲು ಸರಕಾರ ಸಮ್ಮತಿಸಿದೆ. ಸಂಧಾನಕ್ಕೆ ಒಪ್ಪಿಕೊಂಡವರು ಈಗ ಉಲ್ಟಾ ಹೊಡೆದಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಇರುವ ಕೆಎಸ್ಸಾರ್ಟಿಸಿ ನೌಕರರನ್ನು ದಾರಿತಪ್ಪಿಸುವ ಕೆಲಸವನ್ನು ಕೋಡಿಹಳ್ಳಿ ಚಂದ್ರಶೇಖರ್‌ ಮಾಡುತ್ತಿದ್ದಾರೆ ಎಂದು ದೂರಿದರು.

ಕೆಎಸ್ಸಾರ್ಟಿಸಿ ಮಾದರಿಯ ನಿಗಮದಂತೆ ರಾಜ್ಯದಲ್ಲಿ ಹಲವು ನಿಗಮಗಳಿವೆ. ರಾಜ್ಯದ ನಿಗಮದಲ್ಲಿ ಅಲ್ಲಿ ಸುಮಾರು 4 ಲಕ್ಷಕ್ಕೂ ಅಧಿಕ ಮಂದಿ ಕೆಲಸ ಮಾಡ್ತಾ ಇದ್ದಾರೆ. ಇವರೆಲ್ಲರನೂ ಸರಕಾರಿ ನೌಕರರನ್ನಾಗಿ ಪರಿಗಣಿಸಿದರೇ, ರಾಜ್ಯದ ಎಲ್ಲ ತೆರಿಗೆ ಹಣ ಇದಕ್ಕೆ ಸಂದಾಯ ಮಾಡಬೇಕಾಗುತ್ತದೆ. ಹೀಗಾದರೇ ರಾಜ್ಯದ ಅಭಿವೃದ್ಧಿ ಹಾಗೂ ಜನಸಾಮಾನ್ಯರಿಗೆ ಸೌಲಭ್ಯ ಕೊಡಲು ಸಾಧ್ಯವಿಲ್ಲ ಎಂದರು.

ಕೆಎಸ್ಸಾರ್ಟಿಸಿ ನೌಕರರ ಪ್ರತಿಭಟನೆಯಿಂದ ಜನ ಸಾಮಾನ್ಯರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಇದಕ್ಕೆಲ್ಲಾ ಕಾರಣ ಕೋಡಿಹಳ್ಳಿ ಚಂದ್ರಶೇಖರ್ ರಂತಹ ಎರಡು ತಲೆ ಹಾವುಗಳು. ಚಂದ್ರಶೇಖರ್ ಗೂ ಕೆಎಸ್ಸಾರ್ಟಿಸಿ ನೌಕರರಿಗೂ ಏನು ಸಂಬಂಧವೋ ಗೊತ್ತಿಲ್ಲ.ಅವರ ಹಿಂದೆ ಮತ್ತೇ ಯಾರಿದ್ದಾರೋ ಗೊತ್ತಿಲ್ಲ. ಹುಳಿ ಹಿಂಡುವ ಕೆಲಸ ಮಾಡುತ್ತಿರುವ ಚಂದ್ರಶೇಖರ್ ರಾಜ್ಯ ಹಾಗೂ ದೇಶವನ್ನು ಉದ್ಧಾರ ಮಾಡುತ್ತಾರೆಯೇ..? ಇಂತಹ ವ್ಯಕ್ತಿಯ ಬಗ್ಗೆ ರಾಜ್ಯದ ಎಲ್ಲಾ ಸಂಘಟನೆಗಳು ಹುಷಾರಾಗಿರುವಂತೆ ಮನವಿ ಮಾಡಿದರು.

ನೌಕರರು ಪ್ರತಿಭಟನೆ ನಡೆಸಿದ್ದು ತಪ್ಪು ಎಂದು ಹೇಳುವುದಿಲ್ಲ. ಅದು ಅವರ ಹಕ್ಕು. ಅವರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸರ್ಕಾರ ಸ್ಪಂದಿಸಿತ್ತು.ಇದಕ್ಕೆ ನೌಕರರು ಒಪ್ಪಿಕೊಂಡಿದ್ದರು ಎಂದು ತಿಳಿಸಿದರು.

ಜ.2, 4ರಂದು ವಿಶೇಷ ಸಭೆ:
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ಬಿಜೆಪಿ ವಿಶೇಷ ಸಮಿತಿ ಸಭೆ ಜನವರಿ 2 ಮತ್ತು 3ರಂದು ಶಿವಮೊಗ್ಗದ ಪೆಸಿಟ್ ಕಾಲೇಜಿನಲ್ಲಿ ನಡೆಯಲಿದೆ.  ಸಭೆಯಲ್ಲಿ ಕೇವಲ 150 ಮುಖಂಡರು ಮಾತ್ರ ಪಾಲ್ಗೊಳ್ಳಲ್ಲಿದ್ದಾರೆ. ಈ ಸಭೆಯಲ್ಲಿ ರಾಜಕೀಯ ವಿಷಯಗಳ ಬಗ್ಗೆ ಪ್ರಮುಖ ತೀರ್ಮಾನ ಕೈಗೊಳ್ಳಲ್ಲಿದ್ದೇವೆ.ರಾಜ್ಯದ ರಾಜಕಾರಣದಲ್ಲಿ ಈ ಸಭೆ ಹೊಸ ತಿರುವು ನೀಡಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಭಾನುಪ್ರಕಾಶ್,ಎಸ್.ಎನ್ ಚನ್ನಬಸಪ್ಪ,ಶಿವರಾಜ್,ಅಣ್ಣಪ್ಪ ಮತ್ತಿರರ ಉಪಸ್ಥಿತರಿದ್ದರು.

Please follow and like us:
error