ರೈತಹೋರಾಟದೊಂದಿಗೆಕರ್ನಾಟಕ ನಾಳೆ ಕರವೇ ಟ್ವಿಟರ್ ಅಭಿಯಾನ

ಕನ್ನಡನೆಟ್ ನ್ಯೂಸ್ :  ನಾಳೆ ಶನಿವಾರ (6-2-2021)ರಂದು ಸಂಜೆ ಐದು ಗಂಟೆಯಿಂದ ಕರ್ನಾಟಕ ರಕ್ಷಣಾ ವೇದಿಕೆ #ರೈತಹೋರಾಟದೊಂದಿಗೆಕರ್ನಾಟಕ #KarnatakaWithFarmersProtest ಎಂಬ ಟ್ವಿಟರ್ ಅಭಿಯಾನ ಹಮ್ಮಿಕೊಂಡಿದೆ. ಎಲ್ಲ ಕನ್ನಡದ ಮನಸುಗಳು ಅಭಿಯಾನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಗೌಡ ಕೋರಿದ್ದಾರೆ

 

ಇದು ಐತಿಹಾಸಿಕ ಸಂದರ್ಭ, ನಮ್ಮ ನಾಡು ರೈತರ ಜತೆ ಇದೆ ಎಂಬುದನ್ನು ಸಾರಿಸಾರಿ ಹೇಳೋಣ. ಒಕ್ಕೂಟ ಸರ್ಕಾರ ರೈತರ ಹೋರಾಟವನ್ನು ದಮನ ಮಾಡಲು, ಪ್ರತಿಭಟನಾ ಸ್ಥಳಕ್ಕೆ ವಿದ್ಯುತ್, ನೀರು ಸರಬರಾಜು ನಿಲ್ಲಿಸಿದೆ. ಹಲವುಹಂತಗಳ ಬ್ಯಾರಿಕೇಡು, ಮುಳ್ಳುಬೇಲಿಗಳ ಕೋಟೆಯನ್ನೇ ಕಟ್ಟಿ ರೈತರನ್ನು ಉಸಿರುಗಟ್ಟಿಸುವ ಕಾರ್ಯ ಮಾಡುತ್ತಿದೆ. ರೈತ ಮುಖಂಡರ ಮೇಲೆ ಸುಳ್ಳು ಕೇಸುಗಳನ್ನು ಹೂಡಿ ಬಂಧಿಸಲಾಗುತ್ತಿದೆ. ಹಲವು ರಾಜ್ಯಗಳಲ್ಲಿ ಇಂಟರ್ ನೆಟ್ ಸ್ಥಗಿತಗೊಳಿಸಿ, ಜನರ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಇದನ್ನು ನಾವು ಪ್ರತಿಭಟಿಸಬೇಕಿದೆ. ದೆಹಲಿಯಲ್ಲಿ ನಡೆಯುತ್ತಿರುವ ದೇಶದ ರೈತರ ಐತಿಹಾಸಿಕ ಹೋರಾಟಕ್ಕೆ ಈಗ ಜಗತ್ತಿನಾದ್ಯಂತ ಬೆಂಬಲ ಲಭ್ಯವಾಗಿದೆ. ಸಂದರ್ಭದಲ್ಲಿ ನಾವೆಲ್ಲರೂ ಒಂದೇ ಧ್ವನಿಯಲ್ಲಿ ರೈತರ ಹೋರಾಟವನ್ನು ಬೆಂಬಲಿಸಬೇಕಿದೆ. ಕರ್ನಾಟಕ ರಾಜ್ಯವು ದೊಡ್ಡ ಆಂದೋಲನದ ಜತೆ ಇದೆ ಎಂಬುದನ್ನು ಮತ್ತೆ ಮತ್ತೆ ಹೇಳಬೇಕಿದೆ. ದೆಹಲಿಯಲ್ಲಿ ಕೊರೆಯುವ ಚಳಿಯಲ್ಲಿ ತಿಂಗಳುಗಳಿಂದ ಪ್ರತಿಭಟನೆಯಲ್ಲಿ ತೊಡಗಿರುವ ಅನ್ನದಾತರಿಗೆ ನೈತಿಕ ಬೆಂಬಲ ವ್ಯಕ್ತಪಡಿಸಬೇಕಿದೆ.

ಕರ್ನಾಟಕ ರಕ್ಷಣಾ ವೇದಿಕೆ ಮೊದಲಿನಿಂದಲೂ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿಕೊಂಡು ಬಂದಿದೆ. ಬೆಂಗಳೂರೂ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ನಾವು ಬೃಹತ್ ಹೋರಾಟವನ್ನೂ ಹಮ್ಮಿಕೊಂಡಿದ್ದೆವು. ಮುಂದೆಯೂ ಸಹ ಹಲವಾರು ಹೋರಾಟಗಳನ್ನು ಹಮ್ಮಿಕೊಳ್ಳಲಿದೆ.

ಸಂಕಷ್ಟದ ಕಾಲದಲ್ಲಿ ನಾವೆಲ್ಲರೂ ಒಂದಾಗಿ ಸೇರಿ ರೈತರ ಹಕ್ಕೊತ್ತಾಯಗಳ ಈಡೇರಿಕೆಗಾಗಿ ಒತ್ತಾಯಿಸಬೇಕಿದೆ. ಕರವೇ ಇನ್ನಷ್ಟು ಬಲವಾಗಿ ರೈತರ ಬೆನ್ನಿಗೆ ನಿಲ್ಲಲಿದೆ. ಒಕ್ಕೂಟ ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ ಪ್ರಮಾಣಪತ್ರದಲ್ಲಿ ದಕ್ಷಿಣ ಭಾರತದ ರಾಜ್ಯಗಳು ಕೃಷಿ ಕಾಯ್ದೆಗಳ ಪರವಾಗಿ ಇವೆಯೆಂದೂ, ರಾಜ್ಯಗಳಲ್ಲಿ ಕೃಷಿ ಮಸೂದೆಗಳ ವಿರುದ್ಧ ಚಳವಳಿಯೇ ನಡೆದಿಲ್ಲವೆಂದು ಸುಳ್ಳು ಹೇಳಿದ್ದರು. ದಕ್ಷಿಣದ ರಾಜ್ಯಗಳೂ ಸಹ ಪ್ರತಿಭಟನೆ ನಡೆಸುತ್ತಿವೆ. ದೆಹಲಿ ನಮಗೆ ಹತ್ತಿರವಿದ್ದಿದ್ದರೆ ದಕ್ಷಿಣ ಭಾರತದ ಲಕ್ಷಾಂತರ ರೈತರೂ ದೆಹಲಿ ಗಡಿಯಲ್ಲಿ ನಿಂತಿರುತ್ತಿದ್ದರು.

 

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳು ಭಾರತದ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿವೆ. ಭಾರತ ಸಂವಿಧಾನದ ಪ್ರಕಾರ ಕೃಷಿ ವಿಷಯ ರಾಜ್ಯಪಟ್ಟಿಯಲ್ಲಿರುವ ವಿಷಯ. ಇದರ ಕುರಿತು ಕಾಯ್ದೆ ರೂಪಿಸುವ ಹಕ್ಕು ಒಕ್ಕೂಟ ಸರ್ಕಾರಕ್ಕೆ ಇಲ್ಲ. ಅದರ ಜತೆಗೆ ಜಾರಿಗೆ ತಂದಿರುವ ಕಾಯ್ದೆಗಳು ಕರಾಳವಾಗಿದ್ದು, ಇಡೀ ರೈತಸಂಕುಲವನ್ನು ಕಾರ್ಪೊರೇಟ್ ಶಕ್ತಿಗಳ ಗುಲಾಮರನ್ನಾಗಿಸುತ್ತವೆ. ಹೀಗಾಗಿ ಇವುಗಳನ್ನು ಒಪ್ಪುವ ಪ್ರಶ್ನೆಯೇ ಇಲ್ಲ.

ಅನ್ನದಾತ ರೈತನ ಪರವಾದ ಹೋರಾಟದಲ್ಲಿ ಕರ್ನಾಟಕ ಎಂದೂ ಹಿಂದೆ ಬಿದ್ದಿಲ್ಲ. ಇಡೀ ದೇಶದ ರೈತರ ಆಂದೋಲನವನ್ನು ಎಂಭತ್ತರ ದಶಕದಲ್ಲಿ ಕರ್ನಾಟಕವೇ ಮುನ್ನಡೆಸಿತ್ತು ಎಂಬುದನ್ನು ಮರೆಯದಿರೋಣ. ವಿಶ್ವ ರೈತ ಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರು ದೇಶದ ನಾನಾ ರೈತ ಸಂಘಟನೆಗಳ ಐಕ್ಯ ಸಮಿತಿಯನ್ನು ರಚಿಸಿ ರಾಷ್ಟ್ರಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದರು. ಅಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರಸಿದ್ಧ ರೈತರ ಹೋರಾಟಗಾರರಾಗಿದ್ದರು.

 

ರೈತವಿರೋಧಿಯೂ ಜನವಿರೋಧಿಯೂ ಆಗಿರುವ ಮೂರು ಕೃಷಿ ಮಸೂದೆಗಳನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು, ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಬಲ ನೀಡಬೇಕು ಎಂಬ ಎರಡು ಬೇಡಿಕೆಗಳು ನ್ಯಾಯಪರವಾಗಿವೆ. ಒಕ್ಕೂಟ ಸರ್ಕಾರ ಹಠಮಾರಿತನ ಮುಂದುವರೆಸದೆ ಕೂಡಲೇ ಎರಡೂ ಬೇಡಿಕೆಗಳನ್ನು ಈಡೇರಿಸಬೇಕು. ರೈತರ ಪ್ರತಿಭಟನೆಯಿಂದ ದೇಶದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಪರಿಸ್ಥಿತಿ ಶಮನವಾಗಲು ಇದೊಂದೇ ದಾರಿ.

 

ರಾಜ್ಯದ ಎಲ್ಲ ರಾಜಕೀಯ ಪಕ್ಷಗಳು, ಕನ್ನಡ, ಮಹಿಳಾ, ಪ್ರಗತಿಪರ, ರೈತ, ದಲಿತ, ಕಾರ್ಮಿಕ ಸಂಘಟನೆಗಳು, ಜನಪರ ಹೋರಾಟಗಾರರು ನಾಳಿನ ಟ್ವಿಟರ್ ಅಭಿಯಾನದಲ್ಲಿ ಪಾಲ್ಗೊಳ್ಳಬೇಕೆಂದು ಕೋರುತ್ತೇನೆ. ಇಡೀ ಕರ್ನಾಟಕವೇ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನು ಪೂರ್ಣ ಮನಸಿನಿಂದ ಬೆಂಬಲಿಸುತ್ತಿದೆ ಎಂಬ ಸಂದೇಶವನ್ನು ಸ್ಪಷ್ಟವಾಗಿ ನೀಡುವ ಉದ್ದೇಶದಿಂದ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಎಲ್ಲ ಸಹಕಾರವನ್ನು ನೀಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ..ನಾರಾಯಣಗೌಡ ಕೋರಿದ್ದಾರೆ.

Please follow and like us:
error