#ರೈತಹೋರಾಟದೊಂದಿಗೆಕರ್ನಾಟಕ ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆ ಇಂದು ಏರ್ಪಡಿಸಿದ್ದ ಟ್ವಿಟರ್ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದ್ದು, ಸಾವಿರಾರು ಕನ್ನಡಿಗರು ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಟ್ವೀಟ್ ಮಾಡುತ್ತಿದ್ದಾರೆ.
ಅಭಿಯಾನ ಪ್ರಾರಂಭಗೊಂಡ ಅರ್ಧ ಗಂಟೆಯಲ್ಲೇ #ರೈತಹೋರಾಟದೊಂದಿಗೆಕರ್ನಾಟಕ ಹ್ಯಾಶ್ ಟ್ಯಾಗ್ ನಂಬರ್ 1 ಟ್ರೆಂಡಿಂಗ್ ನಲ್ಲಿತ್ತು. ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಲ್ಲದೆ ಹಲವಾರು ಸಂಘಟನೆ, ಪಕ್ಷಗಳ ನಾಯಕರು ಚಳವಳಿಯಲ್ಲಿ ಪಾಲ್ಗೊಂಡರು.
ಸಾವಿರಾರು ಸಂಖ್ಯೆಯಲ್ಲಿ ಹ್ಯಾಶ್ ಟ್ಯಾಗ್ ನಡೆಯುತ್ತಿದ್ದಾಗ ಟ್ವಿಟರ್ ಇದ್ದಕ್ಕಿದ್ದಂತೆ ಪಟ್ಟಿಯಿಂದ #ರೈತಹೋರಾಟದೊಂದಿಗೆಕರ್ನಾಟಕ ಹ್ಯಾಶ್ ಟ್ಯಾಗ್ ಸೇರಿದಂತೆ ರೈತ ಹೋರಾಟವನ್ನು ಬೆಂಬಲಿಸುವ ಎಲ್ಲ ಹ್ಯಾಶ್ ಟ್ಯಾಗ್ ಗಳನ್ನು ಪಟ್ಟಿಯಿಂದ ತೆಗೆದು, ಆಳುವ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯಿತು. ಕಳೆದ ಮೂರು ನಾಲ್ಕು ದಿನಗಳಿಂದ ಟ್ವಿಟರ್ ರೈತಪರವಾದ ಹ್ಯಾಶ್ ಟ್ಯಾಗ್ ಗಳನ್ನು ನಿರ್ಬಂಧಿಸುವ ಕೆಲಸ ಮಾಡುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಸಾಮಾಜಿಕ ಜಾಲತಾಣಗಳಲ್ಲೂ ಆಳುವ ಸರ್ಕಾರ ಅಂಜುಬುರುಕುತನ ಪ್ರದರ್ಶಿಸಿ, ಜನರ ಧ್ವನಿಗಳನ್ನು ನಿರ್ಬಂಧಿಸುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ನಾವು ಇನ್ನು ಮುಂದೆ ಬೀದಿಯಲ್ಲೇ ನಿಂತು ಪ್ರತಿಭಟಿಸಲಿದ್ದೇವೆ. ಮುಂದಿನ ವಾರ ಕರ್ನಾಟಕ ರಕ್ಷಣಾ ವೇದಿಕೆ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಸುಮಾರು ಐವತ್ತು ಸಾವಿರ ಜನರ ರ್ಯಾಲಿ ಸಂಘಟಿಸಲಿದೆ ಎಂದು ಅವರು ಹೇಳಿದ್ದಾರೆ.
– ಕರವೇ ಸಾಮಾಜಿಕ ಜಾಲತಾಣ