fbpx

ರೂತ್ ಗ್ರಿನ್ಸ್ ಬರ್ಗ್: ಸಾವಿನಲ್ಲೂ ಪಡೆದ ಸ್ತ್ರೀ ಸಮಾನತೆ..!!

ಇಂದು ಬೆಳಿಗ್ಗೆ ಆರು ಗಂಟೆಗೆಲ್ಲ ಅಮೆರಿಕದಿಂದ ರೆಡ್ಡಿ ಪೋನ್ ಮಾಡಿ ಸುಮ್ಮನೇ ಒಂದೇ ಸಮ ಬೈಯ್ಯತೊಡಗಿದ!? ಇಲ್ಲಿನ ಬೆಳಿಗ್ಗೆ ಅಮೆರಿಕದಲ್ಲಿ ರಾತ್ರಿಯಾದ್ದರಿಂದ ಕೊಂಚ ‘ಔಷದಿ’ ಸೇವನೆಯಾಗಿರಬೇಕೆಂದು ಎದುರಾಡದೆ ಅವನ ಬೈಗುಳ ಕೇಳಿಸಿಕೊಳ್ಳತೊಡಗಿದೆ. ಅವನು ಅಷ್ಟೇನೂ ಕುಡಿದಿರಲಿಲ್ಲ “ಅಲ್ಲ ಕಣಯ್ಯ.. ರೂತ್ ಗ್ರಿನ್ಸ್ ಬರ್ಗ್ ನಂತಹ ಅದ್ಬುತ ಹೆಣ್ಣು ಮಗಳು ಸತ್ತಿದ್ದಾರೆ, ನಾಲ್ಕು ಸಾಲು ಬರೀಲಿಲ್ಲವಲ್ಲ ನೀನು.. ಹಾಳಾಗಿ ಹೋಗಿದೀಯ.. ಅಲ್ಲ.. ಥರ್ಗುಡ್ ಮಾರ್ಷಲ್ ಬಗ್ಗೆ ಬರೀತೀಯ.. ರೂತ್.. ಬಗ್ಗೆ ಬರೆಯೋಕೆ ನಿಂಗೆ ಆಗಲ್ಲ..?” ಅಂತ ರೇಗುತ್ತಲೇ ಇದ್ದ.
ರೂತ್ ಬಡರ್ ಗ್ರಿನ್ಸ್ ಬರ್ಗ್ ಎಂಬ ಜಗತ್ಪ್ರಸಿದ್ದ ಮಹಿಳಾ ಹೋರಾಟಗಾರ್ತಿ ಹಾಗೂ ಅಮೆರಿಕದ ಕ್ಯಾತ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ನಿಧನರಾದ ಬಗ್ಗೆ ಗೊತ್ತಿತ್ತು. ಇದೇ‌18ರಂದು ನಿಧನರಾದ ಈ ಹೆಣ್ಣು ಮಗಳನ್ನು ನಾಳೆ ಅಂತ್ಯಕ್ರಿಯೆ ಮಾಡುತ್ತಾರೆ. ಆಶ್ಚರ್ಯವೆಂದರೆ ತನ್ನ ಜೀವನಪೂರ್ತಿ ಮಹಿಳಾ ಹಕ್ಕುಗಳಿಗಾಗಿ ಹೋರಾಡಿದ ಈ ಹೆಣ್ಣು ಮಗಳು ಸಾವಿನಲ್ಲೂ ಸ್ತ್ರೀ ಸಮಾನತೆಯನ್ನು ಪಡೆದಿರುವುದು!? ಸುಪ್ರೀಂ ಕೋರ್ಟಿನ ಸ್ಟೇಟ್ ಕ್ಯಾಪಿಟಲ್ಲಿನ ‘ನ್ಯಾಷನಲ್ ಸ್ಟ್ಯಾಚು ಹಾಲ್’ ನಲ್ಲಿ ಈಕೆಯ ದೇಹವನ್ನು ಇಡಲಾಗಿದೆ! ಅಮೆರಿಕದ ಇತಿಹಾಸದಲ್ಲಿ ಈ ಗೌರವ ಸಿಕ್ಕ ಮೊಟ್ಟಮೊದಲ ಮಹಿಳೆ ಗ್ರಿನ್ಸ್ ಬರ್ಗ್ ಆಗಿದ್ದಾರೆ! ಈ ಹಿಂದೆ ಯಾವ ಮಹಿಳೆಯ ದೇಹ ಇಲ್ಲಿಡಲಿಕ್ಕೂ ಇದು ಸಾದ್ಯವಾಗಿರಲಿಲ್ಲ! ಅಷ್ಟೆಲ್ಲ ಪ್ರಗತಿಪರ ಎನ್ನಲಾಗುವ ಅಮೆರಿಕದಂತ ಅಮೆರಿಕದಲ್ಲಿ ಪುರುಷ ಪ್ರಧಾನ ವ್ಯವಸ್ಥೆ ಇನ್ನೂ ಎಷ್ಟು ಬಲಿಷ್ಟ ವಾಗಿದೆ ಅನ್ನಲಿಕ್ಕೆ ಇದೇ ಸಾಕ್ಷಿ. ಇದೂ ಕೂಡ ರೂತ್ ರವರ ಮಹಿಳಾ ಸಮಾನತೆಯ ಹಕ್ಕುಗಳ ಹೋರಾಟಕ್ಕೆ ಸಿಕ್ಕ ಫಲ!
ಮೂಲತಃ Jew ಆದ ರೂತ್ ಸಣ್ಣ ವಯಸ್ಸಿನಲೇ ತಂದೆತಾಯಿಯನ್ನು ಕಳಕೊಂಡು, ಅನೇಕ ಸಂಕಷ್ಟಗಳಲ್ಲಿ ಬೆಳೆದು ಕಾನೂನು ವಿದ್ಯಾರ್ಥಿಯಾಗಿ, ಅದ್ಯಾಪಕಿಯಾಗಿ, ವಕೀಲಳಾಗಿ ಮಹಿಳಾ ಹಕ್ಕುಗಳಿಗಾಗಿ ಹೋರಾಡುತ್ತಲೇ ಬಂದವರು. ಇವರ ಮಹಿಳಾ ಕಾಳಜಿ ಮತ್ತು ದಕ್ಷತೆಯನ್ನು ಕಂಡ ಆಗಿನ ಅಮೆರಿಕ ಅದ್ಯಕ್ಷ ಬಿಲ್ ಕ್ಲಿಂಟನ್ ಈಕೆಯನ್ನು ಅಮೆರಿಕದ‌ ಸುಪ್ರೀಂ ಕೋರ್ಟಿಗೆ ನೇಮಿಸುತ್ತಾರೆ. ನ್ಯಾಯಮೂರ್ತಿಯಾಗಿಯೂ ಈಕೆ ಅನೇಕ ತೀರ್ಪುಗಳಲ್ಲಿ ನೊಂದ ಮಹಿಳೆಯರಿಗೆ ನ್ಯಾಯ ಒದಗಿಸುತ್ತಾಳೆ. ಈ ತೀರ್ಪುಗಳು ಕೂಡ ಚರಿತ್ರಾರ್ಹ! ಅಮೆರಿಕದ ಮೊಟ್ಟ ಮೊದಲ ಸುಪ್ರೀಂ ಕೋರ್ಟಿನ ಕರಿಯ ನ್ಯಾಯಮೂರ್ತಿಯಾಗಿದ್ದ ಥರ್ಗುಡ್ ಮಾರ್ಷಲ್ ರಂತೆಯೇ ಮಹಿಳಾ ನ್ಯಾಯಮೂರ್ತಿಯಾಗಿ ಈಕೆಯ ಸಾಧನೆಗಳದು ದೊಡ್ಡ ಪಟ್ಟಿಯೇ ಇದೆ!
ಈಕೆ ಬಿಡುವಿಲ್ಲದ ನ್ಯಾಯಮೂರ್ತಿಯಾಗಿ ಕೆಲಸ ಮಾಡುತ್ತಲೇ ಪ್ಯಾಂಕ್ರಿಯಾಸ್ ಕ್ಯಾನ್ಸರಿಗೆ ತುತ್ತಾಗಿದ್ದಾರೆ. ನಾಳೆಯೇ ಈಕೆಯ ಅಂತ್ಯಕ್ರಿಯೆ..
ರೂತ್ ಬಗೆಗಿನ, ನನಗೆ ನೆನಪಿರುವ ಒಂದು ಸಣ್ಣ ಘಟನೆಯನ್ನು ಹೇಳಿ ಮುಗಿಸುತ್ತೇನೆ…
ರೂತ್ ಅವರು ಅತ್ಯಂತ busy justice ಆಗಿ ಸುಪ್ರೀಂ ಕೋರ್ಟಿನಲ್ಲಿ ಕುಳಿತು ಕೆಲಸ ಮಾಡುತ್ತಿರುತ್ತಾರೆ. ಅವರ ಮಗುವಿನ ಶಾಲೆಯಿಂದ ಸತತವಾಗಿ ಈಕೆಗೆ ಪೋನ್ ಬರುತ್ತಲೇ ಇರುತ್ತೆ. ರೂತ್ ಶಾಲೆಯವರಿಗೆ ಹೇಳುತ್ತಾಳೆ “ನೋಡಿ ನನ್ನ ಮಗುವಿಗೆ ತಂದೆ ತಾಯಿ ಇಬ್ಬರೂ ಇದ್ದೇವೆ.. ಬೇಕಿದ್ದರೆ ನಿಮ್ಮ ದಾಖಲೆಗಳಲ್ಲಿ ನೋಡಿ.. ತಾಯಿಯಾದ ನನಗೊಬ್ಬರಿಗೇ ನೀವು ಸತತವಾಗಿ ಏಕೆ ಪೋನ್ ಮಾಡುತ್ತೀರಿ? ಮಗುವಿನ ತಂದೆಗೆ ಯಾಕೆ ಮಾಡಲ್ಲ..? ನಿಮ್ಮ ಮನಸ್ಸಿನಲ್ಲಿ ತಾಯಿ ಸದಾ ಫ್ರೀ ಇರುತ್ತಾಳೆ.. ತಂದೆ ಮಾತ್ರ ಬ್ಯುಸಿ ಎಂಬುದು ನಿಮ್ಮ ತಲೆಯಲ್ಲಿ ಸಿದ್ದವಾಗಿ ಇರುತ್ತದೆಯಲ್ಲವೆ?‌” ಎಂದಾಗ ಶಾಲೆಯವರಿಗೆ ತಮ್ಮ ಸಿದ್ದ ಚಿಂತನೆಯ ತಪ್ಪಿನ ಅರಿವಾಗುತ್ತದೆ..
– ಸಿ.ಎಸ್.ದ್ವಾರಕಾನಾಥ್
Please follow and like us:
error
error: Content is protected !!