ರಾಷ್ಟ್ರೀಯ ಪೌರತ್ವ ಕಾಯ್ದೆ ರಾಜ್ಯಕ್ಕೂ ಅನ್ವಯ: ಗೃಹ ಸಚಿವ ಬೊಮ್ಮಾಯಿ

ಬೆಂಗಳೂರು, ಡಿ.17: ರಾಷ್ಟ್ರೀಯ ಪೌರತ್ವ ಕಾಯ್ದೆ(ಸಿಎಎ) ಸಂಸತ್ತಿನ ಉಭಯ ಸದನಗಳಲ್ಲಿ ಅನುಮೋದನೆಗೊಂಡಿದೆ. ಇದಕ್ಕೆ ರಾಷ್ಟ್ರಪತಿಯ ಅಂಕಿತವೂ ಆಗಿದೆ. ರಾಷ್ಟ್ರದ ಕಾನೂನು ನಮ್ಮ ರಾಜ್ಯಕ್ಕೂ ಅನ್ವಯಿಸುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಪೌರತ್ವ ಕಾಯ್ದೆ ಅನುಷ್ಠಾನ ಕುರಿತು ಕೆಲವು ರಾಜ್ಯಗಳು ರಾಜಕೀಯ ಕಾರಣಕ್ಕೆ ಬೇರೆ ಬೇರೆ ನಿಲುವು ತೆಗೆದುಕೊಂಡಿವೆ. ಆದರೆ, ನಾವು ಸಂವಿಧಾನಾತ್ಮಕ ನಿಲುವು ತೆಗೆದುಕೊಳ್ಳುತ್ತೇವೆ ಎಂದರು.

ಕರ್ನಾಟಕ ಶಾಂತಿ ಪ್ರಿಯ ರಾಜ್ಯವಾಗಿದೆ. ಅಸ್ಸಾಂ, ದಿಲ್ಲಿ, ಉತ್ತರಪ್ರದೇಶಗಳಲ್ಲಿ ಇರುವಂತಹ ವಾತಾವರಣ ಇಲ್ಲಿ ಇಲ್ಲ. ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಈಗಾಗಲೇ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಜಲಸಂಪನ್ಮೂಲ ಖಾತೆಗಾಗಿ ಬೇಡಿಕೆ ಇಟ್ಟಿಲ್ಲ: ಜಲಸಂಪನ್ಮೂಲ ಖಾತೆ ತನಗೆ ನೀಡಬೇಕೆಂದು ನಾನು ಮುಖ್ಯಮಂತ್ರಿ ಯಡಿಯೂರಪ್ಪ ಬಳಿ ಯಾವುದೇ ಬೇಡಿಕೆ ಇಟ್ಟಿಲ್ಲ. ಊಹಾಪೋಹದ ಪ್ರಶ್ನೆಗಳಿಗೆ ನಾನು ಉತ್ತರಿಸುವುದಾದರೂ ಹೇಗೆ? ಈಗ ನನಗೆ ನೀಡಲಾಗಿರುವ ಖಾತೆಯನ್ನು ಸಹ ನಾನು ಕೇಳಿರಲಿಲ್ಲ. ಜಲಸಂಪನ್ಮೂಲ ಖಾತೆಗಾಗಿ ನಾನು ಪಟ್ಟು ಹಿಡಿದ್ದಿದ್ದೇನೆ ಅನ್ನೋದು ಕೇವಲ ಮಾಧ್ಯಮಗಳ ಸೃಷ್ಟಿ ಎಂದು ಅವರು ಸ್ಪಷ್ಟನೆ ನೀಡಿದರು.

Please follow and like us:
error