ರಾಷ್ಟ್ರಪತಿ ಭೇಟಿಗೆ ಕಾಲಾವಕಾಶ ಕೋರಿ ಸಿದ್ದರಾಮಯ್ಯ ಪತ್ರ

ಅಮಿತ್ ಶಾ-ಬಿಎಸ್‌ವೈ ವಿರುದ್ಧ ದೂರು

ಬೆಂಗಳೂರು, ನ.10: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಪತನಗೊಳಿಸಿ, ಬಿಜೆಪಿ ಸರಕಾರವನ್ನು ಜನಾದೇಶ ಹಾಗೂ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ರಚಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ತಮ್ಮನ್ನು ಭೇಟಿ ಮಾಡಿ ದೂರು ನೀಡಲು ಕಾಲಾವಕಾಶ ನಿಗದಿ ಮಾಡಬೇಕು ಎಂದು ರಾಷ್ಟ್ರಪತಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನ.8ರಂದು ಸುದೀರ್ಘ ಪತ್ರ ಬರೆದಿದ್ದಾರೆ.

ಪತ್ರದ ಸಾರಾಂಶ: ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ನಮ್ಮ ಪಕ್ಷ ಹಾಗೂ ಜೆಡಿಎಸ್ ಸಮ್ಮಿಶ್ರ ಸರಕಾರ ರಚನೆ ಮಾಡಿದವು. ಸರಕಾರ ಸುಗಮವಾಗಿ ಆಡಳಿತ ನಡೆಸಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿತ್ತು. ಆದರೆ, 2019ರ ಲೋಕಸಭಾ ಚುನಾವಣೆ ಬಳಿಕ ಬಿಜೆಪಿ ನಾಯಕತ್ವದ ಕುತಂತ್ರದಿಂದಾಗಿ ಸಮ್ಮಿಶ್ರ ಸರಕಾರದ ಪಾಲುದಾರ ಪಕ್ಷಗಳ 17 ಮಂದಿ ಶಾಸಕರು, ಸ್ಪೀಕರ್‌ಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಇವರೆಲ್ಲರೂ ಮುಂಬೈನಲ್ಲಿನ ಪಂಚತಾರಾ ಹೊಟೇಲ್‌ನಲ್ಲಿ ಸುಮಾರು ಎರಡೂವರೆ ತಿಂಗಳು ತಂಗಿದ್ದರು’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಈ ಅವಧಿಯಲ್ಲಿ ಆ ಶಾಸಕರು ತಮ್ಮ ಕುಟುಂಬ ಸದಸ್ಯರನ್ನು ಭೇಟಿಯಾಗಿಲ್ಲ. ಬಹುಮುಖ್ಯವಾದ ಬಜೆಟ್ ಅಧಿವೇಶನದಲ್ಲಿ ಪಾಲ್ಗೊಂಡಿಲ್ಲ. ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರಗಳಿಗೂ ಭೇಟಿ ನೀಡಿಲ್ಲ. ಉಭಯ ಪಕ್ಷಗಳ ನಾಯಕರು ನೀಡಿದ ದೂರಿನ ಆಧಾರದಲ್ಲಿ ಹಿಂದಿನ ಸ್ಪೀಕರ್, ಸಂವಿಧಾನದ ಶೆಡ್ಯೂಲ್ಡ್ 10ರಡಿಯಲ್ಲಿ ಈ ಮೇಲ್ಕಂಡ 17 ಶಾಸಕರನ್ನು ಅನರ್ಹಗೊಳಿಸಿದರು’ ಎಂದು ಅವರು ತಿಳಿಸಿದ್ದಾರೆ.

ಸ್ಪೀಕರ್ ತೀರ್ಮಾನ ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ತೀರ್ಪು ಕಾಯ್ದಿರಿಸಲಾಗಿದೆ. ಈ ಹಂತದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಕಳೆದ ಅಕ್ಟೋಬರ್ 27ರಂದು ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ 17 ಶಾಸಕರ ತ್ಯಾಗ ಹಾಗೂ ರಾಜೀನಾಮೆಯಿಂದಾಗಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದೆ ಎಂಬ ಸತ್ಯವನ್ನು ಬಹಿರಂಗಪಡಿಸಿದ್ದಾರೆ. 17 ಶಾಸಕರ ರಾಜೀನಾಮೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ ಹಾಗೂ ಮಾರ್ಗದರ್ಶನದಲ್ಲಿ ಕೊಡಿಸಲಾಗಿದೆ. ಅಲ್ಲದೇ, ಈ ಅನರ್ಹ ಶಾಸಕರನ್ನು ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸದೆ ಎರಡೂವರೆ ತಿಂಗಳು ಮುಂಬೈನ ಪಂಚತಾರಾ ಹೊಟೇಲ್ ಹಾಗೂ ಲೋನಾವಾಲದಲ್ಲಿನ ರೆಸಾರ್ಟ್‌ನಲ್ಲಿ ಇರಿಸಲಾಗಿತ್ತು ಎಂಬುದನ್ನು ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಬಿಜೆಪಿಯು ಸಿಬಿಐ, ಐಟಿ, ಈ.ಡಿಯನ್ನು ದುರ್ಬಳಕೆ ಮಾಡಿಕೊಂಡಿದೆ ಎಂಬುದಕ್ಕೆ ಯಡಿಯೂರಪ್ಪ ನೀಡಿರುವ ಹೇಳಿಕೆಯೇ ಪುಷ್ಠೀಕರಿಸುತ್ತದೆ. ಬಿಜೆಪಿ ಸರಕಾರದ ರಚನೆಯು ರಾಜ್ಯದ ಜನಾದೇಶ ಹಾಗೂ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಕೇವಲ ಅಧಿಕಾರಕ್ಕಾಗಿ ಬಿಜೆಪಿಯು ಕಾನೂನು, ನಿಯಮಗಳನ್ನು ಗಾಳಿಗೆ ತೂರಿ, ಪ್ರಜಾಪ್ರಭುತ್ವದ ಮೌಲ್ಯಗಳ ಕಗ್ಗೊಲೆ ಮಾಡಿದೆ. ರಾಜ್ಯದಲ್ಲಿ ಸಾಂವಿಧಾನಿಕ ಯಂತ್ರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಸಂವಿಧಾನ ಬಾಹಿರ ಚಟುವಟಿಕೆಗಳನ್ನು ನಡೆಸಿರುವ ಕೇಂದ್ರ ಗೃಹ ಸಚಿವ ಹಾಗೂ ರಾಜ್ಯದ ಮುಖ್ಯಮಂತ್ರಿ ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇವರನ್ನು ಕೂಡಲೇ ಅವರ ಸ್ಥಾನಗಳಿಂದ ಕೆಳಗಿಳಿಸುವ ಸಂಬಂಧ ದೇಶದ ಸಾಂವಿಧಾನಿಕ ಮುಖ್ಯಸ್ಥರಾಗಿರುವ ತಾವು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ನಾನು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್, ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರು, ಹಾಲಿ ಹಾಗೂ ಮಾಜಿ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಎಐಸಿಸಿ ಮುಖಂಡರನ್ನು ಒಳಗೊಂಡ ನಿಯೋಗ ತಮ್ಮನ್ನು ಭೇಟಿಯಾಗಲು ಉದ್ದೇಶಿಸಿದ್ದು, ಆದಷ್ಟು ಶೀಘ್ರದಲ್ಲೆ ನಾವು ನಮಗೆ ಭೇಟಿಗೆ ಕಾಲಾವಕಾಶ ನಿಗದಿ ಮಾಡಿಕೊಡಿ ಎಂದು ಅವರು ಕೋರಿದ್ದಾರೆ.

Please follow and like us:
error