ರಾಷ್ಟ್ರದಲ್ಲಿ ಒಂದೇ ದಿನ 1000 ಕೊರೋನಾ ವೈರಸ್ ಸೋಂಕು ಪ್ರಕರಣ ಪತ್ತೆ !

ಹೊಸದಿಲ್ಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 1000 ಕೊರೋನ ವೈರಸ್ ಸೋಂಕು ಪ್ರಕರಣ ದಾಖಲಾಗಿರುವುದನ್ನು ಆರೋಗ್ಯ ಸಚಿವಾಲಯ ದೃಢಪಡಿಸಿದೆ. ಇದರಿಂದಾಗಿ ಕಳೆದ ಮೂರು ದಿನಗಳಲ್ಲಿ ಭಾರತದಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವುದು ಸ್ಪಷ್ಟವಾದಂತಾಗಿದೆ.

ದೆಹಲಿಯಲ್ಲಿ ಒಂದೇ ದಿನ ಐದು ಸಾವು ಸಂಭವಿಸಿದ್ದು, ಹೊಸ ಪ್ರಕರಣಗಳ ಸಂಖ್ಯೆ 166 ಆಗಿದೆ. ಇದುವರೆಗೆ ದೆಹಲಿಯಲ್ಲಿ 1069 ಪ್ರಕರಣಗಳು ಪತ್ತೆಯಾದಂತಾಗಿವೆ. ಮುಂಬೈ ಬಳಿಕ ನಾಲ್ಕಂಕಿ ತಲುಪಿದ ಮೊದಲ ನಗರ ಎನಿಸಿಕೊಂಡಿದೆ. ಐಸಿಎಂಆರ್ ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ 1.79 ಲಕ್ಷ ಮಂದಿಯನ್ನು ತಪಾಸಣೆಗೆ ಗುರಿಪಡಿಸಲಾಗಿದ್ದು, ಈ ಪೈಕಿ 4.3% ಪಾಸಿಟಿವ್ ಪ್ರಕರಣಗಳು.

ಮಹಾರಾಷ್ಟ್ರದಲ್ಲಿ 187, ತಮಿಳುನಾಡಿನಲ್ಲಿ 58, ರಾಜಸ್ಥಾನದಲ್ಲಿ 139, ಮಧ್ಯಪ್ರದೇಶದಲ್ಲಿ 55, ತೆಲಂಗಾಣದಲ್ಲಿ 25 ಹಾಗೂ ಭಾರತದ ಇತರೆಡೆಗಳಲ್ಲಿ ಒಟ್ಟು 195 ಪ್ರಕರಣಗಳು ಶನಿವಾರ ಪತ್ತೆಯಾಗಿವೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 8426ಕ್ಕೇರಿದೆ. ಈ ಪೈಕಿ 592 ಮಂದಿ ಚೇತರಿಸಿಕೊಂಡಿದ್ದು, 289 ಮಂದಿ ಮೃತಪಟ್ಟಿದ್ದಾರೆ.

ಮಹಾರಾಷ್ಟ್ರದಲ್ಲಿ ಗರಿಷ್ಠ (127) ಸಾವು ಸಂಭವಿಸಿದ್ದು, ದೆಹಲಿ (19), ತಮಿಳುನಾಡು (10), ರಾಜಸ್ಥಾನ (9), ಮಧ್ಯಪ್ರದೇಶ (40) ಮತ್ತು ತೆಲಂಗಾಣ (14)ದಲ್ಲಿ ಹೆಚ್ಚು ಸಾವು ಸಂಭವಿಸಿದೆ. ದೇಶದ ಇತರೆಡೆಗಳಲ್ಲಿ 72 ಮಂದಿ ಬಲಿಯಾಗಿದ್ದಾರೆ.

ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರ್‌ವಾಲ್ ಅವರ ಪ್ರಕಾರ ಶನಿವಾರ 1035 ಪ್ರಕರಣಗಳು ಪತ್ತೆಯಾಗಿದ್ದು, 40 ಸಾವು ಸಂಭವಿಸಿದೆ. ಇದರೊಂದಿಗೆ ದೇಶದಲ್ಲಿ 7447 ಪ್ರಕರಣಗಳನ್ನು ಆರೋಗ್ಯ ಸಚಿವಾಲಯ ದೃಢಪಡಿಸಿದಂತಾಗಿದ್ದು, 239 ಸಾವು ಸಂಭವಿಸಿದೆ ಎಂದೂ ಹೇಳಿದೆ. ಆದರೆ ರಾಜ್ಯಗಳಿಂದ ಸಂಗ್ರಹಿಸಿದ ಅಂಕಿ ಅಂಶಗಳ ಪ್ರಕಾರ ಒಟ್ಟು ಸೋಂಕಿತರ ಸಂಖ್ಯೆ 8426 ಹಾಗೂ ಸಾವಿನ ಸಂಖ್ಯೆ 289.

Please follow and like us:
error