ರಾಷ್ಟ್ರಗೀತೆ ಹಾಡಿ ಹೊಸ ವರ್ಷ ಸ್ವಾಗತಿಸಿದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಧರಣಿ ನಿರತರು

ಹೊಸದಿಲ್ಲಿ : ದಿಲ್ಲಿಯ ಥರಗುಟ್ಟುವ ಚಳಿಯ ನಡುವೆಯೇ ಕಳೆದೆರಡು ವಾರಗಳಿಂದಲೂ ಹೆಚ್ಚಿನ ಸಮಯದಿಂದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ರಾತ್ರಿ ಹಗಲೆನ್ನದೆ ಧರಣಿ ಕುಳಿತಿರುವ ದಕ್ಷಿಣ ದಿಲ್ಲಿಯ ಶಹೀನ್ ಬಾಗ್ ಪ್ರದೇಶದ ನೂರಾರು ನಿವಾಸಿಗಳು ಹೊಸ ವರ್ಷವನ್ನು ರಾಷ್ಟ್ರಗೀತೆ ಹಾಡುವುದರೊಂದಿಗೆ ಸ್ವಾಗತಿಸಿದರು.

ಗಂಟೆ ಹನ್ನೆರಡು ಬಾರಿಸುತ್ತಿದ್ದಂತೆ ಎಲ್ಲರೂ ಎದ್ದು ನಿಂತು ರಾಷ್ಟ್ರಗೀತೆಯನ್ನು ಹಾಡಿದರು ಹಾಗೂ ತಮ್ಮ ಹೋರಾಟ ಮುಂದುವರಿ ಸಿಕೊಂಡು ಹೋಗುವ ದೃಢ ಇಚ್ಛೆಯನ್ನು ಪ್ರಕಟಪಡಿಸಿದರು.

ಹೆಚ್ಚಿನವರು ಮಹಿಳೆಯರಾಗಿರುವ ಪ್ರತಿಭಟನಾಕಾರರು ಟೆಂಟುಗಳಲ್ಲಿ ದಪ್ಪನೆಯ ಬ್ಲಾಂಕೆಟ್ ಗಳನ್ನು ಮೈಗೆ ಹೊದ್ದುಕೊಂಡು ಎದೆಗುಂದದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲ ಮಹಿಳೆಯರು ತಮ್ಮ ಮಕ್ಕಳೊಂದಿಗೆ ಅಲ್ಲಿ ಧರಣಿ ಕುಳಿದಿದ್ದಾರೆ.

ಪ್ರತಿಭಟನಾಕಾರರಿಗೆ ಸ್ಥಳೀಯರು ಆಹಾರ ಸರಬರಾಜು ಮಾಡುತ್ತಿದ್ದರೆ, ಬ್ಲಾಂಕೆಟ್‍ಗಳು ಹಾಗೂ ಇತರ ಅಗತ್ಯತೆಗಳಿಗೆ ಟ್ವಿಟ್ಟರ್ ಅಭಿಯಾನದ ಮೂಲಕ ಹಣ ಸಂಗ್ರಹಿಸಲಾಗುತ್ತಿದೆ.

Please follow and like us:
error