ರಾಷ್ಟ್ರಗೀತೆ ಪ್ರಸಾರದ ಸಂದರ್ಭ ಎದ್ದುನಿಲ್ಲಬೇಕಿಲ್ಲ: ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಅ.23: ದೇಶದಾದ್ಯಂತ ಸಿನೆಮಾ ಮಂದಿರಗಳಲ್ಲಿ ರಾಷ್ಟ್ರಗೀತೆಯ ಪ್ರಸಾರದ ಸಂದರ್ಭ, ತಮ್ಮ ರಾಷ್ಟ್ರಭಕ್ತಿ ಸಮರ್ಥಿಸಿಕೊಳ್ಳಲು ಪ್ರೇಕ್ಷಕರು ಎದ್ದುನಿಂತು ಗೌರವ ಸೂಚಿಸಬೇಕಿಲ್ಲ ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.

ಅಲ್ಲದೆ ಸಿನೆಮ ಮಂದಿರದಲ್ಲಿ ರಾಷ್ಟ್ರಗೀತೆ ನುಡಿಸುವ ಸಂದರ್ಭ ಎದ್ದುನಿಲ್ಲದ ವ್ಯಕ್ತಿ ಕಡಿಮೆ ರಾಷ್ಟ್ರಭಕ್ತಿ ಹೊಂದಿದ್ದಾನೆ ಎಂದು ಪರಿಗಣಿಸುವಂತಿಲ್ಲ ಎಂದೂ ಸುಪ್ರೀಂಕೋರ್ಟ್ ತಿಳಿಸಿದೆ. ಸಮಾಜಕ್ಕೆ ನೈತಿಕ ಪೊಲೀಸರ ಅಗತ್ಯವಿಲ್ಲ ಎಂದು ಹೇಳಿರುವ ನ್ಯಾಯಪೀಠ, ಮುಂದೊಂದು ದಿನ ಸಿನೆಮ ಮಂದಿರಕ್ಕೆ ಟಿಶರ್ಟ್ ಅಥವಾ ಶಾರ್ಟ್ಸ್ ಧರಿಸಿ ಹೋದರೆ ರಾಷ್ಟ್ರಗೀತೆಗೆ ಅಪಮಾನವಾದಂತೆ ಎಂದು ಸರಕಾರ ಹೇಳಲೂ ಬಹುದು ಎಂದು ತಿಳಿಸಿದೆ.

ಸಿನೆಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಪ್ರಸಾರ ಕಡ್ಡಾಯಗೊಳಿಸಿರುವ ತನ್ನ ಈ ಹಿಂದಿನ ಆದೇಶ ಪರಿಣಾಮಕಾರಿಯಾಗಿದೆಯೇ ಎಂಬುದನ್ನು ಕೇಂದ್ರ ಸರಕಾರ ಗಮನಿಸಬೇಕಿದೆ ಎಂದು ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರ, ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರಿದ್ದ ನ್ಯಾಯಪೀಠ ತಿಳಿಸಿತು.

ಎಲ್ಲಾ ಸಿನೆಮಮಂದಿರಗಳಲ್ಲೂ ಸಿನೆಮ ಪ್ರದರ್ಶನಕ್ಕೆ ಮೊದಲು ರಾಷ್ಟ್ರಗೀತೆ ಪ್ರಸಾರ ಕಡ್ಡಾಯಗೊಳಿಸಬೇಕು ಎಂದು ಕೋರಿ ಶ್ಯಾಮ್‌ನಾರಾಯಣ್ ಚೌಕ್ಸೆ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆ ಸಂದರ್ಭ ನ್ಯಾಯಪೀಠ ಈ ಸೂಚನೆ ನೀಡಿದೆ. 

ಜನರು ಮನರಂಜನೆ ಪಡೆಯಲು ಸಿನೆಮ ಮಂದಿರಕ್ಕೆ ಹೋಗುತ್ತಾರೆ. ಸಮಾಜಕ್ಕೆ ಮನರಂಜನೆಯ ಅಗತ್ಯವಿದೆ. ನಮ್ಮ ಹೆಗಲ ಮೇಲೆ ಬಂದೂಕ ಇಟ್ಟು ನೀವು ಗುಂಡು ಹೊಡೆಯಲು ನಾವು ಆಸ್ಪದ ನೀಡುವುದಿಲ್ಲ. ರಾಷ್ಟ್ರಭಕ್ತಿ ಸಮರ್ಥಿಸಿಕೊಳ್ಳಲು ಜನ ಸಿನೆಮ ಮಂದಿರದಲ್ಲಿ ರಾಷ್ಟ್ರಗೀತೆ ಪ್ರಸಾರದ ಸಂದರ್ಭ ಎದ್ದುನಿಲ್ಲುವ ಅಗತ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿತು.

ಅಪೇಕ್ಷೆ ಹಾಗೂ ಕಡ್ಡಾಯಕ್ಕೆ ವ್ಯತ್ಯಾಸವಿದೆ. ಜನತೆ ತಮ್ಮಾಂದಿಗೆ ರಾಷ್ಟ್ರಭಕ್ತಿಯನ್ನು ಒಯ್ಯಬೇಕು ಎಂದು ಹೇಳುವಂತಿಲ್ಲ ಹಾಗೂ ಆದೇಶದ ಮೂಲಕ ದೇಶಭಕ್ತಿಯನ್ನು ಯಾರಲ್ಲೂ ಮೂಡಿಸಲಾಗದು ಎಂದು ನ್ಯಾಯಪೀಠ ತಿಳಿಸಿತು.

ಭಾರತವು ವಿವಿಧ ಜಾತಿ, ಸಂಸ್ಕೃತಿಯ ದೇಶವಾಗಿದ್ದು ಏಕರೂಪತೆ ಸಾಧಿಸುವ ನಿಟ್ಟಿನಲ್ಲಿ ಸಿನೆಮ ಮಂದಿರಗಳಲ್ಲಿ ರಾಷ್ಟ್ರಗೀತೆ ಪ್ರಸಾರ ಮಾಡುವ ಅಗತ್ಯವಿದೆ ಎಂದು ವಿಚಾರಣೆ ಸಂದರ್ಭ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ತಿಳಿಸಿದರು.

ಸಿನೆಮ ಮಂದಿರಗಳಲ್ಲಿ ಸಿನೆಮ ಪ್ರದರ್ಶನ ಆರಂಭದ ಮೊದಲು ರಾಷ್ಟ್ರಗೀತೆ ಪ್ರಸಾರ ಕಡ್ಡಾಯಗೊಳಿಸಿ 2016ರ ಡಿಸೆಂಬರ್ 1ರಂದು ತಾನು ನೀಡಿದ್ದ ಆದೇಶವನ್ನು ಮಾರ್ಪಡಿಸಬಹುದು. ಆದೇಶದಲ್ಲಿರುವ ಪ್ರಸಾರ ಮಾಡತಕ್ಕದ್ದು ಎಂಬ ಪದದ ಬದಲು ಪ್ರಸಾರ ಮಾಡಬಹುದು ಎಂದು ಬದಲಾಯಿಸಬಹುದು ಎಂದು ನ್ಯಾಯಪೀಠ ತಿಳಿಸಿತು.

ಅಲ್ಲದೆ ರಾಷ್ಟ್ರಗೀತೆಯ ಪ್ರತಿಷ್ಠೆಗೆ ಘಾಸಿಯಾಗುವ ರೀತಿಯಲ್ಲಿ ರಾಷ್ಟ್ರಗೀತೆಯನ್ನು ಪ್ರಿಂಟ್ ಮಾಡಿಸಿ, ಅದನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸುವುದನ್ನು ನಿಷೇಧಿಸುವ ಹಾಗೂ ಈ ಕುರಿತು ಶಿಷ್ಟಾಚಾರವೊಂದನ್ನು ರೂಪಿಸುವಂತೆ ನ್ಯಾಯಪೀಠ ಸರಕಾರಕ್ಕೆ ಸೂಚಿಸಿತು

Please follow and like us:
error