ರಾಜ್ಯ ಬಜೆಟ್: ಕಲ್ಯಾಣ ಕರ್ನಾಟಕಕ್ಕೆ ಮಾಡಿದ ಮಹಾವಂಚನೆ!

– ಕುಮಾರ್ ಬುರಡಿಕಟ್ಟಿ ಕಲಬುರಗಿ
ನಿನ್ನೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಬಜೆಟ್ ಮಂಡನೆ ಮಾಡುತ್ತಿರುವುದನ್ನು ಟೀವಿಯಲ್ಲಿ ನೋಡುತ್ತಿದ್ದೆ. ಅವರು ಒಂದೊಂದೇ ಘೋಷಣೆಗಳನ್ನು ಮಾಡುತ್ತಿದ್ದಂತೆ ಟೀವಿ ಪರದೆಯಲ್ಲಿ ಅವುಗಳನ್ನು ಫ್ಲಾಷ್ ಮಾಡಲಾಗುತ್ತಿತ್ತು. ಆ ಘೋಷಣೆಗಳ ಪೈಕಿ ನನ್ನನ್ನು ಥಟ್ಟನೇ ಹಿಡಿದು ನಿಲ್ಲಿಸಿದ್ದು ಯಾದಗಿರಿ ಜಿಲ್ಲೆಯ ಕಡೇಚೂರಿನ ಬಳಿ 1,478 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಪ್ರಸ್ತಾಪಿಸಿರುವ ಬಲ್ಕ್ ಡ್ರಗ್ ಪಾರ್ಕ್ ಯೋಜನೆ. ನಿಜ ಹೇಳ್ತೀನಿ, ನನಗೆ ನಂಬಲಿಕ್ಕಾಗಲಿಲ್ಲ. ಬೇರೆ ಬೇರೆ ಚಾನೆಲ್ಲುಗಳಿಗೆ ಹೋಗಿ ನೋಡಿದರೂ ಅದೇ ಘೋಷಣೆ ರಾರಾಜಿಸುತ್ತಿತ್ತು. ಪೂರ್ಣ ಬಜೆಟ್ ಪ್ರತಿ ಕೈಗೆ ಸಿಗುವ ತನಕ ನಾನು ಈ ಘೋಷಣೆಯನ್ನು ಪೂರ್ಣವಾಗಿ ನಂಬದೇ ಇರಲು ನಿರ್ಧರಿಸಿದೆ. ಹಿಂದುಳಿದ ಕಲ್ಯಾಣ ಕರ್ನಾಟಕಕ್ಕೆ, ಅದರಲ್ಲೂ ಇಡೀ ಕಲ್ಯಾಣ ಕರ್ನಾಟಕದಲ್ಲೇ ಅತಿ ಹೆಚ್ಚು ಹಿಂದುಳಿದ ಜಿಲ್ಲೆಯಾದ ಯಾದಗಿರಿಗೆ, ಹೆಚ್ಚೂ ಕಮ್ಮಿ ಒಂದೂವರೆ ಸಾವಿರ ಕೋಟಿ ರೂಪಾಯಿ ವೆಚ್ಚದ ಮಾಡಿ ಇಂತಹ ದೊಡ್ಡ ಯೋಜನೆಯನ್ನು ಕೊಟ್ಟಿದ್ದಾರೆ ಎಂಬುದನ್ನು ನನಗೆ ಅರಗಿಸಿಕೊಳ್ಳುವುದಕ್ಕೂ ಕಷ್ಟವಾಗುತ್ತಿತ್ತು. ಏಕೆಂದರೆ, ಸಂವಿಧಾನದ ಕಲಂ 371(ಜೆ) ಅಡಿಯಲ್ಲಿ ಪ್ರದತ್ತವಾದ ವಿಶೇಷ ಸ್ಥಾನಮಾನದ ಅನುಷ್ಠಾನಕ್ಕಾಗಿ ಅಸ್ತಿತ್ವಕ್ಕೆ ಬಂದಿರುವ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಕೆಆರ್ಡಿಬಿ) ಬಜೆಟ್ಟಿನಲ್ಲಿ ನಿಗದಿ ಮಾಡಿರುವುದು 1,500 ಕೋಟಿ ರೂಪಾಯಿ. ಅದು ಇಡೀ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣ. ಕಳೆದ ಬಾರಿಯೂ ಇಷ್ಟೇ ಮೊತ್ತದ ಹಣವನ್ನು ಮೀಸಲಿಟ್ಟಿತ್ತಾದರೂ ಆ ಹಣವನ್ನು ಪೂರ್ತಿಯಾಗಿ ಬಿಡುಗಡೆ ಮಾಡಲೇ ಇಲ್ಲ ಎಂಬುದು ಬೇರೆ ಮಾತು. ಈಗ ಇಡೀ ಏಳು ಜಿಲ್ಲೆಗಳಿಗೆ ಕೊಟ್ಟಷ್ಟು ಹಣವನ್ನು ಯಾದಗಿರಿ ಜಿಲ್ಲೆಯ ಒಂದೇ ಯೋಜನೆಗೆ ಕೊಡುತ್ತಿದ್ದಾರಲ್ಲ ಎಂಬುದೇ ನನ್ನ ಸೋಜಿಗಕ್ಕೆ ಕಾರಣ. ಯಾದಗಿರಿ ಮೇಲೆ ಯಡಿಯೂರಪ್ಪನವರಿಗೆ ಇದ್ದಕ್ಕಿದ್ದಂತೆ ಯಾಕಿಷ್ಟು ಪ್ರೀತಿ ಉಕ್ಕಿ ಬಂತು ಎಂಬುದು ನನ್ನ ಕುತೂಹಲಕ್ಕೆ ಕಾರಣ.
ಮುಖ್ಯಮಂತ್ರಿಗಳು ತಮ್ಮ ಬಜೆಟ್ ಭಾಷಣ ಮುಗಿಸುವ ಮೊದಲೇ ಬಜೆಟ್ಟಿನ ಪೂರ್ಣಪಾಠ ಕೈಗೆ ಬಂತು. ಅದರ 210ನೇ ಅಂಶದಲ್ಲಿ ಈ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ. ಯಾದಗಿರಿಯ ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ 1,500 ಎಕರೆ ಜಾಗದಲ್ಲಿ 1,478 ಕೋಟಿ ರೂಪಾಯಿ ವೆಚ್ಚದಲ್ಲಿ ವಿಶ್ವದರ್ಜೆಯ ಮೂಲಸೌಕರ್ಯಗಳಿರುವ ಬಲ್ಕ್ ಡ್ರಗ್ ಪಾರ್ಕ್ ಅನ್ನು ಕೇಂದ್ರ ಸರ್ಕಾರದ ನೆರವಿನೊಂದಿಗೆ ಅಭಿವೃದ್ಧಿಪಡಿಸಲಾಗುವುದು ಎಂಬುದು ಇದರ ಸಾರಾಂಶ.
ನನ್ನ ಅನುಮಾನ ನಿಜವಾಯಿತು. ಈ ಘೋಷಣೆಯನ್ನು ಸ್ವಲ್ಪ ಸೂಕ್ಷ್ಮವಾಗಿ ಅವಲೋಕಿಸಿದರೆ ನಿಮಗೂ ಇದರ ಅಸಲಿಯತ್ತು ಕಾಣುತ್ತದೆ.
ಬಲ್ಕ್ ಡ್ರಗ್ ಪಾರ್ಕ್ ಎಂಬುದು ಜೀವ ರಕ್ಷಕ ಔಷಧಿಗಳನ್ನು ತಯಾರಿಸುವ ಕಾರ್ಖಾನೆಗಳು ಒಂದೇ ಕಡೆ ನೆಲೆಯೂರಲು ಅವಕಾಶ ನೀಡುವ ಒಂದು ವಿಶೇಷ ಆರ್ಥಿಕ ವಲಯ (SEZ). ಇದೇ ವರ್ಷದ ಜನವರಿಯಲ್ಲಿ ಕೇಂದ್ರ ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಮಂತ್ರಿ ಡಿ.ವಿ. ಸದಾನಂದಗೌರು ಕೇಂದ್ರ ಸರ್ಕಾರ 14,300 ಕೋಟಿ ರೂಪಾಯಿ ವೆಚ್ಚದಲ್ಲಿ ದೇಶದ ಬೇರೆ ಬೇರೆ ಕಡೆ ಮೂರು ಬಲ್ಕ್ ಡ್ರಗ್ ಪಾರ್ಕುಗಳನ್ನು ಆಯಾ ರಾಜ್ಯಗಳ ಸಹಯೋಗದಲ್ಲಿ ಸ್ಥಾಪಿಸುವುದಾಗಿ ಘೋಷಿಸಿದ್ದರು. ಯಾದಗಿರಿಯ ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ತಲೆಯೆತ್ತಲು ಹೊರಟಿರುವ ಬಲ್ಕ್ ಡ್ರಗ್ ಪಾರ್ಕ್ ಕೂಡ ಅದರಲ್ಲಿ ಒಂದು. ಹಾಗಾಗದರೆ, ಇದು ಮೂಲತಃ ಕೇಂದ್ರ ಸರ್ಕಾರದ ಯೋಜನೆ ತಾನೆ?
ಹೌದು, ಇದು ಮೂಲತಃ ಕೇಂದ್ರ ಸರ್ಕಾರದ ಯೋಜನೆ. ಆದರೆ, ಕೇಂದ್ರ ತನ್ನ ಯೋಜನೆಗಳನ್ನು ರಾಜ್ಯ ಸರ್ಕಾರಗಳ ನೆರವಿನಿಂದಲೇ ಅನುಷ್ಠಾನಕ್ಕೆ ತರುತ್ತದೆ. ಯೋಜನೆಗೆ ಅಗತ್ಯವಿರುವ ಭೂಮಿ ಮತ್ತು ಕೆಲವೊಮ್ಮೆ ಬಂಡವಾಳದಲ್ಲೂ ಸ್ವಲ್ಪ ಪಾಲು ಒದಗಿಸುವುದು ರಾಜ್ಯಗಳ ಜವಾಬ್ದಾರಿ. ಕಡೇಚೂರು ಬಲ್ಕ್ ಡ್ರಗ್ ಪಾರ್ಕ್ಗೆ ಅಗತ್ಯವಿರುವ ಭೂಮಿಯನ್ನು ಈಗಾಗಲೇ ಸರ್ಕಾರ ವಶಪಡಿಸಿಕೊಂಡು ಬಹಳ ವರ್ಷ ಆಗಿದೆ. ಹಾಗಾಗಿ, ಭೂಮಿಯ ಸಮಸ್ಯೆ ಇಲ್ಲ. ಸಮಸ್ಯೆ ಇರುವುದು ಬಂಡವಾಳದ್ದು. ಈ ಯೋಜನೆಗೆ ಖರ್ಚಾಗುವ ಮೊತ್ತದಲ್ಲಿ ರಾಜ್ಯ ಸರ್ಕಾರ ಎಷ್ಟು ರೂಪಾಯಿ ಕೊಡುತ್ತದೆ ಎಂಬುದನ್ನು ಸ್ಪಷ್ಟವಾಗಿ ಹೇಳಬೇಕು. ಆ ಹಣವನ್ನು ಬಜೆಟ್ಟಿನಲ್ಲಿ ಮೀಸಲಿಡಬೇಕು. ವಿಷಯ ಏನಪ್ಪ ಅಂದರೆ, ನಿನ್ನೆ ಯಡಿಯೂರಪ್ಪನವರು ಮಂಡಿಸಿದ ಬಜೆಟ್ಟಿನಲ್ಲಿ ರಾಜ್ಯ ಸರ್ಕಾರ ಈ ಯೋಜನೆಗೆ ಈ ವರ್ಷ ಎಷ್ಟು ಹಣ ಮೀಸಲಿಟ್ಟಿದೆ ಎಂಬುದರ ಪ್ರಸ್ತಾಪವೇ ಇಲ್ಲ…! ಇಂತಿಂಥ ಯೋಜನೆಗೆ, ಇಂತಿಂಥ ಮಂಡಳಿಗೆ ಇಷ್ಟು ಅಂತ ಬಜೆಟ್ಟಿನಲ್ಲಿ ಮೀಸಲಿಟ್ಟಿರುವ ಹಣವನ್ನೇ ಸರಿಯಾಗಿ ಕೊಡದವರು ಮೀಸಲಿಟ್ಟಿರದೇ ಇರುವ ಯೋಜನೆಗೆ ಹಣ ಕೊಡುತ್ತಾರಾ?
ಸಾರಾಂಶದಲ್ಲಿ ಈ ಯೋಜನೆಗೆ ಈ ವರ್ಷ ಹಣ ಕೊಡುವುದು ಯಡಿಯೂರಪ್ಪನವರ ಉದ್ದೇಶ ಅಲ್ಲ. ಕೊಡುವುದಕ್ಕೆ ಅಷ್ಟು ಹಣವೂ ಇಲ್ಲ. ಕೇಂದ್ರ ಸರ್ಕಾರದ ನೆರವಿನೊಂದಿಗೆ ಒಂದೂವರೆ ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆಯನ್ನು ಕಾರ್ಯಗತ ಮಾಡುತ್ತೇವೆಂದು ಸುಮ್ಮನೇ ಒಂದು ಹೇಳಿಕೆ ಕೊಡುವುದು ಮಾತ್ರವೇ ಅವರ ಉದ್ದೇಶವಾಗಿತ್ತು. ಅದನ್ನೇ ಇಟ್ಟುಕೊಂಡು ನಮ್ಮ ಕಲ್ಯಾಣ ಕರ್ನಾಟಕದ ಮಂದಿ, ಯಾದಗಿರಿಯ ಮಂದಿ ಯಡಿಯೂರಪ್ಪನವರು ಒಂದೂವರೆ ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ ವಿಶೇಷ ಆರ್ಥಿಕ ವಲಯ ಸ್ಥಾಪಿಸುತ್ತಿದ್ದಾರೆ, ಸ್ಥಳೀಯ ಜನರಿಗೆ ಕೆಲಸ ಸಿಗುತ್ತದೆ, ಈ ಭಾಗ ಅಭಿವೃದ್ಧಿಯಾಗುತ್ತದೆ ಎಂದು ಸಂಭ್ರಮಿಸಲಿ ಎಂಬುದು ಅವರ ನಿರೀಕ್ಷೆ. ನನಗನ್ನಿಸಿದ ಮಟ್ಟಿಗೆ ಅವರ ಉದ್ದೇಶ, ನಿರೀಕ್ಷೆಯಲ್ಲಿ ಅವರು ಯಶಸ್ವಿಯಾಗಿದ್ದಾರೆ.
ಇದೊಂದು ಉದಾಹರಣೆ ಮಾತ್ರ. ಬಜೆಟ್ಟಿನಲ್ಲಿ ಕಲ್ಯಾಣ ಕರ್ನಾಟಕಕ್ಕೆ ಘೋಷಿಸಿದ ಬಹಳಷ್ಟು ಯೋಜನೆಗಳು ಇದೇ ರೀತಿಯಲ್ಲಿ ಕಲ್ಯಾಣ ಕರ್ನಾಟಕದ ಜನರಿಗೆ ಹಾಕಿದ ಒಂದೊಂದು ಮೋಸದಂತೆಯೇ ನನಗೆ ಕಾಣುತ್ತಿವೆ. ಕೇವಲ ಯೋಜನೆಗಳನ್ನಷ್ಟೇ ಘೋಷಿಸಿ ಅವುಗಳಿಗೆ ಹಣ ಮೀಸಲಿಡಿದ್ದರೆ ಏನು ಪ್ರಯೋಜನ? ಅವು ಚುನಾವಣೆಯ ಪೊಳ್ಳು ಭರವಸೆಗಳಂತಾಗುವುದಿಲ್ಲವೇ? ಕೆಲವು ಉದಾಹರಣೆಗಳನ್ನು ನೋಡಿ.
ರಾಯಚೂರು ನಗರಕ್ಕೆ ರಿಂಗ್ ರಸ್ತೆ ನಿರ್ಮಾಣದ ಘೋಷಣೆ ಮಾಡಲಾಗಿದೆ. ಇದೂ ಕೂಡ ಕೇಂದ್ರ ಸರ್ಕಾರದ ಯೋಜನೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನೆ. ಅದಕ್ಕೆ ಹಣವನ್ನೂ ಕೇಂದ್ರ ಸರ್ಕಾರವೇ ನೀಡುತ್ತದೆ. ರಾಜ್ಯ ಸರ್ಕಾರವೂ ಒಂದಿಷ್ಟು ಹಣ ನೀಡಬಹುದು. ಆದರೆ, ಎಷ್ಟು ಹಣ ನೀಡುತ್ತದೆ ಎಂಬುದನ್ನು ಬಜೆಟ್ಟಿನಲ್ಲಿ ತಿಳಿಸಿಲ್ಲ. ಹಾಗಾಗಿ, ಇದೂ ಕೂಡ ಒಂದು ಘೋಷಣೆ ಮಾತ್ರ. ಅಥವಾ ಕಡೇಚೂರು ಬಲ್ಕ್ ಡ್ರಗ್ ಪಾರ್ಕ್ ಥರದಲ್ಲಿ ಕೇಂದ್ರ ಸರ್ಕಾರದ ಯೋಜನೆಯನ್ನು ತನ್ನ ಯೋಜನೆಯೆಂದು ತೋರಿಸಿ ಜನರನ್ನು ಯಾಮಾರಿಸುವ ರಾಜ್ಯ ಸರ್ಕಾರದ ಕುಟಿಲತನ.
ಅದೇ ರೀತಿಯಲ್ಲಿ ಕೊಪ್ಪಳ ಜಿಲ್ಲೆಯ ಸಿರಿವಾರ ಹಳ್ಳಿಯಲ್ಲಿ ತೋಟಗಾರಿಕಾ ತಾಂತ್ರಿಕ ಉದ್ಯಾನ ಅಭಿವೃದ್ಧಿಪಡಿಸುವ ಘೋಷಣೆ ಮಾಡಲಾಗಿದೆ. ಆದರೆ, ಅದಕ್ಕೆ ಬಜೆಟ್ಟಿನಲ್ಲಿ ಹಣ ಮೀಸಲಿಟ್ಟಿಲ್ಲ. ಬಳ್ಳಾರಿ ಜಿಲ್ಲೆಯ ಆಲದಹಳ್ಳಿಯಲ್ಲಿ ಒಣ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪಿಸುವುದಾಗಿ ಘೋಷಿಸಲಾಗಿದೆ. ಅದಕ್ಕೂ ಹಣ ಮೀಸಲಿಟ್ಟಿಲ್ಲ. ಅದನ್ನು ಬಳ್ಳಾರಿ ಎಪಿಎಂಸಿ ಕೈಗೆತ್ತಿಕೊಳ್ಳುತ್ತದೆ ಎಂದು ತಿಳಿಸಲಾಗಿದೆ. ಬೀದರಿನಲ್ಲಿ ಕೃಷಿ ಸಲಕರಣೆಗಳ ಉತ್ಪಾದನಾ ಕ್ಲಷ್ಟರ್ ಸ್ಥಾಪನೆಯನ್ನು ಹಿಂದೆಯೇ ಕೈಗೆತ್ತಿಕೊಳ್ಳಲಾಗಿದ್ದು ಅದಕ್ಕೆ ವಿಶೇಷ ಪ್ರೋತ್ಸಾಹ ಪ್ಯಾಕೇಜ್ ಅನ್ನು ಈ ಬಜೆಟ್ಟಿನಲ್ಲಿ ಘೋಷಿಸಲಾಗಿದೆ. ಆದರೆ ಅದಕ್ಕೂ ಹಣ ಮೀಸಲಿಟ್ಟಿಲ್ಲ. ಬಳ್ಳಾರಿಯಿಂದ ಬೇರ್ಪಡಿಸಿ ಹೊಸದಾಗಿ ರಚಿಸಿದ ವಿಜಯನಗರ ಜಿಲ್ಲೆಯ ಮೂಲಸೌಕರ್ಯಗಳನ್ನು ಒದಗಿಸಲು ಬಜೆಟ್ಟಿನಲ್ಲಿ ಪ್ರಸ್ತಾಪ ಮಾಡಲಾಗಿದೆ. ಆದರೆ, ಅದಕ್ಕೂ ಹಣ ಮೀಸಲಿಟ್ಟಿಲ್ಲ.
ಹೊಸಪೇಟೆ ಬಳಿಯ ಬೃಹತ್ ತುಂಗಭದ್ರಾ ಜಲಾಶಯದಲ್ಲಿ 32 ಟಿಎಂಸಿ ಅಡಿ ಹೂಳು ತುಂಬಿಕೊಂಡಿದೆ. ಅಂದರೆ, ಜಲಾಶಯದಲ್ಲಿ ಅಷ್ಟು ಪ್ರಮಾಣದ ನೀರು ಸಂಗ್ರಹಣೆ ಕಡಿಮೆಯಾಗಿದೆ. ಆದ್ದರಿಂದ ಕೊಪ್ಪಳ ಜಿಲ್ಲೆಯ ನವುಲೆ ಬಳಿ ತುಂಗಭದ್ರಾ ನದಿಗೆ ಒಂದು ಸಮನಾಂತರ ಜಲಾಶಯ ಕಟ್ಟಬೇಕು ಎಂಬುದು ಬಳ್ಳಾರಿ, ಕೊಪ್ಪಳ ರಾಯಚೂರು ಜನರ ಬಹುದಿನಗಳ ಬೇಡಿಕೆ. ಈ ನಿಟ್ಟಿನಲ್ಲಿ ಸಮೀಕ್ಷೆ ಕೂಡ ನಡೆಯುತ್ತಿದೆ. ತುಂಗಭದ್ರಾ ಯೋಜನೆ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳನ್ನು ಒಳಗೊಂಡ ಅಂತರರಾಜ್ಯ ಯೋಜನೆಯಾಗಿದ್ದರಿಂದ ಆ ಉಳಿದೆರಡು ರಾಜ್ಯಗಳೊಂದಿಗೆ ಸಮಾಲೋಚಿಸಿ ಆದಷ್ಟು ಬೇಗ ಈ ಸಮಾನಾಂತರ ಜಲಾಯಶಯ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು ಎಂದು ಬಜೆಟ್ಟಿನಲ್ಲಿ ಘೋಷಣೆ ಮಾಡಲಾಗಿದೆ. ಆದರೆ ಅದಕ್ಕೂ ಹಣವನ್ನು ಮೀಸಲಿಟ್ಟಿಲ್ಲ.
ಇನ್ನೊಂದು ಅಪಾಯಕಾರಿ ಬೆಳವಣಿಗೆ ಎಂದರೆ, ಗುಲ್ಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಜಿಮ್ಸ್) ಸುಟ್ಟ ಗಾಯಗಳ ಚಿಕಿತ್ಸೆ ಮತ್ತು ಪ್ಲಾಸ್ಟಿಕ್ ಸರ್ಜರಿ ಕೇಂದ್ರ ಸ್ಥಾಪಿಸುವುದಾಗಿ ಬಜೆಟ್ಟಿನಲ್ಲಿ ಘೋಷಿಸಲಾಗಿದ್ದು ಅದನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಕೆಆರ್ಡಿಬಿ) ನೀಡಿದ ಹಣದಲ್ಲೇ ಬಳಸಿಕೊಳ್ಳಬೇಕು ಎಂದು ಹೇಳಲಾಗಿದೆ. ಇದು ಸಂವಿಧಾನದ ಕಲಂ 371(ಜೆ) ಅಡಿಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ಪ್ರದತ್ತವಾದ ವಿಶೇಷ ಸ್ಥಾನಮಾನಕ್ಕೆ, ಮತ್ತು ಅದರ ಅನುಷ್ಠಾನಕ್ಕಾಗಿ ಅಸ್ತಿತ್ವಕ್ಕೆ ಬಂದಿರುವ ಕೆಕೆಆರ್ಡಿಬಿಗೆ ಮಾಡಿದ ಅವಮಾನ. ಕೆಕೆಆರ್ಡಿಬಿ ರಾಜ್ಯಪಾಲರ ಮೇಲುಸ್ತುವಾರಿಯಲ್ಲಿರುವ ಸ್ವಾಯತ್ತ ಸಂಸ್ಥೆ. ಸರ್ಕಾರ ಅದಕ್ಕೆ ಬೇಕಾದ ಅನುದಾನವನ್ನು ಕೊಟ್ಟು ಸುಮ್ಮನಾಗಬೇಕು. ಆ ಹಣವನ್ನು ಹೇಗೆ, ಎಲ್ಲಿ, ಯಾವುದಕ್ಕೆ ಖರ್ಚು ಮಾಡಬೇಕೆಂಬುದನ್ನು ಕೆಕೆಆರ್ಡಿಬಿ ತನ್ನ ನಿಯಮಗಳಿಗನುಸಾರವಾಗಿ ಖುದ್ದಾಗಿ ನಿರ್ಧರಿಸುತ್ತದೆ. ಸರ್ಕಾರ ಅದರಲ್ಲಿ ಮೂಗು ತೂರಿಸುವಂತಿಲ್ಲ. ಸುಟ್ಟಗಾಯಗಳ ಚಿಕಿತ್ಸೆ ಮತ್ತು ಪ್ಲಾಸ್ಟಿಕ್ ಸರ್ಜರಿ ಕೇಂದ್ರವನ್ನು ಬಜೆಟ್ಟಿನಲ್ಲಿ ಘೋಷಿಸುವುದೇ ಆದರೆ ಅದಕ್ಕೆ ಪ್ರತ್ಯೇಕ ಅನುದಾನವನ್ನು ಘೋಷಿಸಬೇಕು. ಅದನ್ನು ಬಿಟ್ಟು ಕೆಕೆಆರ್ಡಿಬಿ ಹಣದಲ್ಲಿ ಮಾಡಿ ಎಂದು ಹೇಳುವುದು ಜನರಿಗೆ ಎರಚುವ ಮಂಕುಬೂದಿಯಾಗಿದೆ.
ವಾಸ್ತವದಲ್ಲಿ ಈ ರೀತಿ ಕೆಕೆಆರ್ಡಿಬಿ ಹಣ ತೋರಿಸಿ ತಾವು ಹೊಸ ಯೋಜನೆಯನ್ನು ಬಜೆಟ್ಟಿನಲ್ಲಿ ಘೋಷಿಸುವ ಕೆಟ್ಟ ಪರಂಪರೆಯನ್ನು ಹುಟ್ಟು ಹಾಕಿದವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಅವರು ಮಂಡಿಸಿದ ಬಜೆಟ್ಟಿನಲ್ಲಿ ಕಲಬುರಗಿಯಲ್ಲಿರುವ ಶ್ರೀ ಜಯದೇವ ಹೃದ್ರೋಗ ವಿಜ್ಞಾನಗಳ ಸಂಸ್ಥೆಯ ಶಾಖೆಗೆ ಪ್ರತ್ಯೇಕವಾದ ಸುಸಜ್ಜಿತ ಕಟ್ಟಡವನ್ನು ಕಟ್ಟಿಸಿಕೊಡುವ ಭರವಸೆ ನೀಡಿದ್ದರು. ಸುಮಾರು 200 ಕೋಟಿ ರೂಪಾಯಿಗಳ ಈ ಜೋಜನೆಗೆ ಬಜೆಟ್ಟಿನಲ್ಲಿ ಒಂದು ಪೈಸೆಯನ್ನೂ ಮೀಸಲಿಡದೇ ಕೆಕೆಆರ್ಡಿಬಿ ಹಣದಲ್ಲಿ ಈ ಆಸ್ಪತ್ರೆ ಕಟ್ಟುವುದಾಗಿ ಹೇಳಿದ್ದರು. ಈಗ ಯಡಿಯೂರಪ್ಪನವರು ಆ ಪರಂಪರೆಯನ್ನು ಮುಂದುವರೆಸಿದ್ದಾರೆ.
ಇನ್ನು ಕಲಬುರಗಿ ಜಿಲ್ಲೆಯ ಫಿರೋಜಾಬಾದ್ ಬಳಿ 350 ಕೋಟಿ ರೂಪಾಯಿ ವೆಚ್ಚದಲ್ಲಿ ಸೋಲಾರ್ ಪಾರ್ಕ್ ನಿರ್ಮಿಸುವ ಘೋಷಣೆಯನ್ನೂ ಮಾಡಲಾಗಿದೆ. ಆದರೆ, ಇದು ಸಂಪೂರ್ಣ ಸರ್ಕಾರದ ಯೋಜನೆಯಲ್ಲ. ಇದು ಬಹಳಷ್ಟು ಮಟ್ಟಿಗೆ ಖಾಸಗಿಯವರ ಯೋಜನೆ. ನನಗಿರುವ ಮಾಹಿತಿಯ ಪ್ರಕಾರ ಅದು ಯಡಿಯೂರಪ್ಪನವರ ಆಪ್ತರಿಗಾಗಿ ಘೋಷಿಸಲಾದ ಯೋಜನೆ. ಖಾಸಗಿಯವರು ಉತ್ಪಾದಿಸುವ ಸೋಲಾರ್ ವಿದ್ಯುತ್ತನ್ನು ಹೊರರಾಜ್ಯಗಳಿಗೆ ಮಾರುವುದಕ್ಕಾಗಿ ತಲೆಯೆತ್ತುತ್ತಿರುವ ಯೋಜನೆ. ಇದರಲ್ಲಿ ಸರ್ಕಾರ ರೊಕ್ಕವೆಷ್ಟು, ಅದರ ಪಾತ್ರವೇನು ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.
ಕೆಕೆಆರ್ಡಿಬಿಗೆ ನೀಡುತ್ತಿರುವ ಅನುದಾನವನ್ನು 1,500 ಕೋಟಿ ರೂಪಾಯಿಯಿಂದ 2,000 ಕೋಟಿ ರೂಪಾಯಿಗೆ ಏರಿಸಿ ಅಂತ ಕಲ್ಯಾಣ ಕರ್ನಾಟಕದ ಜನ ಕೇಳುತ್ತಲೇ ಇದ್ದಾರೆ. ಆದರೆ, ಯಡಿಯೂರಪ್ಪನವರು ಒಂದು ಪೈಸೆ ಹೆಚ್ಚು ಮಾಡಲಿಲ್ಲ. ಇತ್ತೀಚೆಗೆ ತಾನೆ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪ್ರತ್ಯೇಕಗೊಂಡು ಅಸ್ತಿತ್ವಕ್ಕೆ ಬಂದಿರುವ ರಾಯಚೂರು ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಸುಮಾರು 600 ಕೋಟಿ ರೂಪಾಯಿ ಬೇಕಾಗಿದ್ದು ಅದರಲ್ಲಿ ಈ ವರ್ಷ ಕನಿಷ್ಠ 100 ಕೋಟಿ ರೂಪಾಯಿಯನ್ನಾದರೂ ಮುಖ್ಯಮಂತ್ರಿಗಳು ಕೊಡುತ್ತಾರೆ ಅಂದುಕೊಂಡಿದ್ದರು ರಾಯಚೂರಿನ ಜನ. ಒಂದು ಪೈಸೆಯೂ ಸಿಕ್ಕಿಲ್ಲ.
ಹಾಗೆ ನೋಡಿದರೆ, ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಿರ್ಮಿಸಲು ಹೊರಟಿರುವ ಹೊಸ ಅನುಭವ ಮಂಟಪಕ್ಕೆ 200 ಕೋಟಿ ರೂಪಾಯಿ ಕೊಟ್ಟಿದ್ದೆ ನಿಜವಾದ ಅನುದಾನ! ಬಸವಕಲ್ಯಾಣದ ಎಮ್ಮೆಲ್ಲೆಯಾಗಿದ್ದ ಬಿ. ನಾರಾಯಣರಾವ್ ಅವರ ನಿಧನದಿಂದಾಗಿ ಅಲ್ಲೀಗ ಸಧ್ಯದಲ್ಲೇ ಉಪಚುನಾವಣೆ ನಡೆಯಲಿದೆ. ಅಲ್ಲಿ ಮುಸ್ಲಿಮರು, ಮರಾಠರು ಮತ್ತು ಲಿಂಗಾಯತರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಏನೂ ಮಾಡಿದರೂ ಮುಸ್ಲಿಂ ಮತಗಳನ್ನು ಸೆಳೆಯಲು ಬಿಜೆಪಿಗೆ ಕಷ್ಟ. ಉಳಿದೆರಡು ಸಮುದಾಯಗಳ ಮತಗಳನ್ನಾದರೂ ಸದೃಢೀಕರಣ ಮಾಡಿಕೊಳ್ಳಬೇಕೆಂಬುದು ಅದರ ಕಾರ್ಯತಂತ್ರ. ಅದರ ಭಾಗವಾಗಿಯೇ ವಿವಾದಿತ ಮರಾಠ ಅಭಿವೃದ್ಧಿ ಮಂಡಳಿ ರಚಿಸಿದ್ದಾಯಿತು. ಅದರ ಬೆನ್ನಲ್ಲೇ ಲಿಂಗಾಯತರನ್ನು ಸೆಳೆಯಲು ಹೊಸ ಅನುಭವ ಮಂಟಪಕ್ಕೆ ಇದೇ ಜನವರಿಲ್ಲಿ ಯಾವುದೇ ಬಜೆಟ್ ಅನುದಾನವಿಲ್ಲದೇ, ಯಾವುದೇ ಯೋಜನಾ ವರದಿಯಿಲ್ಲದೇ ಯಡಿಯೂರಪ್ಪನವರು ಶಿಲನ್ಯಾಸ ಮಾಡಿದ್ದೂ ಆಯಿತು, ಯೋಜನೆಗೆ 500 ಕೋಟಿ ರೂಪಾಯಿ ಒದಗಿಸುವುದಾಗಿ ಘೋಷಿಸಿದ್ದೂ ಆಯಿತು. ಅದರ ಮುಂದುವರಿದ ಭಾಗವಾಗಿ ಈಗ ಬಜೆಟ್ಟಿನಲ್ಲಿ 200 ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ!
ಸಾರಾಂಶದಲ್ಲಿ, ಈ ಬಜೆಟ್ ಕಲ್ಯಾಣ ಕರ್ನಾಟಕದ ಜನರಿಗೆ ಮಾಡಿದ ಮೋಸ ಎಂದೇ ನನಗನ್ನಿಸುತ್ತದೆ. ನನಗೆ ಹೇಗೆನ್ನಿಸುತ್ತಿದೆ ಎಂಬುದು ಅಷ್ಟು ಮುಖ್ಯವಲ್ಲ. ಕಲ್ಯಾಣ ಕರ್ನಾಟಕದ ಜನರಿಗೆ ಹೇಗೆನ್ನಿಸುತ್ತದೆ ಎಂಬುದು ಮುಖ್ಯ.
– ಕುಮಾರ್ ಬುರಡಿಕಟ್ಟಿ
ಕಲಬುರಗಿ
Please follow and like us:
error