ರಾಜ್ಯ ಅತಿವೃಷ್ಟಿಯಿಂದ ತತ್ತರ, ಬಿಜೆಪಿ ಸರಕಾರ ಗಲಭೆಯ ಬೆಂಕಿಯಲ್ಲಿ ರಾಜಕೀಯದ ರೊಟ್ಟಿ ಬಡಿಯುತ್ತಿದೆ- ಸಿದ್ದರಾಮಯ್ಯ

ಇಡೀ ರಾಜ್ಯ ಅತಿವೃಷ್ಟಿಯಿಂದ ತತ್ತರಿಸಿಹೋಗಿದೆ.  ಕರ್ನಾಟಕದ ಬಿಜೆಪಿ ಸರ್ಕಾರ ಬೆಂಗಳೂರು ಗಲಭೆಯ ಬೆಂಕಿಯಲ್ಲಿ ರಾಜಕೀಯದ ರೊಟ್ಟಿ ಬಡಿಯುತ್ತಾ ಕೂತಿದೆ. ನೊಂದ ಜನರ ಗೋಳು ಅರಣ್ಯರೋದನ. ಅತಿವೃಷ್ಟಿಯ ಪರಿಹಾರದಲ್ಲಿ ಕಳೆದ ವರ್ಷದ ವೈಫಲ್ಯ ಈ ಬಾರಿ ಜನರ ಕಷ್ಟ-ಕಾರ್ಪಣ್ಯಗಳನ್ನು ದುಪ್ಪಟ್ಟುಗೊಳಿಸಿದೆ ಎಂದು ವಿ.ಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು  ಗೃಹಸಚಿವರು ಅತಿವೃಷ್ಟಿ ಸಮೀಕ್ಷೆಗೆ ಪ್ರವಾಸ ಮಾಡುತ್ತಿದ್ದಾರೆ, ಕಂದಾಯ ಸಚಿವರು ಬೆಂಗಳೂರಿನಲ್ಲಿ ಕೂತು ಕಾವಲಭೈರಸಂದ್ರ ಗಲಭೆ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಕಂದಾಯ ಸಚಿವರಿಗೆ ಬೆಂಗಳೂರಿನಲ್ಲೇನು ಕೆಲಸ?  ಮುಖ್ಯಮಂತ್ರಿಗಳೇ, ಮೊದಲು ಇವರನ್ನು ಪ್ರವಾಹಪೀಡಿತ ಪ್ರದೇಶಕ್ಕೆ ಕಳಿಸಿಕೊಡಿ. ನನ್ನ ಕ್ಷೇತ್ರವಾದ ಬಾದಾಮಿಯ ಜನ ಪ್ರವಾಹದಿಂದಾಗಿ ಸಂಕಷ್ಟದಲ್ಲಿದ್ದಾರೆ. ಕೊರೋನಾ ಸೋಂಕಿನ ನಂತರ ಕಡ್ಡಾಯ ವಿಶ್ರಾಂತಿಯಲ್ಲಿರುವುದರಿಂದ ಕ್ಷೇತ್ರಕ್ಕೆ ಭೇಟಿ ನೀಡುವ ಸ್ಥಿತಿಯಲ್ಲಿ ನಾನಿಲ್ಲ. ಇದಕ್ಕಾಗಿ ಕ್ಷಮೆ ಇರಲಿ. ಅಧಿಕಾರಿಗಳು ಮತ್ತು ನಮ್ಮ ಪಕ್ಷದ ನಾಯಕರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಮನವಿ ಮಾಡಿದ್ದಾರೆ

Please follow and like us:
error