ರಾಜ್ಯಾದ್ಯಂತ ಬಂದ್ ಗೆ ಉತ್ತಮ ಪ್ರತಿಕ್ರಿಯೆ

Kannadanet : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸಲು ಹೊರಟಿರುವ ಕೃಷಿ ಮಸೂದೆಗಳ ವಿರುದ್ಧ ರಾಜ್ಯಾದ್ಯಂತ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕರ್ನಾಟಕ ಬಂದ್ ಆರಂಭಿಸಿದ್ದಾರೆ. ಇಂದು ಮುಂಜಾನೆ 7 ಗಂಟೆಯಿಂದಲೇ ಬೀದಿಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ.

ರಾಜ್ಯದ ಹುಬ್ಬಳ್ಳಿ, ಬೆಳಗಾಂ, ಧಾರವಾಡ, ಕಲ್ಬುರ್ಗಿ, ಸಿಂದನೂರು, ರಾಯಚೂರು, ಗದಗ, ಬಳ್ಳಾರಿ, ಕೊಪ್ಪಳ ಸೇರಿದಂತೆ ಇಡೀ  ರಾಜ್ಯಾದ್ಯಂತ ಬೆಳಗಿನಿಂದಲೇ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ

ರೈತರ ಹೋರಾಟಕ್ಕೆ ಕಾರ್ಮಿಕ, ಪ್ರಗತಿಪರ, ಕನ್ನಡಪರ, ಯುವ, ವಿದ್ಯಾರ್ಥಿ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ ಹೋರಾಟಕ್ಕೆ ಧುಮುಕಿವೆ.ಬೆಂಗಳೂರಿನ ಟೌನ್ ಹಾಲ್ ಎದುರು ಭಾರೀ ಹೋರಾಟ ಆರಂಭವಾಗಿದ್ದು, ರೈತರು, ವಿದ್ಯಾರ್ಥಿಗಳು, ಕನ್ನಡಪರ ಸಂಘಟನೆಗಳು ಜಮಾವಣೆಗೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಮುಗಿಲು ಮುಟ್ಟಿವೆ. ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬೀದಿಯಲ್ಲೇ ಮಲಗಿ, ಉರುಳುಸೇವೆ ಮಾಡುವ ಮಾಡುವ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ. ಬಡಗಲಪುರ ನಾಗೇಂದ್ರ, ಸರೋವರ್ ಬೆಂಕಿಕೆರೆ, ಹರೀಶ್ ಕುಮಾರ್ ಬಿ ಮುಂತಾದವರು ನೇತೃತ್ವ ವಹಿಸಿದ್ದಾರೆ.

ಇಂದು ಮುಂಜಾನೆ 4 ಗಂಟೆಗೆ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದ ಕರ್ನಾಟಕ ರಣಧೀರ ಪಡೆ ಕಾರ್ಯಕರ್ತರು ಬಸ್‌ಗಳನ್ನು ತಡೆದು ಬಂದ್ ಆರಂಭಿಸಿದರು. 50 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಬಸ್‌ನಲ್ಲಿ ಅವರನ್ನು ಕರೆದೊಯ್ಯುತ್ತಿರವಾಗ ಮತ್ತಷ್ಟು ಕನ್ನಡಪರ ಸಂಘಟನೆ ಕಾರ್ಯಕರ್ತರು ಬಂದು ಅದೇ ಬಸ್‌ ತಡೆದು ಪ್ರತಿಭಟನೆ ತೀವ್ರಗೊಳಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ, ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಪದಾಧಿಕಾರಿಗಳು ಬೆಂಗಳೂರಿನ ದೇವನಹಳ್ಳಿ ಸಮೀಪವಿರುವ ನಾಡಪ್ರಭು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ 5 ಗಂಟೆಗೆ ಪ್ರತಿಭಟನೆ ನಡೆಸಿ ಬಂಧನಕ್ಕೊಳಗಾಗಿದ್ದಾರೆ.

Please follow and like us:
error