
ಕೊಪ್ಪಳ: ಖ್ಯಾತ ಕಲಾ ವಿಮರ್ಶಕ ಎ.ಈಶ್ವರಯ್ಯ ಸ್ಮರಣಾರ್ಥ `ನೆಲದ ನೆಲೆ-ಗ್ರಾಮೀಣ ಸೊಬಗಿನ ನೈಜ ಚಿತ್ರಣ’ ವಿಷಯದ ಅಡಿ ನಡೆದ ರಾಜ್ಯದ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಕೊಪ್ಪಳದ ಛಾಯಾಗ್ರಾಹಕ ಭರತ್ ಕಂದಕೂರಗೆ ಪ್ರಥಮ ಬಹುಮಾನ ಲಭಿಸಿದೆ.
ಉಡುಪಿಯ ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜಿನ ಪತ್ರಿಕೋದ್ಯಮ ವಿಭಾಗ, ಬಿಳಿಕಲ್ಲು ಪ್ರಕಾಶನ ಹಾಗೂ ಫೋಕಸ್ ಸ್ಟುಡಿಯೋ ಇವರುಗಳ ಸಂಯುಕ್ತಾಶ್ರಯಲ್ಲಿ ನಡೆದ ಈ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ೧೧೫ ಕ್ಕೂ ಹೆಚ್ಚು ಛಾಯಾಗ್ರಾಹಕರ ಸುಮಾರು ೪೦೦ಕ್ಕೂ ಹೆಚ್ಚು ಚಿತ್ರಗಳು ಭಾಗವಹಿಸಿದ್ದವು.
ಭರತ್ ಕಂದಕೂರರ `ಹೊನ್ನ ಹುಡಿ’ ಶೀರ್ಷಿಕೆಯ ಛಾಯಾಚಿತ್ರ ಅಂತಿಮ ಸುತ್ತಿನಲ್ಲಿ ಬಹುಮಾನ ಪಡೆದುಕೊಂಡಿದೆ. ಶುಕ್ರವಾರ ನಡೆದ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ರೂ.೫,೦೦೦ ನಗದು, ಪಾರಿತೋಷಕ ನೀಡಿ ಗೌರವಿಸಲಾಯಿತು.
ಖ್ಯಾತ ಅಂತರಾಷ್ಟ್ರೀಯ ಛಾಯಾಗ್ರಾಹಕ ಗುರುದಾಸ್ ಕಾಮತ್ ಹಾಗೂ ಫೋಕಸ್ ರಘು ಸ್ಪರ್ಧೆಯ ತೀರ್ಪುಗಾರರಾಗಿದ್ದರು. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಸ್.ಲಿಂಗದೇವರು, ಸಿನೆಮಾ ವಿಮರ್ಶಕ, ಪತ್ರಕರ್ತ ಗಿರೀಶ್ರಾವ್ (ಜೋಗಿ), ಕಾಲೇಜಿನ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಮಂಜುನಾಥ ಕಾಮತ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.