ರಾಜ್ಯಮಟ್ಟದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮಂಡ್ಯದಲ್ಲಿ..

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ನೇತೃತ್ವದಲ್ಲಿ ರಾಜ್ಯದ ಹಲವಾರು ಮಹಿಳಾ ಮತ್ತು ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಪ್ರತಿ ವರ್ಷ ನಡೆಯುವ ರಾಜ್ಯಮಟ್ಟದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯು ಈ ಬಾರಿ ಮಂಡ್ಯದಲ್ಲಿ ನಾಳೆ ಮತ್ತು ನಾಳಿದ್ದು (ಮಾರ್ಚ್‌ 07 & 08) ನಡೆಯಲಿದೆ.

2013ರಲ್ಲಿ ಉಡುಪಿಯಿಂದ ಆರಂಭವಾದ ಎಲ್ಲಾ ಸಂಘಟನೆಗಳು ಕೂಡಿ ಆಚರಿಸುವ ಈ ಪ್ರಕ್ರಿಯೆ ಪ್ರತಿ ವರ್ಷಕ್ಕೂ ವಿಭಿನ್ನವಾಗಿ ನಡೆದುಕೊಂಡು ಬರುತ್ತಿದೆ. 2014ರಲ್ಲಿ ಮೈಸೂರು, 2015ರಲ್ಲಿ ಬೆಂಗಳೂರು, 2016ರಲ್ಲಿ ವಿಜಯಪುರ, 2017ರಲ್ಲಿ ಕೊಪ್ಪಳ, 2018ರಲ್ಲಿ ಶಿವಮೊಗ್ಗ ಮತ್ತು 2019ರಲ್ಲಿ ಧಾರವಾಡದಲ್ಲಿ ಯಶಸ್ವಿಯಾಗಿ ಮಹಿಳಾ ದಿನ ನಡೆದಿದೆ.

ಕೊಪ್ಪಳದಲ್ಲಿ 2017ರಲ್ಲಿ ನಡೆದ ಮಹಿಳಾ ದಿನಾಚರಣೆ

ಉಡುಪಿಯ ಕಾರ್ಯಕ್ರಮಕ್ಕೆ 2013ರಲ್ಲಿ ದಿಟ್ಟ ಹೋರಾಟಗಾರ್ತಿ ಭಂವ್ರಿದೇವಿ ಚಾಲನೆ ನೀಡಿದ್ದರು. ಮಣಿಪುರದ ಹೋರಾಟಗಾರ್ತಿಯರು, ಕವಿತಾ ಕೃಷ್ಣನ್‌ ಸೇರಿದಂತೆ ಹಲವು ಚಿಂತಕರು, ಹೋರಾಟಗಾರ್ತಿಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಹಿಳಾ ದಿನದ ಮಹತ್ವವನ್ನು ಹೆಚ್ಚಿಸಿದ್ದರು. ಈ ಬಾರಿ ಮಂಡ್ಯದ ಕಾರ್ಯಕ್ರಮಕ್ಕೆ ದೆಹಲಿ ಸಾಮಾಜಿಕ ಹೋರಾಟಗಾರ್ತಿ ಮತ್ತು ಚಿಂತಕಿ ಶಬ್ನಂ ಹಶ್ಮಿ ಮತ್ತು ಹೈದರಾಬಾದ್‌ನ ಸ್ತ್ರೀವಾದಿ ಚಿಂತಕಿ ವೋಲ್ಗಾರವರು ಭಾಗವಹಿಸಲಿದ್ದಾರೆ.

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ರೂಪುಗೊಳ್ಳುವ ಮೊದಲು ಎಲ್ಲಾ ಸಂಘಟನೆಗಳು ತಮ್ಮ ತಮ್ಮ ಸಂಘಟನೆಗಳ ವ್ಯಾಪ್ತಿಯಲ್ಲಿ ಮಾತ್ರ ಮಹಿಳಾ ದಿನಾಚರಣೆ ಆಚರಿಸುತ್ತಿದ್ದರು. ಆದರೆ ಈಗ ಅವರೆಲ್ಲರೂ ಒಟ್ಟಾಗಿ ಭಾಗವಹಿಸುವುದಲ್ಲದೇ ಅವರ ಸಂಘಟನೆಗಳ ವ್ಯಾಪ್ತಿಯಲ್ಲಿಯೂ ಸಹ ಆಚರಿಸುತ್ತಿದ್ದಾರೆ. ಎಲ್ಲರನ್ನು ಒಂದು ವೇದಿಕೆಗೆ ತಂದ ಶ್ರೇಯ ಈ ವೇದಿಕೆಗೆ ಸಲ್ಲುತ್ತದೆ.

ಪ್ರತಿ ವರ್ಷವೂ ಎರಡು ದಿನ ಕಾರ್ಯಕ್ರಮ ನಡೆಯುತ್ತಿದೆ. ಅದಕ್ಕು ಮೊದಲೇ ಆರು ತಿಂಗಳಿನಿಂದ ಕಾರ್ಯಕ್ರಮದ ತಯಾರಿ ನಡೆದಿರುತ್ತದೆ. ಯಾವ ಊರಿನಲ್ಲಿ ಕಾರ್ಯಕ್ರಮ ನಡೆಯುತ್ತದೆಯೇ ಅಲ್ಲಿಯ ಸಂಘಟನೆಗಳೊಂದಿಗೆ ಸಭೆ, ಆ ಊರಿನ ಮಹಿಳಾ ಸಮಸ್ಯೆಯ ಕುರಿತು ಚರ್ಚೆ, ಕಾರ್ಯಗಾರ, ಪ್ರಚಾರಾಂದೋಲನಗಳು ನಡೆಯುತ್ತವೆ. ಸಾಮಾನ್ಯವಾಗಿ ಕಾರ್ಯಕ್ರಮದ ಮೊದಲ ದಿನ ಮಹಿಳಾ ಸಮಸ್ಯೆಗಳ ಪ್ರಚಲಿತ ವಿಚಾರದ ಕುರಿತು ವಿಚಾರ ಸಂಕಿರಣ ಮತ್ತು ಕಪ್ಪುಡುಗೆಯಲ್ಲಿ ಮಹಿಳೆಯರು ಮೌನ ಪ್ರತಿಭಟನೆ ನಡೆಯುತ್ತದೆ. ಎರಡನೆಯ ದಿನ ಮೆರವಣಿಗೆ ಮತ್ತು ಬಹಿರಂಗ ಸಮಾವೇಶ ಜರುಗುತ್ತದೆ.

ಪ್ರಚಾರಾಂದೋಲನ

ಸಮತೆಯೆಡೆಗೆ ನಮ್ಮ ನಡಿಗೆ, ನನ್ನ ಮತ ನನ್ನ ಆಯ್ಕೆ, ಇರಲಿ ಹೆಣ್ಣೋಟಕ್ಕೆ ಹೆಗ್ಗಳಿಕೆ ಎಂಬ ವಿಷಯದ ಸುತ್ತಾ ಧಾರವಾಡದ ಮಹಿಳಾ ದಿನ ನಡೆದರೆ, ಕೊಪ್ಪಳದಲ್ಲಿ ಸಮತೆಯೆಡೆಗೆ ನಮ್ಮ ನಡಿಗೆ, ನಮ್ಮ ಮಗಳು ಜಗದ ಬೆಳಕು, ನಮ್ಮ ದೇಹ ನಮ್ಮ ಹಕ್ಕು ಎಂಬ ವಿಷಯದ ಸುತ್ತಾ ಕೇಂದ್ರೀಕರಿಸಿತ್ತು. ಈ ಬಾರಿಯ ಮಂಡ್ಯದ ಮಹಿಳಾ ದಿನಾಚರಣೆಯಲ್ಲಿ ಗಟ್ಟಿ ದನಿ, ದಿಟ್ಟ ನಡೆ, ಘನತೆವೆತ್ತ ಬದುಕು ವಿಷಯದ ಕುರಿತು ನಡೆಯುತ್ತಿದೆ.

ಪ್ರತಿ ವರ್ಷವೂ ಬಾಲ್ಯವಿವಾಹ, ಹೆಣ್ಣು ಭ್ರೂಣ ಹತ್ಯೆ, ವರದಕ್ಷಿಣೆ, ಮುಟ್ಟು, ಮಹಿಳಾ ಮೀಸಲಾತಿ, ಇತ್ಯಾದಿ ವಿಚಾರಗಳ ಕುರಿತು ಚಿಕ್ಕ ಪುಸ್ತಿಕೆಗಳನ್ನು ಮುದ್ರಿಸಿ ಜನರಿಗೆ ತಲುಪಿಸುವ ಕಾರ್ಯ ಸದ್ದಿಲ್ಲದೇ ನಡೆಯುತ್ತಿದೆ. ಬೀದಿನಾಟಕಗಳು, ಹಾಡುಗಳ ಮೂಲಕ ಜಾಗೃತಿ ಮೂಡಿಸುತ್ತಾ ಕೇವಲ ಎರಡು ದಿನ ಮಹಿಳಾ ದಿನಚರಣೆ ಮಾಡದೇ ಇದನ್ನೊಂದು ನಿರಂತರ ತಿಳಿವಿನ ಪ್ರಕ್ರಿಯೆಯಾಗಿ ವೇದಿಕೆ ಕೆಲಸ ಮಾಡುತ್ತಿದೆ.

ದುಡಿಯುವ ಮಹಿಳೆಯರ ದಿನ ಎಂದೇ ಖ್ಯಾತಿಯಾದ ಅಂತರಾಷ್ಟ್ರೀಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ನಡೆಸುತ್ತಾ, ಜಾಗೃತಿ ಮೂಡಿಸುತ್ತಾ ವೇದಿಕೆ ಆಚರಿಸುತ್ತಿದೆ. ಸಾವಿರಾರು ಜನ ಪಾಲ್ಗೊಂಡು ಅರಿವಿನ ಪಯಣದಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.

ಈ ಬಾರಿಯ ಮಾರ್ಚ್‌ 07ರ ಶನಿವಾರ ಮಂಡ್ಯದ ಅಂಬೇಡ್ಕರ್‌ ಭವನದಲ್ಲಿ “ಮಹಿಳಾ ಬದುಕು ಪಲ್ಲಟಗಳು” ವಿಷಯದ ಕುರಿತು ವಿಚಾರ ಸಂಕಿರಣ ನಡೆಯುತ್ತಿದೆ. ಮಾರ್ಚ್‌ 08ರ ಭಾನುವಾರ ನಗರದ ವಿಶ್ವೇಶ್ವರಯ್ಯ ಪ್ರತಿಮೆಯ ಬಳಿಯಿಂದ ಮೆರವಣಿಗೆ ಆರಂಭವಾಗಲಿದ್ದು, ರೈಲ್ವೇ ನಿಲ್ದಾಣದ ಬಳಿಯ ಸಿಲ್ವರ್‌ ಜ್ಯುಬಿಲಿ ಪಾರ್ಕ್‌‌ನಲ್ಲಿ ಬಹಿರಂಗ ಸಮಾವೇಶ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

-Mutturaj

Please follow and like us:
error