ರಾಜ್ಯದ ಹಿತಾಸಕ್ತಿ ಕಾಪಾಡಲು ಎನ್‌ಸಿಪಿ ಯತ್ನ: ನವಾಬ್  ಮಲಿಕ್

ಶಿವಸೇನೆಯು ಬಿಜೆಪಿ ಸರಕಾರ ಉರುಳಿಸಿದರೆ ರಾಜ್ಯದ ಹಿತಾಸಕ್ತಿ ಕಾಪಾಡಲು ಎನ್‌ಸಿಪಿ ಯತ್ನ: ನವಾಬ್  ಮಲಿಕ್

ಮುಂಬೈ, ನ.10: ವಿಶ್ವಾಸ ಮತ ಯಾಚನೆಯ ವೇಳೆ ನಮ್ಮ ಪಕ್ಷ ಬಿಜೆಪಿ ವಿರುದ್ಧ ಮತ ಚಲಾಯಿಸಲಿದೆ. ಒಂದು ವೇಳೆ ಶಿವಸೇನೆಯು ಬಿಜೆಪಿ ವಿರುದ್ಧ ಮತ ಚಲಾಯಿಸಿ ಸರಕಾರವನ್ನು ಬೀಳಿಸಿದರೆ ಪರ್ಯಾಯ ಆಯ್ಕೆಯತ್ತ ನಾವು ಯೋಚಿಸುತ್ತೇವೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ(ಎನ್‌ಸಿಪಿ)ಮುಖಂಡ ನವಾಬ್ ಮಲಿಕ್ ಹೇಳಿದ್ದಾರೆ.ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿರುವ ಬಿಜೆಪಿಗೆ ಶನಿವಾರ ರಾಜ್ಯಪಾಲ ಭಗತ್ ಸಿಂಗ್ ಸರಕಾರ ರಚನೆಗೆ ಆಹ್ವಾನಿಸಿದ್ದಾರೆ. ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ಬಿಜೆಪಿಯು ಎರಡನೇ ಅವಧಿಗೆ ಸರಕಾರ ರಚಿಸುವ ವಿಶ್ವಾಸದಲ್ಲಿದೆ.

ಸಮಾನ ಅಧಿಕಾರ ಹಂಚಿಕೆಗೆ ಸಂಬಂಧಿಸಿ ಬಿಜೆಪಿ ಹಾಗೂ ಶಿವಸೇನೆ ನಡುವೆ ಹಗ್ಗಜಗ್ಗಾಟ ಮುಂದುವರಿದಿದ್ದು, ಕುದುರೆ ವ್ಯಾಪಾರದ ಭೀತಿಯಲ್ಲಿರುವ ಶಿವಸೇನೆ ತನ್ನ 56 ಶಾಸಕರನ್ನು ಮುಂಬೈನ ರೆಸಾರ್ಟ್‌ನಲ್ಲಿ ಹಿಡಿದಿಟ್ಟುಕೊಂಡಿದೆ.

ಅಸೆಂಬ್ಲಿ ಚುನಾವಣೆಯಲ್ಲಿ 54 ಸೀಟುಗಳನ್ನು ಗೆದ್ದುಕೊಂಡಿರುವ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ರಾಜ್ಯದಲ್ಲಿನ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಎನ್‌ಸಿಪಿ ರಾಜ್ಯದಲ್ಲಿ ಪರ್ಯಾಯ ಸರಕಾರ ರಚಿಸಲು ಯತ್ನಿಸಲಿದೆ ಎಂದು ಮಲಿಕ್ ಸುಳಿವು ನೀಡಿದ್ದಾರೆ.

‘‘ರಾಜ್ಯಪಾಲರು ಬಿಜೆಪಿಗೆ ಬಹುಮತ ಇದೆಯೋ,ಇಲ್ಲವೋ ಎಂದು ಖಚಿತಪಡಿಸಿಕೊಳ್ಳಬೇಕು. ಇಲ್ಲದೇ ಹೋದರೆ ಕುದುರೆ ವ್ಯಾಪಾರ ಆರಂಭವಾಗುತ್ತದೆ. ಈ ಎಲ್ಲದರ ನಡುವೆ ಬಿಜೆಪಿ ರಾಜ್ಯದಲ್ಲಿ ಸರಕಾರ ರಚಿಸಲು ಮುಂದಾದರೆ ನಾವು ವಿಶ್ವಾಸಮತ ಯಾಚನೆಯ ವೇಳೆ ಬಿಜೆಪಿಗೆ ವಿರುದ್ಧವಾಗಿ ಮತ ಚಲಾಯಿಸುತ್ತೇವೆ. ಒಂದು ವೇಳೆ ಬಿಜೆಪಿ ಸರಕಾರ ಬಿದ್ದರೆ, ರಾಜ್ಯದ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪರ್ಯಾಯ ಸರಕಾರ ರಚನೆಗೆ ಪ್ರಯತ್ನಿಸುತ್ತೇವೆ’’ ಎಂದು ಮಲಿಕ್ ಅವರು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

ಎನ್‌ಸಿಪಿ ನವೆಂಬರ್ 12ರಂದು ಎಲ್ಲ ಶಾಸಕರ ಸಭೆ ಕರೆದಿದ್ದು, ಸಭೆಯಲ್ಲಿ ಶರದ್ ಪವಾರ್ ಹಾಜರಾಗಲಿದ್ದಾರೆ ಎಂದು ಮಲಿಕ್ ಹೇಳಿದ್ದಾರೆ.

ಮಹಾರಾಷ್ಟ್ರ ಬಿಜೆಪಿಯ ಕೋರ್ ಕಮಿಟಿ ಇಂದು ಸಭೆ ನಡೆಸಿ ರಾಜ್ಯದಲ್ಲಿ ಸರಕಾರ ರಚನೆಗೆ ಗವರ್ನರ್ ಆಹ್ವಾನದ ಬಗ್ಗೆ ಚರ್ಚಿಸಲಿದೆ

Please follow and like us:
error