ರಾಜ್ಯದ ಬಿಜೆಪಿ ಸಂಸದರು ಎಲ್ಲಿ ಅಡಗಿಕುಳಿತಿದ್ದಾರೆ ಪ್ರಧಾನಿ ಮನೆ ಮುಂದೆ ಧರಣಿ ಕೂರಿಸಿ-ಸಿದ್ದರಾಮಯ್ಯ ಆಕ್ರೋಶ

ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್, ಮಾತೃಪೂರ್ಣ ಮೊದಲಾದ ಯೋಜನೆ ಗಳಿಗೆ ಅಡ್ಡಗಾಲು ಹಾಕಿದರೆ ಬಡವರ ಶಾಪ ತಟ್ಟದೆ ಇರದು

ಕನ್ನಡನೆಟ್ ನ್ಯೂಸ್  : ಲಸಿಕೆ‌ ಪಡೆಯುವುದನ್ನು ಪ್ರೊತ್ಸಾಹಿಸಬೇಕಾದ  ಕೇಂದ್ರ ಬಿಜೆಪಿ

ಸರ್ಕಾರ, ಅದರ ಬೆಲೆ ಏರಿಸಿ ಜನತೆ ಅದನ್ನು ಪಡೆಯದಂತೆ ಮಾಡಲು ಹೊರಟಿದೆ. ನರೇಂದ್ರ ಮೋದಿಯವರೇ, ‘ಟೀಕಾ ಉತ್ಸವ್’ ನಂತಹ ಬಾಯಿ ಬಡಾಯಿಯನ್ನು ಬಿಟ್ಟಾಕಿ ಮೊದಲು ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಿ. ಅನ್ನಭಾಗ್ಯ ಯೋಜನೆ ಎಂದರೆ ಉರ್ಕೊಳ್ಳುತ್ತಿದ್ದ ಮತ್ತು ಆ ಯೋಜನೆಗೆ ಕಲ್ಲು ಹಾಕಲು ಪ್ರಯತ್ನಿಸುತ್ತಿರುವ

ಕರ್ನಾಟಕದ ಬಿಜೆಪಿ ನಾಯಕರು, ಈಗ  ಭಾರತದ ಪ್ರದಾನಿ ಘೋಷಿಸಿರುವ ಎರಡು ತಿಂಗಳ ಕಾಲ ಐದು ಕಿಲೋ ಅಕ್ಕಿ ನೀಡುವ ಯೋಜನೆಯನ್ನು ಕೊಂಡಾಡುತ್ತಿರುವುದು ತಮಾಷೆಯಾಗಿದೆ ಎಂದು ವಿಪಕ್ಷ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶವ್ಯಕ್ತಪಡಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು ಕೊರೊನಾದಿಂದ ತೀವ್ರ ಸಂಕಷ್ಟಕ್ಕೀಡಾಗಿರುವ ಜನರಿಗೆ ಪ್ರತಿ ತಿಂಗಳು ಉಚಿತವಾಗಿ ಹತ್ತು ಕಿಲೋ ಅಕ್ಕಿ ನೀಡಬೇಕೆಂದು ಪ್ರಾರಂಭದಿಂದಲೂ ಒತ್ತಾಯಿಸುತ್ತಾ ಬಂದಿದ್ದೇನೆ.  ಭಾರತದ ಪ್ರದಾನಿಗಳೆ ಈಗಲಾದರೂ ಎಚ್ಚೆತ್ತುಕೊಳ್ಳಿ. ಕೊರೊನಾ‌ ಕಷ್ಟ ಕೊನೆಯಾಗುವ ವರೆಗಾದರೂ ಹತ್ತು ಕಿಲೋ ಅಕ್ಕಿ ನೀಡಿ ಪುಣ್ಯ ಕಟ್ಕೊಳ್ಳಿ. ಅನ್ನಭಾಗ್ಯ ಯೋಜನೆಯನ್ನು ನಿಲ್ಲಿಸಲು ಶತಪ್ರಯತ್ನ ಮಾಡುತ್ತಿರುವ ರಾಜ್ಯ ಸರ್ಕಾರ ಹಲವಾರು ಜಿಲ್ಲೆಗಳಲ್ಲಿ ತಿಂಗಳಿಗೆ ಐದು‌ ಕಿಲೋ ಅಕ್ಕಿ ಬದಲಿಗೆ ಎರಡು ಕಿಲೋ ಅಕ್ಕಿ ನೀಡುತ್ತಿದೆ.

ಕರ್ನಾಟಕದ ಮುಖ್ಯಮಂತ್ರಿ ಅವರೇ, ಈ ಅನ್ಯಾಯವನ್ನು ತಕ್ಷಣ ಸರಿಪಡಿಸಿ. ಬಡವರ ಶಾಪಕ್ಕೆ ಈಡಾಗಬೇಡಿ. ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯ ಮಾಡುವ ಉದ್ದೇಶದಿಂದ ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್, ಮಾತೃಪೂರ್ಣ ಮೊದಲಾದ ಯೋಜನೆಗಳನ್ನು ಜಾರಿಗೆ ತಂದಿದ್ದೆ. ಅವೆಲ್ಲವನ್ನೂ ಬಡವರ ವಿರೋಧಿ ಕರ್ನಾಟಕ ಬಿಜೆಪಿ  ಸರ್ಕಾರ ನಿಲ್ಲಿಸಲು ಹೊರಟಿದೆ. ಅವುಗಳಿಗೆ ಅಡ್ಡಗಾಲು ಹಾಕಿದರೆ ಬಡವರ ಶಾಪ ತಟ್ಟದೆ ಇರದು. ಔಷಧಿ,‌ಆಮ್ಲಜನಕ, ವೆಂಟಿಲೇಟರ್ ಕೊಡಿ ಎಂದು‌  ಪ್ರದಾನಮಂತ್ರಿಯವರನ್ನು ಬೇಡುತ್ತಿರುವ  ಕರ್ನಾಟಕದ ಮುಖ್ಯಮಂತ್ರಿಯವನ್ನು  ಕಂಡಾಗ‌ ಕನಿಕರ ಮೂಡುತ್ತಿದೆ. 25  ಕರ್ನಾಟಕದ ಬಿಜೆಪಿ ಸಂಸದರು ಎಲ್ಲಿ ಅಡಗಿ ಕೂತಿದ್ದಾರೆ? ಅವರನ್ನು ದೆಹಲಿಗೆ ಅಟ್ಟಿ ರಾಜ್ಯದ ನ್ಯಾಯಬದ್ಧ ಪಾಲಿಗಾಗಿ ಪ್ರಧಾನಿ ಮನೆ ಮುಂದೆ ಧರಣಿ ಕೂರಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ

Please follow and like us:
error