ರಾಜ್ಯದಲ್ಲಿ 17,154 ನೀರು ಶುದ್ಧೀಕರಣ ಘಟಕಗಳ ಅನುಷ್ಠಾನ: ಸಚಿವ ಈಶ್ವರಪ್ಪ

ಬೆಂಗಳೂರು,

: ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ 17154 ನೀರು ಶುದ್ಧೀಕರಣ ಘಟಕಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಶುಕ್ರವಾರ ವಿಧಾನಪರಿಷತ್‌ನಲ್ಲಿ ರಘುನಾಥ್‌ರಾವ್ ಮಲ್ಕಾಪೂರೆ ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಅನುಷ್ಠಾನಗೊಂಡಿರುವ 17154 ನೀರು ಶುದ್ಧೀಕರಣ ಘಟಕಗಳ ಪೈಕಿ 12,602 ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, 4552 ಘಟಕಗಳು ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಲಿಖಿತ ಉತ್ತರ ನೀಡಿದರು.

ಈ ವೇಳೆ ಸಾವಿರಾರು ಕೋಟಿ ಖರ್ಚು ಮಾಡಿ ಶುದ್ಧ ನೀರಿನ ಘಟಕಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಆದರೆ, ಅವು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಈ ಕುರಿತು ಸರಕಾರ ಗಮನ ಹರಿಸಿದೆಯಾ ಎಂದು ರಘುನಾಥ್‌ರಾವ್ ಪ್ರಶ್ನಿಸಿದ್ದು, ಅದಕ್ಕೆ ಸಚಿವರು, ನಿಯಮಾನುಸಾರ ಟೆಂಡರ್ ಕರೆದು ಗುತ್ತಿಗೆ ನೀಡಲಾಗಿದೆ. ಎಲ್ಲ ಕಡೆಗಳಲ್ಲಿಗೂ ಈ ಕುರಿತು ಗಮನ ಹರಿಸಲಾಗಿದೆ ಎಂದು ಹೇಳಿದರು.

ಗ್ರಾಮ ಪಂಚಾಯತ್ ಮಟ್ಟದಲ್ಲಿ ಅನುಷ್ಠಾನವಾದ, ಇತರೆ ಅನುದಾನದಲ್ಲಿ ಅನುಷ್ಠಾನವಾದವುಗಳ ಪೈಕಿ ನಿರ್ವಹಣೆ ಅವಧಿ ಮುಗಿದಿರುವ, ನಿರ್ವಹಣೆ ಸಮಸ್ಯೆಯಿರುವ 8142 ಘಟಕಗಳನ್ನು 134 ಪ್ಯಾಕೇಜ್ ಮಾಡಿ ಟೆಂಡರ್ ಕರೆಯಲಾಗಿದೆ. ಮುಂದಿನ ಐದು ವರ್ಷಗಳ ನಿರ್ವಹಣೆಗಾಗಿ ಹಸ್ತಾಂತರವನ್ನೂ ಮಾಡಲಾಗಿದೆ ಎಂದರು.

ಶುದ್ಧ ನೀರಿನ ಘಟಕಗಳನ್ನು ವ್ಯವಸ್ಥಿತವಾಗಿ ನಿರ್ವಹಿಸದಿರುವುದಕ್ಕೆ ಕಾರಣವಾದವರ ವಿರುದ್ಧ ಸರಕಾರ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಂಬಂಧಪಟ್ಟ ಏಜೆನ್ಸಿ, ಗುತ್ತಿಗೆದಾರರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿದೆ ಎಂದ ಸಚಿವರು, ಅಗತ್ಯವಿದ್ದಲ್ಲಿ, ಈ ಕುರಿತು ತನಿಖೆಗಾಗಿ ಸದನ ಸಮಿತಿ ರಚನೆ ಮಾಡಲಾಗುವುದು ಎಂದು ವಿವರಿಸಿದರು.

Please follow and like us:
error