ರಾಜ್ಯದಲ್ಲಿ ಮದ್ಯ ನಿಷೇಧಕ್ಕೆ ಆಗ್ರಹ: ಪರಿಸರ, ರೈತ, ದಲಿತ ಸಂಘಟನೆಗಳ ನಾಯಕರಿಂದ ಬಿಎಸ್‍ವೈಗೆ ಪತ್ರ

ಬೆಂಗಳೂರು, ಮೇ 9: ರಾಜ್ಯ ಸರಕಾರ ತನ್ನ ಆದಾಯಕ್ಕಾಗಿ ಮದ್ಯದಂಗಡಿಗಳನ್ನು ಪ್ರಾರಂಭಿಸಿರುವುದು ಸರಿಯಲ್ಲ. ಈ ಕೂಡಲೇ ಬಂದ್ ಮಾಡಬೇಕೆಂದು ಪರಿಸರ ತಜ್ಞರು, ಶಿಕ್ಷಣ, ರೈತ, ಪ್ರಗತಿಪರ, ದಲಿತ ಸಂಘಟನೆಗಳ ನಾಯಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮನವಿ ಮಾಡಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿರುವ ಸಂಘಟನೆಗಳ ನಾಯಕರು, ಲಾಕ್‍ಡೌನ್ ಅವಧಿಯಲ್ಲಿ ರಾಜ್ಯ ಸರಕಾರ ಮದ್ಯ ನಿಷೇಧದ ದಿಟ್ಟ ನಿರ್ಧಾರದಿಂದಾಗಿ ಲಕ್ಷಾಂತರ ಕುಟುಂಬಗಳು ನೆಮ್ಮದಿಯ ಉಸಿರು ಬಿಡುವಂತಾಗಿತ್ತು. ಜನರ ಆರೋಗ್ಯ ನಂಬಲಸಾಧ್ಯ ರೀತಿಯಲ್ಲಿ ಸುಧಾರಿಸತೊಡಗಿತ್ತು. ಆದರೆ, ಈಗ ಏಕಾಏಕಿ ಮದ್ಯದಂಗಡಿಗಳನ್ನು ಪ್ರಾರಂಭಿಸುವುದರ ಮೂಲಕ ಜನತೆಯ ಬಹುದಿನದ ನಿರೀಕ್ಷೆಗಳನ್ನು ಹುಸಿ ಮಾಡಲಾಗಿದೆ.

ಮದ್ಯದಂಗಡಿಗಳನ್ನು ತೆರೆಯುವ ನಿರ್ಧಾರದಿಂದ ಕೊರೋನ ಸೋಂಕು ರಾಜ್ಯದಲ್ಲಿ ವೇಗವಾಗಿ ವ್ಯಾಪಕವಾಗಿ ಹರಡಲು ಸರಕಾರವೇ ಅನುವು ಮಾಡಿಕೊಟ್ಟಂತಾಗಿದೆ. ಲಾಕ್‍ಡೌನ್ ಎನ್ನುವುದಕ್ಕೆ ಅರ್ಥವೇ ಇಲ್ಲದಂತಾಗಿದೆ. ಈ ಸಮಯದಲ್ಲಿ ರೋಗನಿರೋಧಕ ಶಕ್ತಿ ಬೆಳೆಸಿಕೊಳ್ಳಬೇಕಾದ ಜನ ಮದ್ಯಪಾನದಿಂದ ಮತ್ತಷ್ಟು ದುರ್ಬಲರಾಗಿ ಕೊರೋನ ಸೋಂಕಿಗೆ ಸುಲಭವಾಗಿ ತುತ್ತಾಗುವುದರಲ್ಲಿ ಅನುಮಾನವೇ ಇಲ್ಲ. ಈ ವಿಚಾರಗಳ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮದ್ಯದಂಗಡಿಗಳನ್ನು ತಕ್ಷಣ ಬಂದ್ ಮಾಡುವ ಮೂಲಕ ಜನರ ಆಶೋತ್ತರಗಳಿಗೆ ಬೆಲೆ ಕೊಡಬೇಕೆಂದು ಪತ್ರಿಕಾ ಪ್ರಕಟನೆಯ ಮೂಲಕ ಮನವಿ ಮಾಡಲಾಗಿದೆ.

ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಪತ್ರಕ್ಕೆ ಪರಿಸರವಾದಿ ಯಲ್ಲಪ್ಪರೆಡ್ಡಿ, ಗ್ರಾಮ ಸೇವಾ ಸಂಘದ ಪ್ರಸನ್ನ, ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್, ವೀರಸಂಗಯ್ಯ, ಕರ್ನಾಟಕ ಪ್ರಾಂತರೈತ ಸಂಘದ ಬಯ್ಯಾರೆಡ್ಡಿ, ದಸಂಸ ಸಂಚಾಲಕ ಮಾವಳ್ಳಿ ಶಂಕರ್ ಸೇರಿದಂತೆ ಪ್ರಗತಿಪರ ಸಂಘಟನೆಗಳ ಮುಖಂಡರು ಬೆಂಬಲ ಸೂಚಿಸಿದ್ದಾರೆ.

Please follow and like us:
error