“ರವಿ ಬೆಳಗೆರೆ ಎಪಿಸೋಡ್” ಒಂದು ಮುಖ್ಯ ಸಂಗತಿ -ಒಂದು ಕ್ಷಣ ಮೌನ ಮತ್ತು ದೀರ್ಘ ನಿಟ್ಟುಸಿರು

-ಹರ್ಷಕುಮಾರ್ ಕುಗ್ವೆ

ರವಿ ಬೆಳಗೆರೆ ನಿಧನದ ನಂತರ ಅನೇಕ ಗೆಳೆಯರು ತಮ್ಮ ತಮ್ಮ ನೋಟಗಳನ್ನು ತೀಕ್ಷ್ಣವಾಗಿ ಬರೆದಿದ್ದಾರೆ. ಈ ಯಾದಿಯಲ್ಲಿ ನನ್ನ ಬರೆಹವೇ ಕಡೆಯದಿರಬಹುದು. ಆದರೂ ನಾಡಿನಲ್ಲಿ “ರವಿ ಬೆಳಗೆರೆ ಎಪಿಸೋಡ್” ಒಂದು ಮುಖ್ಯ ಸಂಗತಿ ಎನಿಸಿ ನನ್ನ ತಿಳಿವಿಗೆ ದಕ್ಕಿದ ಕೆಲ ಸಂಗತಿಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ.

ನಾನು ಹೈ ಸ್ಕೂಲಿನಲ್ಲಿರುವಾಗ ನನ್ನ ವಾರಿಗೆಯ ಗೆಳೆಯನೊಬ್ಬ “ಖಾಸ್ ಬಾತ್” ‘ ಲವ್ ಲವಿಕೆ” ಓದುತ್ತಾ ಆಗಾಗ ಅದರ ಕುರಿತು ಹೇಳುತ್ತಿದ್ದನಾದರೂ ನಾನು ತಲೆ ಕೆಡಿಸಿಕೊಂಡಿರಲಿಲ್ಲ. ನನ್ನ ಪಿಯುಸಿ ದಿನಗಳಲ್ಲಿ ಮಾತ್ರ ಹಾಯ್ ಬೆಂಗಳೂರು ಆಗಾಗ ತಂದು ಓದುತ್ತಿದ್ದೆವು.‌ ಪತ್ರಿಕೆಯಲ್ಲಿ ಹೈದರಾಬಾದ್ ಕರ್ನಾಟಕದ ಕಡೆ ನಕ್ಸಲರು ನಡೆಸುತ್ತಿದ್ದ ರೈತಕೂಲಿ ಹೋರಾಟದ ಕುರಿತ ವರದಿಗಳನ್ನು ಆಗಾಗ ಓದುತ್ತಿದ್ದೆವು. ಆ ಹೊತ್ತಿಗೆ ನಾನೊಮ್ಮೆ ಒಂದು ಸೆಮಿನಾರ್ ನಿಮಿತ್ತ ರಾಯಚೂರಿನ‌ ಹಳ್ಳಿಗಳಲ್ಲಿ ಓಡಾಡಿ ಬಂದು ಅಲ್ಲಿನ ಸ್ಥಿತಿ ಗತಿಗಳನ್ನು ಕಂಡು ಆಘಾತಗೊಂಡಿದ್ದೆ.‌ ಹೀಗಾಗಿ ಆ ಎಡಪಂಥೀಯ ಚಳವಳಿ ನಮ್ಮ ಆಗಿನ ಆಲೋಚನೆಗಳನ್ನು ಸಾಕಷ್ಟು ಪ್ರಭಾವಿಸಿತ್ತು.‌ ಆದರೆ ಹಾಯ್ ಬೆಂಗಳೂರಿನಲ್ಲಿ ಪ್ರಕಟವಾಗುತ್ತಿದ್ದ ಆ ವರದಿಗಳನ್ನು ಪೂರ್ತಿಯಾಗಿ ರವಿ ಬೆಳಗೆರೆ ಬರೆಯುತ್ತಿರಲಿಲ್ಲವೆಂದು ನಮಗೆ ತಿಳಿದಿತ್ತು.‌

ರವಿ ಬೆಳಗೆರೆ ಖಾಸ್ ಬಾತ್ ನಲ್ಲಿ ಆಗಾಗ ಕೊಂಡಪಲ್ಲಿ ಸೀತಾರಾಮಯ್ಯ ಅವರೊಂದಿಗಿನ ತನ್ನ ಒಡನಾಟದ ಕುರಿತು ಪುಂಖಾನುಪುಂಖವಾಗಿ ಬರೆಯುತ್ತಿದ್ದುದು ಮಾತ್ರ ನಗೆ ಬರಿಸುತ್ತಿತ್ತು.‌ ಯಾಕೆಂದರೆ ಕೊಂಡಪಲ್ಲಿ ಸೀತಾರಾಮಯ್ಯ ಸಿಪಿಐ, ಸಿಪಿಎಂ, ಸಿಪಿಎಂ-ಎಲ್ ಮತ್ತು ನಂತರ ತಾನೇ ಮುಂಚೂಣಿ ವಹಿಸಿಕೊಂಡಿದ್ದ ಸಿಪಿಐ ಎಂ‌ ಎಲ್ ಪೀಪಲ್ಸ್ ವಾರ್ ಎಂಬ ಪಕ್ಷಗಳಲ್ಲಿ ಬದುಕನ್ನಿಡೀ ಸವೆಸಿದ್ದ ಒಬ್ಬ ಬಂಡುಕೋರ. ತಮ್ಮ ಜೀವಿತದ ಕಡೆಯ ದಿನಗಳಲ್ಲಿ ಮಾನಸಿಕ ಸ್ಥಿಮಿತತೆ‌ ಕಳೆದುಕೊಂಡು ತಮ್ಮವರಿಂದಲೇ, ಕೊನೆಗೆ ಬಾಳ ಸಂಗಾತಿಯಿಂದಲೂ ದೂರವಾಗಿ ದುರಂತ ಅಂತ್ಯ ಕಂಡಿದ್ದವರು ಕೊಂಡಪಲ್ಲಿ ಸೀತಾರಾಮಯ್ಯ.‌ ಸಾಲದೆಂಬಂತೆ ಅವರ ಮಕ್ಕಳು, ಅಳಿಯ ಕೂಡಾ ಇದೇ ಹೋರಾಟದ ದಾರಿಯಲ್ಲಿ ಪ್ರಾಣ ಕಳೆದುಕೊಂಡಿದ್ದರು. ಇತ್ತೀಚಿಗೆ ನವ ಕರ್ನಾಟಕ ಪ್ರಕಾಶನ ಪ್ರಕಟಿಸಿರುವ “ಒಂಟಿ ಸೇತುವೆ” ಎಂಬ ಆತ್ಮಕಥೆಯಲ್ಲಿ ಈ ಕುರಿತ ದುರಂತಮಯ ವಿವರಗಳು ದಾಖಲಾಗಿವೆ.‌

ಕೊಂಡಪಲ್ಲಿ ಸೀತಾರಾಮಯ್ಯ ಎಂಬ ಹೆಸರು ರವಿ ಬೆಳಗೆರೆಗೆ ತನ್ನ ಓದುಗರಲ್ಲಿ ಕೇವಲ ಸೆನ್ಸೇಶನ್ ಸೃಷ್ಟಿಸಲು ಒಂದು ಪುಕ್ಕಟೆ ಸರಕಾಗಿದ್ದು ಬಿಟ್ಟರೆ ಬೇರೆ ಏನೂ ಅಲ್ಲ. ನಿಜ ಎಂದರೆ ಬೆಳಗೆರೆಗೆ ಕೊಂಡಪಲ್ಲಿ ಸೀತಾರಾಮಯ್ಯ ಅವರಾಗಲೀ, ಅವರ ಬದುಕಿನ ಆಳ ಅಗಲಗಳಾಗಲೀ ಏನೇನೂ ತಿಳಿದಿರಲೇ ಇಲ್ಲ.

ಕೆಲವೊಮ್ಮೆ ನಮ್ಮ ಆಲೋಚನೆಗಳಿಗೆ ಪೂರಕವಾಗಿ ಬೆಳಗೆರೆ ಬರೆದಾಗ, ಅಥವಾ ಅಂತಹ ವರದಿಗಳು ಬಂದಾಗ ನಾವು ಓದಿ ಖುಶಿ ಪಟ್ಟಿದ್ದು ನಾಲ್ಕು ಜನಕ್ಕೆ ಓದಿಸಿದ್ದೂ ಇದೆ.‌ ಉದಾಹರಣೆಗೆ ಪ್ರತಾಪ್ ಸಿಂಹ ಮತ್ತು ವಿಷ ಭಟ್ಟನೊಂದಿಗೆ ಬೆಳಗೆರೆ ನಡೆಸಿದ ವೈಯಕ್ತಿಕ ಜಗಳದಲ್ಲಿ ಕೆಲ ಸತ್ಯಗಳು ಅನಾವರಣಗೊಂಡಿದ್ದವು. ಅಂತಹ ಸಮಯದಲ್ಲಿ ನಾವು ಬೆಳಗೆರೆ ಕಡೆ ವಾಲಿಕೊಂಡಿದ್ದು ಸಹ ಸತ್ಯ.‌

ಇವಿಷ್ಟನ್ನು ಹೇಳಿಕೊಳ್ಳದೇ ಹೋದರೆ ನಮಗೆ ನಾವೇ ಆತ್ಮವಂಚನೆ ಮಾಡಿಕೊಂಡಂತಾಗುತ್ತದೆ.

ರವಿ ಬೆಳಗೆರೆ ಒಬ್ಬ ಪತ್ರಕರ್ತನಾಗಿ ಮತ್ತು ಕನ್ನಡದ ಒಬ್ಬ ಬರೆಹಗಾರನಾಗಿ ಕನ್ನಡ ಓದುಗರಿಗೆ ನೀಡಿದ್ದು ಏನು ಎಂದು ಮೌಲ್ಯಮಾಪನ ಮಾಡಲು ಹೊರಟರೆ ಅಲ್ಲಿ ಇದ್ದುದು ನೂರಕ್ಕೆ ತೊಂಭತ್ತು ಪಾಲು ಬರೀ ಹೊಟ್ಟು. ಆದರೆ ಈ ಹೊಟ್ಟನ್ನು ಆತ ಜನರಿಗೆ ಪ್ಯಾಕ್ ಮಾಡಿ ಕೊಟ್ಟ ರೀತಿ ಇದೆಯಲ್ಲಾ, ಅದರಲ್ಲಿ ಆತನ ದೈತ್ಯ ಕ್ರಿಯೇಟಿವಿಟಿ ಇತ್ತೆಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಈ ಕ್ರಿಯೇಟಿವಿಟಿಯನ್ನೇ ಬೆಳಗೆರೆಯ ವ್ಯಕ್ತಿತ್ವ ಎಂದು ಭ್ರಮೆಗೆ ಬಿದ್ದ ಕೆಲ ಹಿರಿಯರು, ಚಿಂತಕರು ಬೆಳಗೆರೆಯನ್ನು ಹಾಡಿ ಹೊಗಳಿದ್ದು ಕಂಡು ನಗುವುದೋ ಅಳುವುದೋ ತಿಳಿಯುತ್ತಿಲ್ಲ.‌

80 ರ ದಶಕದಲ್ಲಿ ಕನ್ನಡದ ಓದುಗರನ್ನು ಸೂಜಿಗಲ್ಲಿನಂತೆ ಸೆಳೆದು, ಓದುಗರ ಶಕ್ತಿಗೆ ಒಂದು ಸಮಷ್ಟಿ ಸ್ವರೂಪ ನೀಡಿ ಅದಕ್ಕೊಂದು ಕಸುವು ನೀಡಿದ್ದು ಪಿ.ಲಂಕೇಶ್. ಲಂಕೇಶ್ ತಮ್ಮ ಪತ್ರಿಕೆಯ ಮೂಲಕ ತಾವೂ ಎತ್ತರಕ್ಕೆ ಬೆಳೆದರು. ಮಾತ್ರವಲ್ಲದೇ ಜೊತೆ ಜೊತೆಗೆ ಓದುಗರನ್ನೂ ಬೆಳೆಸಿದರು. ಬಹಳ ಮುಖ್ಯವಾಗಿ ಓದುಗರ ಮನಸ್ಸನ್ನು ಸಂಕುಚಿತಗೊಳ್ಳಲು ಬಿಡದೆ ವಿಶಾಲಗೊಳಿಸಿದರು. ತಾವೊಬ್ಬ ರಾಜಕೀಯ ಕಾರ್ಯಕರ್ತರಾಗಿಯೂ ಕೆಲಸ ಮಾಡಿದ್ದ, ನಾಡಿನ ಉದ್ದಗಲಕ್ಕೆ ತಿರುಗಾಡಿದ್ದ ಲಂಕೇಶ್ ಪತ್ರಿಕೆಯನ್ನು ಒಂದು ವಿರೋಧ ಪಕ್ಷದ ನಿಟ್ಟಿನಲ್ಲಿ ಕಟ್ಟಿ ನಿಲ್ಲಿಸಿದ್ದು ಮೇರು ಸಾಧನೆ.‌

ಲಂಕೇಶ್ ಪ್ರಚುರಪಡಿಸಿದ್ದ ಟ್ಯಾಬ್ಲಾಯ್ಡ್ ಮಾಧ್ಯಮವನ್ನೇ 90 ರ ದಶಕದ ಆರಂಭದಲ್ಲಿ ರವಿ ಬೆಳಗೆರೆಯೂ ಆಯ್ಕೆ ಮಾಡಿಕೊಂಡಿದ್ದ. ಅದುವರೆಗೆ ಸರ್ಕಾರವನ್ನು ಎಚ್ಚರಿಸುವ, ಸಮಾಜವನ್ನು ತಿದ್ದುವ, ಓದುಗರ ಅರಿವು ಹೆಚ್ಚಿಸುವ ಪ್ರಬಲ ಮಾಧ್ಯಮವಾಗಿ ಕೆಲಸ ಮಾಡಿದ್ದ ಟ್ಯಾಬ್ಲಾಯ್ಡ್ ಪತ್ರಿಕೋದ್ಯಮಕ್ಕೆ ಯಾರೂ ಊಹಿಸಲೂ ಅಸಾಧ್ಯವಾಗಿದ್ದ ವಿಕೃತ ತಿರುವು ನೀಡಿದ ತಗ್ಗಳಿಕೆ ಮಾತ್ರ ರವಿ ಬೆಳಗೆರೆಗೇ ಸಲ್ಲಬೇಕು.
ಬೆಳಗೆರೆಯ ಸಾರಥ್ಯದಲ್ಲಿ ಪಾತಕ ಲೋಕ ವಿಜೃಂಭಿಸಿತು, ಬೆಡ್ ರೂಮ್ ಕತೆಗಳು ರೋಚಕವಾಗಿ ಬಣ್ಣಿಸಲ್ಪಟ್ಟವು, ವ್ಯಕ್ತಿಗಳ ಖಾಸಗಿತನ ಬೆಳಗೆರೆಯ ಲಾಭದ ಸರಕಾಯಿತು. ರೌಡಿಸಂ ನಂತಹ ಅಪರಾಧಗಳಿಂದ ಪತ್ರಿಕೆ ಬೆಳೆಯಿತು ಮಾತ್ರವಲ್ಲ ಪತ್ರಿಕೆ ರೌಡಿಸಂನ್ನೂ ಬೆಳೆಸಿತು.

ಇದರ ನಡುನಡುವೆ ಬಲಪಂಥೀಯ ಶಕ್ತಿಗಳ ಚಿಂತನೆಗಳನ್ನು ಪತ್ರಿಕೆಯ ಓದುಗರಲ್ಲಿ ಹುಲುಸಾಗಿ ಬೆಳೆಸಿದ್ದು ಸಹ ರವಿ ಬೆಳಗೆರೆ. ಇಸ್ಲಾಮೊಫೋಬಿಯಾ ಬೆಳೆಯಲೂ ಬೆಳಗೆರೆಯ ಕೊಡುಗೆ ಕಡಿಮೆಯೇನಲ್ಲ. ಆತನ ಮುಸ್ಲಿಂ ಎಂಬ ಪುಸ್ತಕವನ್ನೇ ನೋಡಿ.
ಇನ್ನು “ಸೆಕ್ಸ್” ನ್ನು ಸರಕಾಗಿಸಿ ರವಿ ಬೆಳಗೆರೆ ಮಾಡಿಕೊಂಡಷ್ಟು ಲಾಭವನ್ನು ಕನ್ನಡದಲ್ಲಿ ಬೇರಾರೂ ಮಾಡಿರಲಾರರು.‌ ರವಿ ಬೆಳಗೆರೆಗೆ ಖುಶ್ವಂತ್ ಸಿಂಗ್ ಅವರ ಕಂಪನಿ ಆಫ್ ವಿಮೆನ್, ಮಾರ್ಕ್ವೆಜ್ ನ ಲವ್ ಇನ್ ದ ಟೈಮಾಫ್ ಕಾಲೆರಾ (ಮಾಂಡೋವಿ) ಮಾತ್ರ ಕನ್ನಡಕ್ಕೆ ತರಬೇಕಾದ ಕೃತಿಗಳಾಗಿ ಕಾಣಿಸುತ್ತವೆ ಎಂದರೆ ಅದು ಓದುಗರ ಮನಸ್ಸುಗಳನ್ನು ಸೆಡ್ಯೂಸ್ ಮಾಡಿ ಲಾಭ ಮಾಡಿಕೊಳ್ಳಬಹುದು ಎಂಬ ಒಂದೇ ಕಾರಣಕ್ಕೆ. ಖುಶ್ವಂತ್ ಸಿಂಗ್ ಮತ್ತು ಮಾರ್ಕ್ವೆಜ್ ರ ಇನ್ನಿತರ ಸಾಮಾಜಿಕ ಮೌಲ್ಯಗಳ ಕೃತಿಗಳನ್ನೇನಾದರೂ ಇದೇ ಬೆಳಗೆರೆ ಕನ್ನಡಕ್ಕೆ ತಂದಿದ್ದರೆ ಆತನ ಹಿರಿಮೆಯೂ ಹೆಚ್ಚುತ್ತಿತ್ತಲ್ಲವೆ?

90 ರ ದಶಕ ಸಾಮಾಜಿಕ ಚಳವಳಿಗಳು ಬಹು ಮಟ್ಟಿಗೆ ಇಳಿಮುಖ ಕಂಡು ಬಹಳ ಮಟ್ಟಿಗೆ ಭ್ರಷ್ಟಗೊಂಡ ಮತ್ತು ಸಾಮುದಾಯಿಕ ಹಿತಕ್ಕಿಂತಲೂ ಸ್ವಪ್ರತಿಷ್ಠೆ, ಸ್ವಹಿತಾಸಕ್ತಿಗಳು ಹೆಚ್ವಿದ ಕರಾಳ ದಶಕ ಕೂಡಾ ಆಗಿತ್ತು.‌ 70-80 ರ ದಶಕದ ದಟ್ಟ ಚಳವಳಿಗಳು ಮತ್ತು ಸಾಮಾಜಿಕ ರಾಜಕೀಯ ವಾಗ್ವಾದಗಳು “ಲಂಕೇಶ್” ಅವರನ್ನು ಹೇಗೆ ರೂಪಿಸಿದ್ದವೋ ಹಾಗೆಯೇ 90 ರ ದಶಕದ ಸಾಮಾಜಿಕ ಅಧಃಪತನವೂ ಬೆಳಗೆರೆಯಂತಹ ವಿಕ್ಷಿಪ್ತ ವ್ಯಕ್ತಿತ್ವ ರೂಪುಗೊಳ್ಳಲು, ರಾರಾಜಿಸಲು ಒಂದು ಕಾರಣವಾಗಿತ್ತು ಎಂಬುದನ್ನು ಮರೆಯುವಂತಿಲ್ಲ. ಲಂಕೇಶ್ ಒಂದು ಪೀಳಿಗೆಯನ್ನು ಎಚ್ವರಿಸಿದ ಮರುಗಳಿಗೆಯಲ್ಲೇ ಬೆಳಗೆರೆ ಮತ್ತೊಂದು ಪೀಳಿಗೆಯನ್ನು “ರವಿ ಬೆಳಗೆರೆ” ಎಂಬ ಕತ್ತಲ ಬಾವಿಯಲ್ಲಿ ಬೀಳಿಸಿ ಹೊರಬರಲಾರದಂತೆ ಕೂಪಮಂಡೂಕಗಳಾಗಿಸಿದ ವಿದ್ಯಮಾನವೂ ನಡೆಯಿತು.‌

2000 ರ ಮೊದಲ ದಶಕದಲ್ಲಿ ಸಮಾಜವನ್ನು ಪ್ರಭಾವಿಸತೊಡಗಿದ ಸುದ್ದಿ ವಾಹಿನಿಗಳು ಒಂದು ರೀತಿಯಲ್ಲಿ ಟ್ಯಾಬ್ಲಾಯ್ಡ್ ಪತ್ರಿಕೋದ್ಯಮದ ರಭಸಕ್ಕೆ ತಡೆ ಒಡ್ಡಿದವು. ನಂತರವೂ ರವಿ ಬೆಳಗೆರೆ ಈ ಟಿವಿಯ ಕ್ರೈಂ ಡೈರಿ ಮೂಲಕ ಅದೇ ಕೆಲಸ ಮಾಡಿದ. ಈಗ ರೌಡಿಗಳು ಟೀವಿಯಲ್ಲೂ ಕಾಣಿಸಿಕೊಳ್ಳಬಹುದು, ಮಿಂಚಬಹುದು ಎಂಬ ಹಾತೊರಿಕೆಯಲ್ಲಿ ಮರ್ಡರ್ ಮಾಡಿ ಸೀದಾ ಬೆಳಗೆರೆಗೆ ತಿಳಿಸುವ ಮಟ್ಟಿಗೆ ರೌಡಿಗಳು ಸುಧಾರಿಸಿಕೊಂಡರು! ಕ್ರೈಂ ಡೈರಿಯ ಬೆಳಗೆರೆಯ ನಿರೂಪಣೆ ಶೈಲಿಯೂ ಪಾಪುಲಾರಿಟಿ ಗಳಿಸಿಕೊಂಡಿತು.

ತನ್ನ ಪಾಪದ ಈ ಸಾಮಾಜಿಕ ಪಾಪಕೃತ್ಯಗಳನ್ನು ಕವರ್ ಅಪ್ ಮಾಡಲು ಸಿನಿಮಾ ಕಲಾವಿದರ ಕುರಿತ ಕಾರ್ಯಕ್ರಮಗಳನ್ನೂ ಬೆಳಗೆರೆ ನಡೆಸುತ್ತಿದ್ದ. ಆ ಕಾರ್ಯುಮಗಳನ್ನು ನೋಡಿ ಭಾವುಕರಾಗಿ‌ ದಳದಳನೆ ಕಣ್ಣೀರು ಸುರಿಸಿದವರು ಎಷ್ಟೋ ಮಂದಿ.

ತೆರಣಿಯ ಹುಳು ತಾನು ನೇಯ್ದ ನೂಲಿನಲ್ಲಿ ತಾನೇ ಹೇಗೆ ಸುತ್ತಿಕೊಳ್ಳುತ್ತದೆಯೋ ಅದೇ ಸ್ಥಿತಿ ರವಿ ಬೆಳಗೆರೆಯದೂ ಆಯಿತು. ತಾನು ಅಪರಾಧಗಳ ಬಗ್ಗೆ ಬರೆದಿದ್ದು ಮಾತ್ರವಲ್ಲ ಸ್ವತಃ ಒಬ್ಬ ಕ್ರಿಮಿನಲ್ ಎಂಬುದು ಜಗಜ್ಜಾಹೀರಾಯಿತು. ಇತರರ ಖಾಸಗಿತನವನ್ನು ಚಪ್ಪರಿಸುತ್ತಿದ್ದ ಬೆಳಗೆರೆಯ ಖಾಸಗೀ ವಿಚಾರಗಳೂ ಆತನ ಮಾನ ಹರಾಜು ಮಾಡಿದವು, ಅವನ ಬಳಿ ತರಬೇತಿ ಪಡೆದುಕೊಂಡವರೇ “ಬಾಟಂ ಐಟಂ”ನ್ನು ಮುಟ್ಟಿ ನೋಡಿಕೊಳ್ಳುವಂತೆ ಬರೆದುಬಿಟ್ಟರು.

ರವಿ ಬೆಳಗೆರೆ ಎಷ್ಟು ಬುದ್ದಿವಂತ ಎಂದರೆ ತನ್ನ ಜೀವನದ ಪಾಸಿಟಿವ್ ಬದಿಯ ಆತ್ಮಕತೆಗೆ “ಫಸ್ಟ್ ಹಾಫ್” ಎಂದು ಹೆಸರು ಕೊಟ್ಟಿದ್ದ. ಆದರೆ ತನ್ನ ಬದುಕಿನ “ಸೆಕೆಂಡ್ ಹಾಫ್” ನ್ನು ತನ್ನ ಓದುಗ ದೊರೆಗಳಿಗೆ ತಿಳಿಸುವಷ್ಟು ಪ್ರಾಮಾಣಿಕತೆಯಾಗಲೀ, ಧೈರ್ಯವಾಗಲೀ ಅವನಲ್ಲಿ ಇರಲಿಲ್ಲವೆಂದೇ ಹೇಳಬೇಕು.

ಆಗಾಗ ತನಗೆ ಸಮಾಜದ ಬಗ್ಗೆ ಕಾಳಜಿ ಇರುವಂತೆ ಬಿಂಬಿಸಿಕೊಳ್ಳುತ್ತಿದ್ದ ರವಿ ಬೆಳಗೆರೆಯ ಪ್ರಥಮ ಮತ್ತು ಕೊನೆಯ ಆದ್ಯತೆ ತಾನೇ ಆಗಿತ್ತು. He was self centred to the core. ಏಕ ಕಾಲದಲ್ಲಿ ಕೊಂಡಪಲ್ಲಿ ಸೀತಾರಾಮಯ್ಯ ನನ್ನೂ,‌ ಗೋಡ್ಸೆ, ವಾಜಪೇಯಿಗಳನ್ನೂ ಚಿತ್ತಾಕರ್ಷಕವಾಗಿ ಹೊಗಳಬಲ್ಲ ರವಿ‌ಬೆಳಗೆರೆಯ ಚಾಕಚಕ್ಯತೆಯ ಮೂಲ ಆತನ extreme ಅವಕಾಶವಾದದಲ್ಲಿಯೇ ವಿನಃ ಅದಕ್ಕೆ ಬೇರಾವ ವಿವರಣೆ, ತರ್ಕಗಳೂ ನಿಲುಕುವುದಿಲ್ಲ.
ಮೇಲು ನೋಟಕ್ಕೆ ಸೆಕ್ಯುಲರ್ ಎಂಬಂತೆ ಕಾಣಿಸುತ್ತಿದ್ದ ಬೆಳಗೆರೆ ನಾಡಿನ ಸೆಕ್ಯುಲರಿಸಂಗೆ ಮಾಡಿರುವ ಹಾನಿ ಕಡಿಮೆಯದೇನಲ್ಲ. ಪಾಕಿಸ್ತಾನದ ಸೂಫಿ ಗಾಯಕಿ ಅಬೀದಾ ಪರ್ವೀನ್ ಳ ಕುರಿತು ಭಾವತುಂಬಿ ಮಾತಾಡುತ್ತಲೇ ತನ್ನ ಪುಸ್ತಕಗಳ ಮೂಲಕ ಯುವಜನರ ತಲೆಗೆ ಕೋಮು ದ್ವೇಷವನ್ನು ಸ್ಲೋ ಪಾಯ್ಸನ್ ರೀತಿಯಲ್ಲಿ ಹಂಚುತ್ತಿದ್ದ ಬೆಳಗೆರೆಯ ಪರಿಯನ್ನು ಕಂಡು ನನ್ನಂತವರು ಬೆಚ್ಚಿ ಬಿದ್ದಿದ್ದೂ ಇದೆ.‌

ತನ್ನ ಹುಟ್ಟು ಮತ್ತು ಬಾಲ್ಯದ ಬಗ್ಗೆ ಬಹಳ ಮನ ಕರಗುವಂತೆ ಖಾಸ್ ಬಾತ್ ಬರೆದುಕೊಳ್ಳುತ್ತಿದ್ದ ಬೆಳೆಗೆರೆಯ ಆಳದಲ್ಲಿ ಒಬ್ಬ ಜಾತಿವಾದಿ ಬ್ರಾಹ್ಮಣನೂ ಇದ್ದ. ಒಂದು ಸಂದರ್ಭದಲ್ಲಿ ಆತ ತನ್ನ ಬ್ರಾಹ್ಮಣಿಕೆಯ ಬಗ್ಗೆ ಆವೇಶದಿಂದ, ಭಾವುಕನಾಗಿ ಬರೆದುಕೊಂಡಿದ್ದೂ ಇದೆ‌.
ಬಾಲ್ಯದ ಅಪಮಾನದ ಕತ್ತಲೆಯಿಂದ ರವಿ ಉದಯಿಸಿದ್ದನೆಂಬುದು ನಿಜ. ತಾನು ಮಾತ್ರ ಪ್ರಜ್ವಲಿಸುತ್ತಾ ಕೊನೆಗೆ ತನ್ನನ್ನೇ ಸುಟ್ಟುಕೊಂಡ. ಆದರೆ ಲೋಕಕ್ಕೆ ಬೆಳಕು ನೀಡುವ ಅವಕಾಶವಿದ್ದರೂ ಒಂದಷ್ಟು ಸುಡು ವಿಕಿರಣಗಳನ್ನಷ್ಟೇ ಸೂಸಿ ಮೋಡದಲ್ಲೆಲ್ಲೋ ಮರೆಯಾಗಿ ಹೋದದ್ದು ದುರಂತ.‌

ಒಂದು ಕ್ಷಣ ಮೌನ ಮತ್ತು ದೀರ್ಘ ನಿಟ್ಟುಸಿರು.

Please follow and like us:
error