ರಂಗಕರ್ಮಿ ಇಮಾಮಸಾಬ ಕೋಳೂರರಿಗೆ ಸಿಜಿಕೆ ರಂಗ ಪ್ರಶಸ್ತಿ ಪ್ರದಾನ

ರಂಗಭೂಮಿಯನ್ನು ಪ್ರೋತ್ಸಾಹಿಸುವುದು ಅಗತ್ಯ- ಪಾಟೀಲ್

ಕೊಪ್ಪಳ : ಸಮಾಜದಲ್ಲಿ ಮೌಲ್ಯಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿಯುತ ಕಾರ್‍ಯವನ್ನು ಈ ಹಿಂದೆ ರಂಗಭೂಮಿ ಹಾಗೂ ಬೀದಿ ನಾಟಕಗಳು ನಿರ್ವಹಿಸುತ್ತಿದ್ದವು. ಆದರೆ ಇಂದಿನ ಆಧುನಿಕ ಯುಗದಲ್ಲಿ ಸಿನಿಮಾ,ಟಿವಿ, ಮೊಬೈಲ್ ಗಳ ಹಾವಳಿಯಲ್ಲಿ ರಂಗಭೂಮಿ ನಶಿಸುತ್ತಾ ಹೋಗುತ್ತಿದೆ. ಇಂತಹ ರಂಗಭೂಮಿಯನ್ನು ಮತ್ತು ರಂಗಕಲಾವಿದರನ್ನು ಪ್ರೋತ್ಸಾಹಿಸುವುದು ಇಂದಿನ ಅಗತ್ಯವಾಗಿದೆ ಎಂದು ಪತ್ರಕರ್ತ ತಿಪ್ಪನಗೌಡ ಎಸ್.ಪಾಟೀಲ್ ಹೇಳಿದರು. ಅವರು ಇಂದು ಕನ್ನಡನೆಟ್.ಕಾಂ, ಕವಿಸಮೂಹ, ಜೀವಯಾನ ಬಳಗ ಕೊಪ್ಪಳ ಕರ್ನಾಟಕ ಬೀದಿನಾಟಕ ಅಕಾಡೆಮಿ ಬೆಂಗಳೂರು ಆರ್ಟ ಫೌಂಡೇಶನ್ ಸಹಯೋಗದಲ್ಲಿ ಕಿನ್ನಾಳ ಗ್ರಾಮದ ಸೇವಾ ವಿದ್ಯಾಲಯದಲ್ಲಿ ನಡೆದ ಸಿಜಿಕೆ ಬೀದಿ ರಂಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಸಿಜೆಕೆಯವರು ತಮ್ಮ ಬೀದಿ ನಾಟಕಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡಿದವರು. ಅಂತವರ ಹೆಸರಿನಲ್ಲಿ ನೀಡಲಾಗುವ ಈ ಸಿಜಿಕೆ ರಂಗ ಪ್ರಶಸ್ತಿ ನಿಜಕ್ಕೂ ಉತ್ತಮವಾದ ಕಾರ್ಯವಾಗಿದ್ದು. ಹಲವಾರು ದಶಕಗಳಿಂದ ರಂಗಭೂಮಿಯ ಸೇವೆ ಸಲ್ಲಿಸುತ್ತಿರುವ ಎಲೆಮರೆಯ ಕಾಯಿಗಳನ್ನು ಹುಡುಕಿ ಅವರಿಗೆ ಗೌರವಿಸುವ ಮೂಲಕ ಇಡೀ ರಂಗಭೂಮಿಯನ್ನೇ ಗೌರವಿಸಲಾಗುತ್ತಿದೆ. ಸಿನಿಮಾ ರೀಲ್ ಆದರೆ ನಾಟಕಗಳು ರೀಯಲ್. ಕೊಪ್ಪಳದಲ್ಲಿಯೂ ನಾಟಕಗಳು ನಡೆಯುತ್ತಿದ್ದು ಅದನ್ನು ಕಲಾರಸಿಕರು ಪ್ರೋತ್ಸಾಹಿಸುವುದು ಅವಶ್ಯಕವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕುಷ್ಟಗಿ ತಾಲೂಕಿನ ಹಿರೇಮನ್ನಾಪುರದ ಹಿರಿಯ ರಂಗಕರ್ಮಿ, ನಟ ನಿರ್ದೇಶಕ ಇಮಾಮಸಾಬ ಕೋಳೂರಿಗೆ ಸಿಜಿಕೆ ರಂಗ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಪತ್ರಕರ್ತ,ಸಂಘಟಕ ಸಿರಾಜ್ ಬಿಸರಳ್ಳಿ ರಂಗಭೂಮಿಗೆ ಸಿಜಿಕೆಯವರ ಕೊಡುಗೆಗಳನ್ನು ಸ್ಮರಿಸಿ ಜಿಲ್ಲೆಯಲ್ಲಿ ನೂರಾರು ಸಂಖ್ಯೆಯಲ್ಲಿ ರಂಗಕರ್ಮಿಗಳಿದ್ದಾರೆ. ಹಲವಾರು ದಶಕಗಳ ಸೇವೆಯ ನಂತರವೂ ಸಾಕಷ್ಟು ಜನ ಎಲೆಮರೆಯ ಕಾಯಿಯಾಗಿ ಉಳಿದು ಹೋಗುತ್ತಾರೆ. ಅಂತವರನ್ನು ಗುರುತಿಸಿ,ಸೂಕ್ತ ಗೌರವ ನೀಡುವ ನಿಟ್ಟಿನಲ್ಲಿ ಈ ರಂಗಪುರಸ್ಕಾರ ನೀಡಲಾಗುತ್ತಿದೆ ಎಂದು ಹೇಳಿದರು.
ಜನಪ್ರಿಯ ನಾಟಕ ಕುಂಟ ಕೋಣ ಮೂಕ ಜಾಣದ ಕಲಾವಿದರಾದ ದಯಾನಂದ್ ಬೀಳಗಿ , ಹನುಮಂತಪ್ಪ ಬಾಗಲಕೋಟೆ, ಪಯಾಜ್ ಕರ್ಜಗಿ ಮಾತನಾಡಿದರು. ಮುಖಂಡರಾದ ಬಸವರಾಜ್ ಚಿಲವಾಡಗಿ ಈ ಸಂದರ್ಭದಲ್ಲಿ ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಶಾಲೆಯ ಮುಖ್ಯ ಶಿಕ್ಷಕ ದಾವಲಸಾಬ ಬೆಟಗೇರಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕಲಾವಿದರಾದ ದಯಾನಂದ್ ಬೀಳಗಿ , ಹನುಮಂತಪ್ಪ ಬಾಗಲಕೋಟೆ, ಪಯಾಜ್ ಕರ್ಜಗಿಯವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಎಚ್.ವಿ.ರಾಜಾಬಕ್ಷಿ, ಶಿಕ್ಷಕ, ಶಿಕ್ಷಕಿಯರು ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಭಾಗಹಿಸಿದ್ದರು.

Please follow and like us:
error