ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಬಂಧನ

ಮುಂಬೈ, ಮಾ.8: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ(ಈಡಿ)ಅಧಿಕಾರಿಗಳು ರವಿವಾರ ಮುಂಜಾನೆ ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್‌ರನ್ನು ಬಂಧಿಸಿದ್ದಾರೆ. ಈಡಿ ರವಿವಾರ ಬೆಳಗ್ಗೆ 11ರ ಸುಮಾರಿಗೆ ರಾಣಾ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದೆ.

ಡಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ಗೆ(ಡಿಎಚ್‌ಎಫ್‌ಎಲ್)ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಈಡಿ ಅಧಿಕಾರಿಗಳು ಕಪೂರ್ ಅವರನ್ನು 30 ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಬಂಧಿಸಿದ್ದಾರೆ.

ಮುಂಬೈನ ವರ್ಲಿ ಉಪನಗರದಲ್ಲಿರುವ ರಾಣಾ ಕಪೂರ್‌ಗೆ ಸೇರಿರುವ ಸಮುದ್ರಾ ಮಹಲ್ ರೆಸಿಡೆನ್ಸಿಯಲ್ಲಿ ಈಡಿ ಅಧಿಕಾರಿಗಳು ಶನಿವಾರ ಶೋಧ ಕಾರ್ಯ ಮುಂದುವರಿಸಿದ್ದರು. ಹಗರಣದಲ್ಲಿ ಸಿಲುಕಿರುವ ಡಿಎಚ್‌ಎಫ್‌ಎಲ್ ಲಿಮಿಟೆಡ್‌ಗೆ ಯೆಸ್ ಬ್ಯಾಂಕ್‌ನಿಂದ 4,450 ಕೋ.ರೂ. ಸಾಲ ಮಂಜೂರು ಮಾಡಲು ಯೆಸ್ ಬ್ಯಾಂಕ್ ಸ್ಥಾಪಕರು ಹಾಗೂ ಅವರ ಇಬ್ಬರು ಪುತ್ರಿಯರಿಂದ ನಿಯಂತ್ರಿಸಲ್ಪಡುತ್ತಿರುವ ಡಮ್ಮಿ ಕಂಪೆನಿಯೊಂದು 600 ಕೋ.ರೂ. ಕಿಕ್ ಬ್ಯಾಕ್ ಪಡೆದಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿ ತನಿಖೆ ನಡೆಸಲಾಗುತ್ತಿದೆ.

ಯೆಸ್ ಬ್ಯಾಂಕ್, ಡಿಎಚ್‌ಎಫ್‌ಎಲ್‌ಗೆ 3,750 ಕೋ.ರೂ. ಹಾಗೂ ಡಿಎಚ್‌ಎಫ್‌ಎಲ್‌ನಿಂದ ನಿಯಂತ್ರಿಸಲ್ಪಡುತ್ತಿರುವ ಆರ್‌ಕೆಡಬ್ಲು ಡೆವಲಪರ್ಸ್ ಗೆ 750 ಕೋ.ರೂ.ಸಾಲ ನೀಡಿದೆ. ಡಿಎಚ್‌ಎಫ್‌ಎಲ್ ಸಾಲ ಮರುಪಾವತಿ ಮಾಡದೇ ಇದ್ದಾಗ ಯೆಸ್ ಬ್ಯಾಂಕ್ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಕಪೂರ್ ಹಾಗೂ ಅವರ ಇಬ್ಬರು ಪುತ್ರಿಯರು ಡಿಎಚ್‌ಎಫ್‌ಎಲ್‌ನಿಂದ ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂದು  ಈಡಿ ಅಧಿಕಾರಿಗಳು ಶಂಕಿಸಿದ್ದಾರೆ.

Please follow and like us:
error