ಯುವಿ-ಎಲ್‌ಇಡಿಗಳು ಕೊರೋನ ವೈರಸ್ ಕೊಲ್ಲಬಲ್ಲವು: ನೂತನ ಅಧ್ಯಯನ

ನ್ಯೂಯಾರ್ಕ್,  : ಅತಿ ನೇರಳೆ ಲೈಟ್ ಎಮಿಟಿಂಗ್ ಡಯೋಡ್ (ಯುವಿ-ಎಲ್‌ಇಡಿ)ಗಳು ನೋವೆಲ್ ಕೊರೋನ ವೈರಸನ್ನು ಕ್ಷಿಪ್ರವಾಗಿ, ಕಡಿಮೆ ಖರ್ಚಿನಲ್ಲಿ ಹಾಗೂ ದಕ್ಷತೆಯಿಂದ ಕೊಲ್ಲಬಲ್ಲವು ಎಂದು ಅಧ್ಯಯನವೊಂದು ತಿಳಿಸಿದೆ. ಈ ತಂತ್ರಜ್ಞಾನವನ್ನು ವಾತಾನುಕೂಲಿ ಮತ್ತು ನೀರಿನ ವ್ಯವಸ್ಥೆಗಳಲ್ಲಿ ಅಳವಡಿಸಬಹುದಾಗಿದೆ ಎಂದು ಅದು ಹೇಳಿದೆ.

ಈ ಸಂಶೋಧನೆಯಲ್ಲಿ ಕೊರೋನ ವೈರಸ್‌ಗಳ ಕುಟುಂಬಕ್ಕೆ ಸೇರಿದ ವೈರಸೊಂದರ ಮೇಲೆ ವಿವಿಧ ವೇವ್‌ಲೆಂತ್‌ಗಳ ಯುವಿ-ಎಲ್‌ಇಡಿ ವಿಕಿರಣವನ್ನು ಹಾಯಿಸಿ ಪರಿಣಾಮವನ್ನು ಅಂದಾಜಿಸಲಾಗಿದೆ ಎಂದು ‘ಜರ್ನಲ್ ಆಫ್ ಫೋಟೊಕೆಮಿಸ್ಟ್ರಿ ಆ್ಯಂಡ್ ಫೋಟೊಬಯಾಲಜಿ ಬಿ: ಬಯಾಲಜಿ’ಯಲ್ಲಿ ಪ್ರಕಟಗೊಂಡ ಸಂಶೋಧನಾ ವರದಿ ತಿಳಿಸಿದೆ.

ಕೋವಿಡ್-19 ಸಾಂಕ್ರಾಮಿಕಕ್ಕೆ ಕಾರಣವಾಗುವ ಸಾರ್ಸ್-ಸಿಒವಿ-2 ವೈರಸ್ ಕೊರೋನ ವೈರಸ್ ಕುಟುಂಬಕ್ಕೆ ಸೇರಿದೆ.

‘‘ಈ ತಂತ್ರಜ್ಞಾನವನ್ನು ಬಸ್, ರೈಲು, ಕ್ರೀಡಾಂಗಣ ಮತ್ತು ವಿಮಾನಗಳನ್ನು ಕೊರೋನ ವೈರಸ್‌ಮುಕ್ತಗೊಳಿಸಲು ಬಳಸಬಹುದಾಗಿದೆ. ಈಗ ಸಾಮಾನ್ಯವಾಗಿ ರಾಸಾಯನಿಕಗಳನ್ನು ಸಿಂಪಡಿಸುವ ಮೂಲಕ ಇವುಗಳನ್ನು ಕ್ರಿಮಿಮುಕ್ತಗೊಳಿಸಲಾಗುತ್ತಿದೆ. ಈ ರೀತಿಯ ಸಿಂಪಡಣೆಗೆ ಮಾನವಶ್ರಮ ಮತ್ತು ಹೆಚ್ಚಿನ ಸಮಯದ ಅಗತ್ಯವಿದೆ’’ ಎಂದು ಅಮೆರಿಕದಲ್ಲಿರುವ ‘ಅಮೆರಿಕನ್ ಫ್ರೆಂಡ್ಸ್ ಆಫ್ ಟೆಲ್ ಅವೀವ್ ಯುನಿವರ್ಸಿಟಿ’ಯಲ್ಲಿ ನಡೆಸಲಾದ ಅಧ್ಯಯನದ ಸಹ ಲೇಖಕಿ ಹಡಾಸ್ ಮಾಮನೆ ಹೇಳಿದ್ದಾರೆ.

Please follow and like us:
error