ಹತ್ರಸ್ : ಹತ್ತೊಂಬತ್ತು ವರ್ಷದ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ ನಡೆದ ಹತ್ರಾಸ್ನ ಗ್ರಾಮಕ್ಕೆ ಸತತ ಎರಡನೇ ದಿನವೂ ದಿಗ್ಬಂಧನ ವಿಧಿಸಲಾಗಿದ್ದು, ಪತ್ರಕರ್ತರು ಮತ್ತು ರಾಜಕಾರಣಿಗಳಿಗೆ ಪ್ರವೇಶ ನಿರಾಕರಿಸಲಾಗಿದೆ. ಗ್ರಾಮಕ್ಕೆ ಪ್ರವೇಶಿಸಲು ಪ್ರಯತ್ನಿಸಿದ ಹಲವು ಮಂದಿಯನ್ನು ಪೊಲೀಸರು ಹಿಂದಕ್ಕೆ ತಳ್ಳಿ, ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ತನ್ನ ಪ್ರಾಥಮಿಕ ವರದಿಯಲ್ಲಿ ನೀಡಿದ ಸಲಹೆ ಮೇರೆಗೆ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಹತ್ರಸ್ ಎಸ್ಪಿ ವಿಕ್ರಾಂತ್ ವೀರ್ ಹಾಗೂ ಘಟನೆ ನಡೆದ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಚಂಡಾ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ.
ಸದಾಬಾದ್ ವೃತ್ತ ನಿರೀಕ್ಷಕ ರಾಮ್ ಶಬ್ದ್, ಸ್ಟೇಷನ್ ಹೌಸ್ ಆಫೀಸರ್ ದಿನೇಶ್ ಕುಮಾರ್ ವರ್ಮಾ ಮತ್ತು ಸಬ್ ಇನ್ಸ್ಪೆಕ್ಟರ್ ಜಗವೀರ ಸಿಂಗ್ ಅಮಾನತು ಶಿಕ್ಷೆಗೆ ಒಳಗಾದವರು. ಮುಖ್ಯ ಕ್ಲರ್ಕ್ ಮಹೇಶ್ ಪಾಲ್ ಅವರನ್ನೂ ಅಮಾನತುಗೊಳಿಸಲಾಗಿದೆ. ಶಾಮ್ಲಿ ಎಸ್ಪಿ ವಿನ್ಸೆಂಟ್ ಜೈಸ್ವಾಲ್ ಅವರು ಹತ್ರಾಸ್ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಪ್ರಕರಣದ ಸಂಬಂಧ ಆರೋಪಿಗಳು, ಸಂತ್ರಸ್ತೆಯ ಕುಟುಂಬ ಸದಸ್ಯರು ಹಾಗೂ ಪೊಲೀಸರಿಗೆ ಪಾಲಿಗ್ರಾಪ್ ಮತ್ತು ನಾರ್ಕೊ ಪರೀಕ್ಷೆ ನಡೆಸುವಂತೆಯೂ ಎಸ್ಐಟಿ ಶಿಫಾರಸ್ಸು ಮಾಡಿದೆ.
ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎರಡೂ ರಸ್ತೆಗಳನ್ನು ಬ್ಯಾರಿಕೇಡ್ನಿಂದ ತಡೆಯಲಾಗಿದ್ದು, ಒಂದು ಕಡೆ ಆರು ಮಂದಿ ಪೊಲೀಸರು ಹಾಗೂ ಇನ್ನೊಂದು ಕಡೆ 15 ಪೊಲೀಸರನ್ನು ನಿಯೋಜಿಸಲಾಗಿದೆ. ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತೆಯ ಕುಟುಂಬದವರನ್ನು ಮಾತನಾಡಿಸುವ ಪತ್ರಕರ್ತರ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದರು.
“ಮಾಧ್ಯಮ ಪ್ರವೇಶವನ್ನು ನಿಷೇಧಿಸಲಾಗಿದೆ ಈ ಮೂಲಕ ಎಸ್ಐಟಿ ತನಿಖೆಗೆ ಯಾವುದೇ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ವಿಚಾರಣೆ ನಡೆಯುತ್ತಿದ್ದು, ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ. ತನಿಖೆ ಮುಗಿಯುವವರೆಗೂ ಯಾರನ್ನೂ ಒಳಕ್ಕೆ ಬಿಡುವುದಿಲ್ಲ” ಎಂದು ಹತ್ರಾಸ್ ಹೆಚ್ಚುವರಿ ಎಸ್ಪಿ ಪ್ರಕಾಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.