ಯುವಜನರು ಸಂಸ್ಕೃತಿಯನ್ನು ಪ್ರೀತಿಸಿದರೆ ದೇಶ ಆದರ್ಶ ಗ್ರಾಮವಾಗುತ್ತದೆ : ಗೂಳಪ್ಪ


ಕೊಪ್ಪಳ, ಫೆ. ೨೪: ನಮ್ಮ ಯುವಜನರು ಭಾರತೀಯ ಸಂಸ್ಕೃತಿ ಮತ್ತು ಆಚಾರಗಳನ್ನು ಸರಿಯಾಗಿ ಪಾಲಿಸಿ ಪ್ರೀತಿಸಿದರೆ ದೇಶ ಆದರ್ಶ ಗ್ರಾಮವಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಗೂಳಪ್ಪ ಹಲಗೇರಿ ಹೇಳಿದರು.
ಅವರು ಕೊಪ್ಪಳ ತಾಲೂಕ ಕರ್ಕಿಹಳ್ಳಿಯ ಶ್ರೀ ಮೃತ್ಯುಂಜಯೇಶ್ವರ ಸನ್ನಿಧಾನದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಕೊಪ್ಪಳ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಮತ್ತು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಕೊಪ್ಪಳ ಜಿಲ್ಲಾ ರವರ ಸಂಯುಕ್ತಾಶ್ರಯದಲ್ಲಿ ಜರುಗಿದ ಎರಡು ದಿನಗಳ ಕೊಪ್ಪಳ ಜಿಲ್ಲಾ ಮಟ್ಟದ ಯುವಜನ ಮೇಳ ೨೦೧೮-೧೯ನ್ನು ಉದ್ಘಾಟಿಸಿ ಮಾತನಾಡಿದರು.
ಯುವಜನರಿಗೆ ಇನ್ನಷ್ಟು ಸೌಲಭ್ಯ ಮತ್ತು ಅವಕಾಶಗಳನ್ನು ಮಾಡಿಕೊಡುವ ನಿಟ್ಟಿನಲ್ಲಿ, ಜಿಲ್ಲಾ ಪಂಚಾಯತ್ ಕಾರ್ಯಕ್ರಮ ರೂಪಿಸಲು ನೆರವಾಗುವದಾಗಿ ಹೇಳಿದ ಅವರು, ಹಳ್ಳಿ ಎಡೆಗೆ ಯುವಜನರ ನಡಿಗೆ ಎಂಬುದು ನಮ್ಮ ಧ್ಯೇಯ ವಾಖ್ಯವಾಗಬೇಕು ಅಂದಾಗ ಗ್ರಾಮಗಳು ಪ್ರಗತಿಯಾಗುತ್ತವೆ ಎಂದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಜಿ ಅವರು, ನಮ್ಮ ಯುವಜನರು ಮೊಬೈಲ್ ಮತ್ತು ಟಿವಿಗಳ ಗುಂಗಲ್ಲಿ ನಿಜವಾದ ಜನಪದವನ್ನು ಮರೆತಿದ್ದಾರೆ. ಅದನ್ನು ಮತ್ತೆ ಪುನಃಶ್ಚೇತನಗೊಳಿಸುವ ನಿಟ್ಟಿನಲ್ಲಿ ಯುವ ಒಕ್ಕೂಟ ಕನ್ನಡ ಜಾನಪದ ಪರಿಷತ್ ಒಡಗೂಡಿ ತರಬೇತುಗೊಳಿಸುತ್ತಿದೆ. ಈ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿಯೂ ಅನೇಕ ತರಬೇತಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುವದು. ಯುವಜನರು ಸರಿಯಾದ ಮಾರ್ಗದಲ್ಲಿ ನಡೆಯಲು ಯುವಜನ ಇಲಾಖೆ ಸಹಕಾರಿಯಾಗಬೇಕು. ಕ್ರೀಡಾ ತರಬೇತುದಾರರಂತೆ, ಸಾಂಸ್ಕೃತಿಕ ತರಬೇತುದಾರರನ್ನು ಇಲಾಖೆ ನೇಮಿಸಬೇಕು. ತಾಲೂಕ ಮತ್ತು ವಿಭಾಗಮಟ್ಟದ ಯುವಜನ ಮೇಳಗಳನ್ನು ಮರಳಿ ಸ್ಥಾಪಿಸಬೇಕು ಹಾಗೂ ಯುವ ಸ್ಪಂದನ ಎಂಬ ಕಾರ್ಯಕ್ರಮವನ್ನು ಇಲಾಖೆ ರದ್ದುಗೊಳಿಸಿ ಯುವ ಸಂಘಗಳಿಗೆ ಧನಸಹಾಯ ಮಾಢಬೇಕು. ನೋಂದಣಿಗೆ ಹಳೆಯ ಪದ್ಧತಿಯನ್ನು ಮುಂದುವರೆಸಬೇಕು ಹಾಘೂ ಯುವ ಪ್ರಶಸ್ತಿಗಳನ್ನು ಪುನಃ ಪ್ರಾರಂಬಿಸುವದರ ಜೊತೆಗೆ ಯುವಜನ ಮೇಳದಲ್ಲಿ ಜನಪದ ಹೊರತುಪಡಿಸಿ ಇನ್ನ್ಯಾವುದೇ ಪಾಶ್ಚಿಮಾತ್ಯ ಸಂಗೀತ ನೃತ್ಯಗಳನ್ನು ಸೇರಿಸಕೂಡದು, ಹಾಗೊಂದು ವೇಳೆ ಸೇರಿಸಿದಲ್ಲಿ ದೊಡ್ಡಮಟ್ಟದ ಯುವ ಚಳುವಳಿ ರೂಪಿಸಿಸುವದಾಗಿ ಎಚ್ಚರಿಕೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಆರ್. ಜಿ. ನಾಡಗೀರ ಅವರು, ನಮ್ಮ ಯುವಜನರಿಗೆ ಸಾಧ್ಯವಾದ ಎಲ್ಲಾ ಸೌಕರ್ಯ ಒದಗಿಸಿಕೊಡುವ ನಿಟ್ಟಿನಲ್ಲಿ ಮುಂಬರುವ ಆಯವ್ಯಯಕ್ಕೆ ಸೇರಿಸಲಾಗುವದು. ಯುವಜನರಿಗೆ ವಿಶೇಷ ತರಬೇತಿಗಳನ್ನು ನೀಡುವ ಕೆಲಸ ಮಾಡಲಾಗುವದು. ಕಾರ್ಯಕ್ರಮಗಳಿಗೆ ಬಂದು ಹೋಗುವ ಟಿ.ಎ. ಡಿ.ಎಗಳಿಗೆ ತೊಂದರೆಯಾಗದಂತೆ ನಡೆದುಕೊಳ್ಳಲಾಗುವದು. ಯುವಜನರು ಸ್ಪರ್ಧಾ ಮನೋಭಾವನ್ನು ಹೆಚ್ಚು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮೇಳದ ನಿರ್ಣಾಯಕರ ಪರವಾಗಿ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಸಿ.ವಿ.ಜಡಿಯವರ, ಕಳೆದ ಎರಡು ದಶಕಗಳಿಂದ ಯುವಜನರ ಒಡನಾಟದಲ್ಲಿದ್ದು, ಇಲಾಖೆಯ ಜನಪದ ಕಾರ್ಯಕ್ರಮಗಳನ್ನು ಗಮನಿಸುತ್ತಿದ್ದೇನೆ, ಅಂದಿಗೆ ಇಂದಿಗೆ ಬಹಳ ವ್ಯತ್ಯಾಸವಿದೆ, ಯುವಜನರು ನಿಜವಾದ ಆಸಕ್ತಿ ಕಳೆದುಕೊಂಡಿದ್ದಾರೆ. ಇಲಾಖೆಯ ನಿಯಮದಂತೆ ನಿರ್ಣಯ ಮಾಡಲಾಗುವದು, ಯುವ ಮಿತ್ರರು, ಸ್ಪರ್ಧೆಗಾಗಿ ತರಬೇತಿ ಹೊಂದದೆ ನಿಜವಾದ ಕಲೆ ಉಳಿಸಿಕೊಳ್ಳಲು ನಿರಂತರವಾಗಿ ಕಲೆಯನ್ನು ಆರಾಧಿಸಬೇಕು ಅಂದಾಗ ಎತ್ತರಕ್ಕೆ ಬೆಳೆಯುತ್ತೀರಿ ಎಂದು ಕರೆಕೊಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ ಮಾತನಾಡಿ, ಯುವ ಜನರು ಸಂಸ್ಕೃತಿ ಮತ್ತು ಕನ್ನಡವನ್ನು ಪ್ರೀತಿಸಬೇಕು, ಸಂಸ್ಕೃತಿ ಇಲಾಖೆಯು ಸಹ ಬೆಂಬಲ ನೀಡುತ್ತದೆ ಎಂದ ಅವರು, ಚುನಾವಣಾ ಆಯೋಗ ನೀಡಿರುವ ಮತದಾನ ಜಾಗೃತಿ ಕುರಿತು ಮಾತನಾಡಿ, ಕಡ್ಡಾಯ ಮತ್ತು ನ್ಯಾಯಯುತ ಮತದಾನ ಪ್ರಮಾಣ ವಚನ ಬೋಧಿಸಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಬಸಪ್ಪ ನರಸಪ್ಪ ಬಂಗಾಳಿ, ತಾಲೂಕ ಪಂಚಾಯತ ಸದಸ್ಯೆ ಅನ್ನಪೂರ್ಣಮ್ಮ ಗೂಗಲಮರಿ, ಮೃತ್ಯುಂಜಯ ಮಠದ ಸಂತ ಶ್ರೀ ಸುನೀಲ್ ಪಾಟೀಲ್, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಜಗದಯ್ಯ ಸಾಲಿಮಠ ಮತ್ತು ರಾಕೇಶ ಕಾಂಬ್ಳೇಕರ್, ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತರಾದ ಲಲಿತಮ್ಮ ಹಿರೇಮಠ, ಧರ್ಮಣ್ಣ ಹಟ್ಟಿ ಮತ್ತು ರಾಘವೇಂದ್ರ ಅರಕೇರಿ, ಯುವಜನ ಇಲಾಖೆಯ ಯತಿರಾಜ, ತುಕಾರಾಮ, ಹನುಮೇಶ, ಸುರೇಶ, ಯುವ ಸ್ಪಂದನದ ಭೀಮೇಶ ಕುರಿ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಕೊಪ್ಪಳ ಜಿಲ್ಲಾ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಶರಣಪ್ಪ ಗೊಂದಿ, ದೈಹಿಕ ಶಿಕ್ಷಕ ಬಸವರಾಜ, ನೃತ್ಯ ಶಿಕ್ಷಕಿ ಕಲಾವತಿ ಹಾರೋಬೆಳವಡಿ, ಶಿಕ್ಷಕ ಬಸನಗೌಡ ಪಾಟೀಲ್, ಕಲಾವಿದ ಲಚ್ಚಪ್ಪ ಲಾಳಿ, ತಾಲೂಕ ಕ್ರೀಡಾ ಅಧಿಕಾರಿಗಳು ಇತರರು ಇದ್ದರು.
ನಂತರ ಭಾವಗೀತೆಯ ರಸದೌತಣ, ರಂಗಗೀತೆ-ಲಾವಣಿಗಳ ಸಮ್ಮಿಳನ, ಡೊಳ್ಳು-ಹಲಗೆಯ ಝೇಂಕಾರ, ಜಾನಪದ ಕುಣಿತದ ಸೊಬಗು, ಜನಪದ ಪದಗಳ ಇಂಪು ನೆರೆದ ಸಬಿಕರನ್ನು ಮಂತ್ರಮುಗ್ಧರನ್ನಾಗಿಸಿತು.

Please follow and like us:
error