ಯುಪಿ ಸರ್ಕಾರಕ್ಕೆ ಮುಖಭಂಗ : ಡಾ. ಕಫೀಲ್ ಖಾನ್ ವಿರುದ್ದದ ಅರ್ಜಿ ವಜಾಗೊಳಿಸಿದ ಸುಪ್ರೀಂ

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧನವಾಗಿದ್ದ ಡಾ. ಕಫೀಲ್ ಖಾನ್‌ರವರನ್ನು ಬಿಡುಗಡೆಗೊಳಿಸಿದ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಮುಖಭಂಗವಾಗಿದೆ. ಆ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ (ಸಿಜೆಐ) ಶರದ್ ಅರವಿಂದ್ ಬೊಬ್ಡೆ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು “ಅಲಹಾಬಾದ್ ಹೈಕೋರ್ಟ್ ತನ್ನ ಸೆಪ್ಟೆಂಬರ್ 1 ರ ತೀರ್ಪಿನಲ್ಲಿ ಮಾಡಿದ ಅವಲೋಕನಗಳು ಖಾನ್ ವಿರುದ್ಧದ ಅಪರಾಧ ಪ್ರಕರಣಗಳ ಫಲಿತಾಂಶದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಪ್ರಕರಣಗಳನ್ನು ಸ್ವಂತ ಅರ್ಹತೆಯ ಮೇರೆಗೆ ನಿರ್ಧರಿಸಲಾಗುವುದು ಎಂದು ನ್ಯಾಯಪೀಠ ತಿಳಿಸಿದೆ.

ಇದು ಹೈಕೋರ್ಟ್‌ನ ಉತ್ತಮ ಆದೇಶವೆಂದು ತೋರುತ್ತದೆ. ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಮಗೆ ಯಾವುದೇ ಕಾರಣವಿಲ್ಲ. ಇನ್ನೊಂದು ಪ್ರಕರಣದಲ್ಲಿ ನೀವು ಕಫೀಲ್ ಖಾನ್ ವಿರುದ್ಧ ಬಂಧನ ಆದೇಶವನ್ನು ಬಳಸಲಾಗುವುದಿಲ್ಲ” ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬಾಬ್ಡೆ ಅವರು ಅಲಹಾಬಾದ್ ಹೈಕೋರ್ಟ್ ಆದೇಶವನ್ನು ದೃಢಪಡಿಸಿ ವೈದ್ಯರನ್ನು ಮುಕ್ತಗೊಳಿಸಿದ್ದಾರೆ.

” ಆದರೆ ಅವಲೋಕನಗಳು ಕ್ರಿಮಿನಲ್ ಪ್ರಕರಣಗಳ ವಿಚಾರಣೆಗೆ ಯಾವುದೇ ಪರಿಣಾಮ ಬೀರುವುದಿಲ್ಲ” ಎಂದು ನ್ಯಾಯಮೂರ್ತಿ ಬೊಬ್ಡೆ ಹೇಳಿದರು.

ಸಿಎಎ ವಿರೋಧಿ ಹೋರಾಟಗಳು ಉತ್ತುಂಗದಲ್ಲಿದ್ದಾಗ 2019 ರ ಡಿಸೆಂಬರ್ 13 ರಂದು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಡಾ.ಕಫೀಲ್‌ ಖಾನ್ ಅವರನ್ನು ಜನವರಿಯಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಮುಂಬೈನಲ್ಲಿ ಬಂಧಿಸಲಾಗಿತ್ತು. ಆದರೆ ಈ ಪ್ರಕರಣದ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ‘ಕಫೀಲ್‌ ಖಾನ್‌ರವರ ಭಾಷಣವು ಹಿಂಸೆಯನ್ನು ಪ್ರಚೋದಿಸುವಂತಿರಲಿಲ್ಲ. ಅದು ರಾಷ್ಟ್ರೀಯ ಏಕತೆ ಮತ್ತು ಜನರ ನಡುವೆ ಭಾವೈಕ್ಯತೆಯನ್ನು ಸಾರುವಂತೆ ಕರೆ ಕೊಡುವಂತಿತ್ತು’ ಎಂದು ಹೇಳಿ ಅವರಿಗೆ ಈ ವರ್ಷದ ಸೆಪ್ಟಂಬರ್ ಆರಂಭದಲ್ಲಿ ಜಾಮೀನು ನೀಡಿತ್ತು.

ಕೂಡಲೇ ಬಿಡುಗಡೆಗೊಳಿಸುವಂತೆ ಮತ್ತು ಅವರ ಮೇಲಿನ NSA ಪ್ರಕರಣ ಕೈಬಿಡುವಂತೆ ಆದೇಶಿಸಿತ್ತು. ಬಿಡುಗಡೆಯ ನಂತರ ‘ನನ್ನ ವೈದ್ಯ ಹುದ್ದೆಯನ್ನು ಮರಳಿಕೊಡಿ, ದೇಶಸೇವೆಗೆ ಸಿದ್ಧನಿದ್ದೇನೆ’ ಎಂದು ಕಫೀಲ್ ಖಾನ್ ಘೋಷಿಸಿದ್ದರು.

ಆದರೆ ಯುಪಿ ಸರ್ಕಾರವು ಡಾ. ಕಫೀಲ್ ಖಾನ್ ಮೇಲೆ ಶಿಸ್ತು ಕ್ರಮ, ಸೇವೆಯಿಂದ ಅಮಾನತು, ಪೊಲೀಸ್ ಪ್ರಕರಣಗಳ ನೋಂದಣಿ ಮತ್ತು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಡಿಯಲ್ಲಿ ಅಪರಾಧಗಳ ಇತಿಹಾಸವನ್ನು ಹೊಂದಿದ್ದಾರೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಅವರ ಮೇಲೆ ಕಠಿಣ ಕಾಯ್ದೆಗಳನ್ನು ಹಾಕಲು ಅನುಮತಿ ಕೋರಿತ್ತು. ಅದಕ್ಕೆ ಸುಪ್ರೀಂ ಅವಕಾಶ ನೀಡಿಲ್ಲ. ಇದರಿಂದ ಯುಪಿ ಸರ್ಕಾರಕ್ಕೆ ಹಿನ್ನಡೆಯಾಗಿದೆ.

2017ರಲ್ಲಿ ಗೋರಖ್ ಪುರದ ಬಿಆರ್‌ಡಿ ವೈದ್ಯಕೀಯ ಆಸ್ಪತ್ರೆ ಆಕ್ಸಿಜನ್ ಕೊರತೆ ದುರಂತ ಪ್ರಕರಣದಲ್ಲಿ ಕಫೀಲ್‌ ಖಾನ್‌ ಅಮಾನತು ಮತ್ತು 9 ತಿಂಗಳ ಜೈಲುವಾಸಕ್ಕೆ ಒಳಗಾಗಿದ್ದರು. ಬಿಆರ್‌ಡಿ ವೈದ್ಯಕೀಯ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ ಮತ್ತು ವೈದ್ಯಕೀಯ ನಿರ್ಲಕ್ಷ್ಯದ ಆರೋಪ ಡಾ.ಕಫೀಲ್ ಅವರ ಮೇಲಿತ್ತು. ಆದರೆ ನ್ಯಾಯಾಲಯ ಅವರು ಅಮಾಯಕರು ಮತ್ತು ಉದ್ದೇಶಪೂರ್ವಕವಾಗಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿ ಪ್ರಕರಣವನ್ನು ಕೈಬಿಟ್ಟಿತ್ತು.

Please follow and like us:
error