ಯಶಸ್ವಿ ಉದ್ಯಮಿಯೊಬ್ಬನ ದುರಂತ ಸಾವು-ಜಗದೀಶ ಕೊಪ್ಪ

Jagadish Koppa

ಕೋವಿಡ್ ಸೋಕಿಂತ ತಮಿಳುನಾಡು ಕಾಂಗ್ರೇಸ್ ಸಂಸದನ ಸಾವು ಎಂಬ ಸುದ್ದಿಯು ಕಳೆದವಾರ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಯಿತು. ನಿಧನನಾದ ವ್ಯಕ್ತಿಯು ನಾಗರಕೋಯಿಲ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ವಸಂತ್ ಕುಮಾರ್ ಎಂಬುದಷ್ಟೇ ಬಹುತೇಕ ಮಂದಿಗೆ ಗೊತ್ತಿರುವ ವಿಷಯ. ಆದರೆ, ತಮಿಳುನಾಡಿನಲ್ಲಿ ವಸಂತ್ ಅಂಡ್ ಕೋ ಹೆಸರಿನಲ್ಲಿ ಗೃಹಪಯೋಗಿ ವಸ್ತುಗಳ ಮಾರಾಟ ಮಳಿಗೆಗಳನ್ನು ತೆರೆದ ಸಾಹಸಿ ಎಂಬುದು ಹೊರ ರಾಜ್ಯಗಳಿಗೆ ತಿಳಿದಿಲ್ಲ. ತನ್ನ ವ್ಯವಹಾರದ ಮೂಲಕ ಹಳ್ಳಿಗಳ ಸಾವಿರಾರು ಹುಡುಗರಿಗೆ ಉದ್ಯೋಗ ನೀಡಿದ್ದ ಹೃದಯವಂತ ಎಂದು ಎಲ್ಲರಿಗೂ ಚಿರಪರಿಚಿತವಾಗಿದ್ದ ವಸಂತಕುಮಾರ್ ಸಾವು ನಿಜಕ್ಕೂ ದುರಂತ. ಈ ವ್ಯಕ್ತಿಯ ಬದುಕು ಒಂದು ರೀತಿಯಲ್ಲಿ ಸಾಹಸಗಾಥೆಯೂ ಹೌದು ಜೊತೆಗೆ ಎಲ್ಲಾ ಉದ್ಯಮಿಗಳಿಗೆ ಮಾದರಿಯಾದದ್ದು.
1980 ರ ದಕ್ಷಿಣ ತಮಿಳುನಾಡಿನ ನಾಗರಕೋಯಿಲ್ ಜಿಲ್ಲೆಯ ಒಂದು ಹಳ್ಳಿಯಿಂದ ಉದ್ಯೋಗ ಅರಸಿಕೊಂಡು ಮದ್ರಾಸ್ ನಗರಕ್ಕೆ ಬಂದ ಬಂದ ವಸಂತ್ ಕುಮಾರ್ ಗೆ ಆ ಕಾಲದಲ್ಲಿ ರೇಡಿಯೋ, ಟೇಪ್ ರೆಕಾರ್ಡರ್ ಮತ್ತು ಟಿ.ವಿ. ಹಾಗೂ ಮಿಕ್ಸಿ ಹಾಗೂ ಗ್ರೈಂಡರ್ ಮಾರಾಟದಲ್ಲಿ ಹೆಸರು ಮಾಡಿದ್ದ ವಿ.ಜಿ.ಪಿ. ಎಂಬ ಮಾರಾಟ ಮಳಿಗೆಯಲ್ಲಿ ( ವಿ.ಜಿ. ಪನ್ನೀರ್ ದಾಸ್) ಸೇಲ್ಸ್ ಮ್ಯಾನ್ ಆಗಿ ಉದ್ಯೋಗ ದೊರಕಿತ್ತು. ನಾಲ್ಕೈದು ವರ್ಷದಲ್ಲಿ ಮಾರಾಟದಲ್ಲಿ ಅನುಭವ ಗಳಿಸಿದ್ದ ವಸಂತ ಕುಮಾರನನ್ನು ಕಂಪನಿಯು ದೂರದ ಮುಂಬೈ ನಗರಕ್ಕೆ ವರ್ಗಾವಣೆ ಮಾಡಿತು. ಹಳ್ಳಿಯಲ್ಲಿದ್ದ ವೃದ್ಧ ತಂದೆ-ತಾಯಿಗಳನ್ನು ಬಿಟ್ಟು ಹೋಗಲಾಗದ ವಸಂತ್ ಕಂಪನಿಗೆ ವರ್ಗಾವಣೆ ರದ್ದು ಮಾಡಲು ಮನವಿ ಸಲ್ಲಿಸಿದಾಗ ಕಂಪನಿಯು ಮನವಿಯನ್ನು ತಿರಸ್ಕರಿಸಿತು. ಇದರಿಂದ ಬೇಸತ್ತ ವಸಂತ ಕುಮಾರ್ ಹುದ್ದೆಗೆ ರಾಜಿನಾಮೆ ಸಲ್ಲಿಸಿ, ತಾನೇ ಸ್ವತಃ ಒಂದು ಮಾರಾಟ ಅಂಗಡಿಯನ್ನು ತೆರೆದರು.
ಸಾಮಾನ್ಯವಾಗಿ ಎಲ್ಲಾ ಕಂಪನಿಗಳು ಸಾಮಾನ್ಯವಾಗಿ ತಮ್ಮ ಟ್ರೇಡ್ ಮಾರ್ಕದ ಚಿಹ್ನೆಯಾಗಿ ವಿವಿಧ ಚಿತ್ರಗಳನ್ನು ಬಳಸಿದರೆ, ವಸಂತ್ ಕುಮಾರ್ ವೃತ್ತಾಕಾರದ ಚಿಹ್ನೆಯೊಳಗೆ ತನ್ನ ಭಾವಚಿತ್ರ ಬಳಸಿ “ ವಸಂತ್ ಅಂಡ್ ಕೋ, ಗುಣಮಟ್ಟ ಮತ್ತು ವಿಶ್ವಾಸಾರ್ಹ” ಎಂಬ ವಾಕ್ಯವನ್ನು ಬಳಸಿ ತನ್ನ ಮಾರಾಟದ ಅಂಗಡಿಗಳ ಮೇಲೆ ಪ್ರದರ್ಶನ ಮಾಡತೊಡಗಿದರು. ವಸಂತ್ ಅಂಡ್ ಕೋ ಕಂಪನಿಯು ಕೇವಲ ಮೂರು ವರ್ಷಗಳಲ್ಲಿ ತಮಿಳುನಾಡಿನಲ್ಲಿ ಜನಪ್ರಿಯ ಷೋ ರೂಂ ಆಗಿ ಪರಿವರ್ತನೆ ಹೊಂದಿತು. ಜೊತೆಗೆ ತಾನು ಉದ್ಯೋಗ ಬಿಟ್ಟು ಬಂದಿದ್ದ ವಿ.ಜಿ.ಪಿ. ಕಂಪನಿಯನ್ನು ಮಾರರಾಟದಲ್ಲಿ ವಸಂತ್ ಕುಮಾರ್ ಹಿಂದಿಕ್ಕುವುದರಲ್ಲಿ ಯಶಸ್ವಿಯಾದರು.
ವಸಂತ್ ಕುಮಾರ್ ಪ್ರಥಮ ಬಾರಿಗೆ ತಮಿಳುನಾಡಿನ ಮಧ್ಯಮ ವರ್ಗ ಹಾಗೂ ಬಡ ಜನತೆಗೆ ಕಂತುಗಳ ಮೇಲೆ ರೇಡಿಯೋ, ಟಿ.ವಿ. ಮಿಕ್ಷಿ ಹಾಗೂ ಗ್ರೈಂಡರ್ ಗಳನ್ನು ನೀಡುವುದರ ಮೂಲಕ ಎಲ್ಲರ ಮನ ಗೆದ್ದಿದ್ದರು. ಮಾರಾಟದ ಮಳಿಗೆಗಳಿಗೆ ಹಾಗೂ ಮನೆ ಮನೆಗೆ ಹೋಗಿ ವಾರದ ಅಥವಾ ತಿಂಗಳ ಕಂತು ಸಂಗ್ರಹಿಸಲು ನೂರಾರು ಹುಡುಗರನ್ನು ತನ್ನ ಜಿಲ್ಲೆಯಾದ ನಾಗರಕೋಯಿಲ್ ಹಾಗೂ ತಿರುನಾನ್ವೇಲಿ ಜಿಲ್ಲೆಗಳಿಂದ ಕರೆತಂದು ಉದ್ಯೋಗ ನೀಡಿದರು. ಮದ್ರಾಸ್ ನಗರದ ಮೌಂಟ್ ರೋಡ್ ನಲ್ಲಿ ಪ್ರಥಮವಾಗಿ ಆರಂಭಿಸಿದ ಮಾರಾಟ ಮಳಿಗೆಯಿಂದ ಆರಂಭವಾದ ವಸಂತ್ ಕುಮಾರ್ ಯಶೋಗಾಥೆ ತಮಿಳುನಾಡಿನ ಪ್ರತಿಯೊಂದು ತಾಲ್ಲೂಕು ಕೇಂದ್ರಗಳವರೆಗೂ ಹಬ್ಬಿತು. ಮಧ್ಯಮ ವರ್ಗದ ಡಾರ್ಲಿಂಗ್ ಆದ ವಸಂತಕುಮಾರ್ ಬಡ ಮತ್ತು ಮಧ್ಯಮ ವರ್ಗದ ಸಾವಿರಾರು ಯುವಕ ಯುವತಿಯರಿಗೆ ಆಶ್ರಯದಾತರಾದರು.
ಮರ್ಫಿ ರೇಡಿಯೋ ಎಂದರೆ, ಬಾಯಲ್ಲಿ ತೋರು ಬೆರಳು ಇಟ್ಟುಕೊಂಡ ಮಗು ನೆನಪಾಗುವಂತೆ, ವಸಂತ್ ಅಂಡ್ ಎಂದರೆ, ಸೂಟ್ ಧರಿಸಿ, ನೀಟಾಗಿ ಕ್ರಾಪ್ ತೆಗೆದ ವಸಂತ್ ತಮಿಳುನಾಡಿನಲ್ಲಿ ಮನೆ ಮಾತಾದರು.
ಯಶಸ್ವಿ ಉದ್ಯಮಿಯಾದ ನಂತರ ದಕ್ಷಿಣ ತಮಿಳುನಾಡು ಜಿಲ್ಲೆಗಳನ್ನು ಗುರಿಯಾಗಿರಿಸಿಕೊಂಡು ವಸಂತ್ ಟಿ.ವಿ. ಆರಂಭಿಸಿದ ಅವರು, ಛಾನಲ್ ನಲ್ಲಿ ತಮಿಳು ಸಿನಿಮಾ ಹಾಸ್ಯ ದೃಶ್ಯಗಳು, ಹಾಡುಗಳನ್ನು ಪ್ರಸಾರ ಮಾಡುತ್ತಾ, ತನ್ನ ಕಂಪನಿಯಲ್ಲಿ ದೊರೆಯುವ ಗೃಹಪಯೋಗಿ ವಸ್ತುಗಳ ಕುರಿತಂತೆ ಜಾಹಿರಾತು ಪ್ರದರ್ಶಿಸುತ್ತಿದ್ದರು. ಕಳೆದ ಹತ್ತು ವರ್ಷಗಳ ಹಿಂದೆ ರಾಜಕೀಯದಲ್ಲಿ ಆಸಕ್ತಿ ವಹಿಸಿ ಒಮ್ಮೆ ಶಾಸಕರಾಗಿದ್ದ ವಸಂತ್ ಕಳೆದ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದಿಂದ ಸ್ಪರ್ಧಿಸಿ ಸಂಸದರಾಗಿದ್ದರು. ಗ್ರಾಮೀಣ ಯುವಕರಿಗೆ ಉದ್ಯೋಗ ನೀಡಿದ್ದು, ಬಡ ಗೃಹಣಿಯರಿಗೆ ಇಡ್ಲಿ ಮತ್ತು ದೋಸೆಗಾಗಿ ಅಕ್ಕಿ ಹಿಟ್ಟು ರುಬ್ಬಲು ಮಿಕ್ಸಿ ಮತ್ತು ಗ್ರೈಂಡರ್ ಗಳನ್ನುಸಾಲದ ಕಂತುಗಳ ರೂಪದಲ್ಲಿ ಪೂರೈಸಿದ್ದು ಅವರಿಗೆ ರಾಜಕೀಯದಲ್ಲಿ ಪ್ರಬಲ ಎದುರಾಳಿಗಳಾದ ಡಿ.ಎಂ.ಕೆ ಮತ್ತು ಅಣ್ಣಾ ಡಿ.ಎಂ.ಕೆ ಪಕ್ಷಗಳನ್ನು ಮಣಿಸಲು ಸಾಧ್ಯವಾಯಿತು.
ಸುಮಾರು ಅರವತ್ತೈದು ವರ್ಷಗಳ ವಸಂತಕುಮಾರ್ ಎಂದಿಗೂ ಬಹಿರಂಗರಾಗಿ ರಾಜಕೀಯ, ಧರ್ಮ, ಜಾತಿ ಇವುಗಳ ಕುರಿತಾಗಿ ಮಾತನಾಡಿದವರಲ್ಲ. ಯುವಕರನ್ನು ಉದ್ಯಮದ ಸಾಹಸಕ್ಕೆ ಪ್ರೋತ್ಸಾಹಿಸುತ್ತಿದ್ದರು. ಮದ್ರಾಸ್ ನಗರದ ಮೌಂಟ್ ರೋಡ್ ಎಂಬ ರಸ್ತೆಯಲ್ಲಿ ಹಿಂದೂ ಇಂಗ್ಲೀಷ್

 ದಿನ

ಪತ್ರಿಕೆಯ ಕಚೇರಿಯ ಸಮೀಪವಿದ್ದ ಮಾರಾಟ ಮಳಿಗೆಯಲ್ಲಿ ಸದಾ ಇರುತ್ತಿದ್ದ ವಸಂತ್ ಆ ಕಾಲದ ಬಿ.ಪಿ.ಎಲ್, ಒನಿಡಾ, ವಿಡಿಯೋಕಾನ್ ಟಿ.ವಿ ಗಳನ್ನು ಮಾರಾಟ ಮಾಡುತ್ತಿದ್ದರು. ಈಗ ಅವರ ಪುತ್ರನ ಮೇಲ್ವಿಚಾರಣೆಯಲ್ಲಿ ಜಗತ್ತಿನ ಎಲ್ಲಾ ಬ್ರಾಂಡ್ ಗಳು ದೊರೆಯುತ್ತವೆ.

ವಸಂತ್ ಕುಮಾರ್ ಅವರ ಸಾಹಸ ಮತ್ತು ಹಳ್ಳಿಗಾಡಿನ ಯುವಕರ ಮೇಲಿದ್ದ ವಿಶ್ವಾಸ ಇಂದಿಗೂ ಸಹ ತಮಿಳುನಾಡಿನಲ್ಲಿ ದಂತ ಕಥೆಯಂತೆ ಅಸ್ತಿತ್ವದಲ್ಲಿವೆ. ನಾನು ಮದ್ರಾಸ್ ನಗರಕ್ಕೆ ಹೋದಾಗ ಅಲ್ಲಿನ ಮೌಂಟ್ ರೋಡ್ ರಸ್ತೆಯಲ್ಲಿರುವ ಅವರ ಮಾರಾಟ ಮಳಿಗೆಯನ್ನು ನೋಡಿದಾಗಲೆಲ್ಲಾ ವಸಂತ್ ರವರ ಆತ್ಮ ವಿಶ್ವಾಸವನ್ನು ಈಗಲೂ ನೆನಪಿಸಿಕೊಳ್ಳುತ್ತೇನೆ.

 

Please follow and like us:
error