ಯಡಿಯೂರಪ್ಪ, ಅಮಿತ್ ಶಾ ವಜಾಗೊಳಿಸಲು ರಾಜ್ಯಪಾಲರಿಗೆ ಕಾಂಗ್ರೆಸ್ ಮನವಿ

ಬೆಂಗಳೂರು, ನ. 2: ‘ಆಪರೇಷನ್ ಕಮಲ’ ಆಡಿಯೋ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕೂಡಲೇ ವಜಾ ಗೊಳಿಸಬೇಕೆಂದು ಆಗ್ರಹಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದ ನಿಯೋಗ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.

ಶನಿವಾರ ರಾಜಭವನಕ್ಕೆ ಭೇಟಿ ಮಾಡಿದ ಕಾಂಗ್ರೆಸ್ ಮುಖಂಡರ ನಿಯೋಗ ಮೂರು ಪುಟಗಳ ಮನವಿ ಪತ್ರವನ್ನು ರಾಜ್ಯಪಾಲ ವಜುಬಾಯಿ ವಾಲಾ ಅವರಿಗೆ ಸಲ್ಲಿಸಿದೆ. ಆ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿರುವುದು ದೇಶಕ್ಕೆ ಗೊತ್ತಾಗಿದೆ. ನಾನೊಬ್ಬನೆ ಸರಕಾರ ಬೀಳಿಸಿಲ್ಲ. ಅದಕ್ಕೆ ಅಮಿತ್ ಶಾ ಮಾರ್ಗದರ್ಶನವಿತ್ತು ಎಂದು ಖುದ್ದು ಬಿಎಸ್‌ವೈ ಒಪ್ಪಿಕೊಂಡಿದ್ದಾರೆ. ಇದು ಪಕ್ಷಾಂತರ ನಿಷೇಧ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಮಾಡಿದ್ದಾರೆ. ಅಮಿತ್ ಶಾ ಮತ್ತು ಬಿಎಸ್‌ವೈ ಇಬ್ಬರೂ ಸೇರಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ. ಹೀಗಾಗಿ ಕೂಡಲೇ ಸಿಎಂ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಹಾಗೂ ಕೇಂದ್ರ ಗೃಹ ಸಚಿವ ಸ್ಥಾನದಿಂದ ಅಮಿತ್ ಶಾ ಅವರನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಆಪರೇಷನ್ ಕಮಲದ ಆಡಿಯೋ ಮಾಧ್ಯಮಗಳಲ್ಲಿ ಬಿತ್ತರವಾಗಿದ್ದು, ಬಿಎಸ್‌ವೈ ಮತ್ತು ಅಮಿತ್ ಶಾ ಅವರ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದು, ಅವರಿಗೆ ಎಲ್ಲ ವಿಚಾರಗಳನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ

-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

Please follow and like us:
error