ಮೋದಿ ಹೇಳಿದಂತೆ ಯಶವಂತ್ ಸಿನ್ಹಾ ‘ದೇಶದ ಕೆಲಸ’ ಮಾಡಿದ್ದಾರೆ: ಶತ್ರುಘ್ನ ಸಿನ್ಹಾ ಕುಟುಕು

ಹೊಸದಿಲ್ಲಿ, ಸೆ.28: ಕೇಂದ್ರ ಸರಕಾರ ಹಾಗೂ ಅದರ ಆರ್ಥಿಕ ನೀತಿಗಳ ವಿರುದ್ಧ ಬಿಜೆಪಿಯ ಹಿರಿಯ ನಾಯಕ ಯಶವಂತ್ ಸಿನ್ಹಾ ಹರಿಹಾಯ್ದಿರುವುದನ್ನು ಪಕ್ಷದ ಇನ್ನೊಬ್ಬ ನಾಯಕ ಶತ್ರುಘ್ನ ಸಿನ್ಹಾ ಸಮರ್ಥಿಸಿಕೊಂಡಿದ್ದಾರೆ. ಯಶವಂತ್ ಸಿನ್ಹಾ ಪ್ರಧಾನಿ ಮೋದಿಯ ಆದೇಶಗಳನ್ನಷ್ಟೇ ಪಾಲಿಸಿದ್ದಾರೆ ಎಂದು ಶತ್ರುಘ್ನ ಸಿನ್ಹಾ ಹೇಳಿದ್ದಾರೆ.

ಕಳೆದ ವಾರ ದೊಡ್ಡ ಸಭೆಯೊಂದನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ ‘‘ದೇಶ ಮೊದಲು, ಪಕ್ಷ ನಂತರ’’ ಎಂದು ಹೇಳಿದ್ದರು. ಇದೇ ಕಾರಣಕ್ಕೆ ಯಶವಂತ್ ಸಿನ್ಹಾ ಅವರು ವಿತ್ತ ಸಚಿವ ಅರುಣ್ ಜೇಟ್ಲಿ ವಿರುದ್ಧ ಹರಿಹಾಯ್ದರಲ್ಲದೆ ದೇಶದ ಆರ್ಥಿಕತೆಯ ಅವ್ಯವಸ್ಥೆಗೆ ಅವರೇ ಕಾರಣರೆಂದು ದೂರಿದ್ದರು. ಅಷ್ಟೇ ಅಲ್ಲದೆ ಮುಂದಿನ ಚುನಾವಣೆ 2019ರಲ್ಲಿ ನಡೆಯುವ ಮೊದಲೇ ದೇಶದ ಆರ್ಥಿಕತೆ ಇನ್ನಷ್ಟು ಗೋಜಲಾಗಲಿದೆ ಎಂದೂ ಭವಿಷ್ಯ ನುಡಿದಿದ್ದಾರೆ ಎಂದು ಸಿನ್ಹಾ ಹೇಳಿದ್ದಾರೆ.

‘‘ಪಕ್ಷಕ್ಕಿಂತ ದೇಶ ದೊಡ್ಡದು, ದೇಶದ ಹಿತಾಸಕ್ತಿ ಮೊದಲು ಎಂದು ಪ್ರಧಾನಿಯೇ ಇತ್ತೀಚೆಗೆ ಹೇಳಿದ್ದರು’’ ಎಂದು ಸಿನ್ಹಾ ಟ್ವೀಟ್ ಮಾಡಿದ್ದಾರೆ.
‘‘ಸಿನ್ಹಾ ಅವರು ಬರೆದಿದ್ದೆಲ್ಲವೂ ಪಕ್ಷದ ಹಾಗೂ ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾಗಿದೆ ಎಂದು ನನ್ನ ದೃಢವಾದ ನಂಬಿಕೆ. ಭಾರತದ ಆರ್ಥಿಕ ಪರಿಸ್ಥಿತಿಗೆ ಸಿನ್ಹಾ ಬರಹ ಕೈಗನ್ನಡಿಯಾಗಿದೆ’’ ಎಂದು ಶತ್ರುಘ್ನ ಸಿನ್ಹಾ ಹೇಳಿದ್ದಾರೆ.

‘‘ಮಾಜಿ ಸಚಿವರು ತಮ್ಮ ಮನದಾಳದ ಮಾತುಗಳನ್ನು ಹೇಳಿದ್ದಕ್ಕೆ ಅವರನ್ನು ಪ್ರಶಂಸಿಸಬೇಕು’’ ಎಂದ ಸಿನ್ಹಾ, ನಂತರ ಹಿಂದಿನ ವಾಜಪೇಯಿ ಸರಕಾರದಲ್ಲಿ ಯಶವಂತ್ ಸಿನ್ಹಾ ಅವರೊಂದಿಗೆ ಸಚಿವರಾಗಿದ್ದ ಹಾಗೂ ಈಗ ಮೋದಿ ಟೀಕಾಕಾರರಾಗಿರುವ ಅರುಣ್ ಶೌರಿಯವರನ್ನೂ ಹಾಡಿ ಹೊಗಳುವ ಟ್ವೀಟುಗಳನ್ನು ಮಾಡಿದ್ದಾರೆ. ‘‘ಯಶವಂತ್ ಸಿನ್ಹಾ ಹಾಗೂ ಅರುಣ್ ಶೌರಿ ಇಬ್ಬರೂ ಬಹಳಷ್ಟು ಅನುಭವೀ ನಾಯಕರು ಅವರಿಗೆ ಯಾವುದೇ ನಿರೀಕ್ಷೆಗಳಿಲ್ಲ ಹಾಗೂ ಸಚಿವರಾಗಬೇಕೆಂಬ ಇಚ್ಛೆಯೂ ಇಲ್ಲ’’ಎಂದೂ ಶತ್ರುಘ್ನ ಸಿನ್ಹಾ ಬರೆದಿದ್ದಾರೆ.

ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆಯಲ್ಲಿ 79 ವರ್ಷದ ಯಶವಂತ್ ಸಿನ್ಹಾ ಅವರು ‘‘ಐ ನೀಡ್ ಟು ಸ್ಪೀಕ್ ಅಪ್ ನೌ’’ ಎಂಬ ಶೀರ್ಷಿಕೆಯ ಲೇಖನ ಬರೆದಿರುವುದು ಸಾಕಷ್ಟು ಕೋಲಾಹಲ ಸೃಷ್ಟಿಸಿದೆ. ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಹಗೂ ಪಿಯೂಷ್ ಗೋಯೆಲ್ ಮಾತ್ರ ಯಶವಂತ್ ಸಿನ್ಹಾ ಅವರ ಬರಹವನ್ನು ವಿರೋಧಿಸಿದ್ದರಲ್ಲದೆ, ಇಡೀ ವಿಶ್ವವೇ ಭಾರತದ ಕ್ಷಿಪ್ರ ಪ್ರಗತಿಯನ್ನು ಗಮನಿಸುತ್ತಿದೆ ಎಂದಿದ್ದಾರೆ.