ಮೋದಿ ಸರಕಾರದ ತಪ್ಪುಗಳನ್ನು ಮರೆಮಾಚಲು ಎನ್‌ಆರ್‌ಸಿ, ಸಿಎಎ ಜಾರಿ: ಸಸಿಕಾಂತ್ ಸೆಂಥಿಲ್

ಬೆಂಗಳೂರು, ಜ.4: ಪೌರತ್ವ(ತಿದ್ದುಪಡಿ) ಕಾಯ್ದೆ ಹಾಗೂ ಎನ್‌ಆರ್‌ಸಿಯನ್ನು ಜಾರಿಗೊಳಿಸಿದರೆ ದೇಶದಾದ್ಯಂತ ಭ್ರಷ್ಟಾಚಾರ ಅಧಿಕವಾಗಲಿದೆ ಎಂದು ಎಂದು ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಹೇಳಿದ್ದಾರೆ.

ಶನಿವಾರ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಆಯೋಜಿಸಿದ್ದ ಪೌರತ್ವ(ತಿದ್ದುಪಡಿ) ಕಾಯ್ದೆ-2019 ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೇಂದ್ರ ಸರಕಾರವು ಧರ್ಮದ ಆಧಾರದಲ್ಲಿ ದೇಶವನ್ನು ವಿಭಜಿಸಲು ಮುಂದಾಗಿದೆ. ಅದರ ಭಾಗವಾಗಿ ಎನ್‌ಆರ್‌ಸಿ, ಸಿಎಎಗಳನ್ನು ಜಾರಿಗೆ ಮುಂದಾಗಿದೆ. ಇದು ಜಾರಿಯಾದರೆ ದೇಶದ ಬಹುತೇಕ ಜನರು ತಮ್ಮ ಅಸ್ತಿತ್ವವನ್ನು ಸಾಬೀತು ಮಾಡಿಕೊಳ್ಳಲು ದಾಖಲೆಗಳಿಗಾಗಿ ಸರಕಾರಿ ಕಚೇರಿಗಳಿಗೆ ಅಲೆಯಬೇಕಾಗುತ್ತದೆ. ಆಗ ಇದೊಂದು ದೊಡ್ಡ ಭ್ರಷ್ಟಾಚಾರ ಜಾಲವಾಗಿ ಸೃಷ್ಟಿಯಾಗಲಿದೆ ಎಂದರು.

ಬಿಜೆಪಿಯು ಸಂವಿಧಾನದ ಆಶಯಗಳನ್ನು ದಮನ ಮಾಡಲು ಮುಂದಾಗಿದೆ. ಸಂವಿಧಾನದ ಭದ್ರ ಬುನಾದಿಯಾದ ಸಮಾನತೆಯ ಆಶಯಗಳಿಗೆ ಚೂರಿ ಹಾಕಿ, ಮನುಸ್ಮತಿಯನ್ನು ತರಲು ಮುಂದಾಗಿದ್ದಾರೆ. ಕಾರಣವಿಲ್ಲದೆ, ಈ ದೇಶದ ನಿವಾಸಿಗಳನ್ನು ಹೊರಗಿನವರು ಎಂದು ಹೇಳಲು ಹೊರಟಿದ್ದಾರೆ. ಅಸ್ತಿತ್ವವಿಲ್ಲದ ದಾಖಲೆಗಳನ್ನು ಎಲ್ಲಿಂದ ತಂದು ಸಾಬೀತುಪಡಿಸಲು ಸಾಧ್ಯ ಎಂದು ತಿಳಿಸಿದರು.

ಭಾರತದಲ್ಲಿ ಹಲವಾರು ಕುಟುಂಬಗಳಿಗೆ ಸರಿಯಾದ ನೆಲೆಯೇ ಇಲ್ಲ, ಜಮೀನು ಇಲ್ಲದ ಅನೇಕ ಜನರಿದ್ದಾರೆ. ಆದರೆ, ಎಲ್ಲರೂ ಕಡ್ಡಾಯವಾಗಿ ದಾಖಲೆ ತೋರಿಸಬೇಕು ಎಂದು ಹೇಳುತ್ತಿದ್ದಾರೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸುಳ್ಳುಗಳನ್ನು ಜನರ ತಲೆಗೆ ತುಂಬುತ್ತಿದ್ದಾರೆ ಎಂದು ಅವರು ಆಪಾದಿಸಿದರು.

ಭಾರತದಲ್ಲಿರುವ ಅಕ್ರಮ ನುಸುಳುಕೋರರ ಕುರಿತು ಪಟ್ಟಿ ನೀಡುವಂತೆ ಪಾಕಿಸ್ತಾನ, ಬಾಂಗ್ಲಾದೇಶಗಳು ಕೇಳಿವೆ. ಅಲ್ಲದೆ, ಯೂರೋಪ್ ಯೂನಿಯನ್ ಒಕ್ಕೂಟ ಭಾರತಕ್ಕೆ ಛೀಮಾರಿ ಹಾಕಿದೆ. ಆದರೂ, ಕೇಂದ್ರ ಸರಕಾರ ಕನಿಷ್ಠ ಪಕ್ಷ ಸೌಜನ್ಯಕ್ಕಾದರೂ ಕಾಯ್ದೆಯನ್ನು ಮರು ಪರಿಶೀಲನೆ ಮಾಡುತ್ತೇವೆಂದು ಹೇಳಿಲ್ಲ. ಅವರ ಉದ್ದೇಶ ಸ್ಪಷ್ಟವಾಗಿದ್ದು, ಹಿಂಬಾಗಿಲಿನಿಂದ ಸಂವಿಧಾನಕ್ಕೆ ಇತಿಶ್ರೀ ಹಾಡಬೇಕು ಎಂಬುದು. ಅದರ ಕೆಲಸ ಮಾಡುತ್ತಿದ್ದಾರೆ ಎಂದರು.

ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಮಾತನಾಡಿ, ಮೋದಿ ಸರಕಾರ ಮಾಡಿದ ತಪ್ಪುಗಳನ್ನು ಮರೆಮಾಚಲು ಎನ್‌ಆರ್‌ಸಿ, ಸಿಎಎ ಅನ್ನು ಜನರ ನಡುವೆ ತರಲು ಮುಂದಾಗಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿ ಕುಸಿತ, ಬರ ಮತ್ತು ನೆರೆಯಿಂದ ಜನತೆ ತತ್ತರಿಸಿದೆ. ಇವುಗಳಿಗೆ ಪರಿಹಾರ ಕಲ್ಪಿಸದೇ, ಜನರನ್ನು ದಿಕ್ಕು ತಪ್ಪಿಸಲು ಮುಂದಾಗಿದ್ದಾರೆ ಎಂದರು.

ಪೊಲೀಸರು ತಪ್ಪು ಮಾಡಿದ ರೌಡಿಶೀಟರ್‌ಗಳನ್ನು ರಿಜಿಸ್ಟರ್ ಮಾಡಿದಂತೆ, ಜನರನ್ನು ರಿಜಿಸ್ಟರ್ ಮಾಡಲು ಮುಂದಾಗಿದ್ದಾರೆ. ಗೃಹ ಇಲಾಖೆಗೂ, ಎನ್‌ಆರ್‌ಸಿಗೂ ಏನು ಸಂಬಂಧ ಎಂದು ಪ್ರಶ್ನಿಸಿದ ಅವರು, ನೋಟು ಅಮಾನ್ಯೀಕರಣದ ವೇಳೆಯಲ್ಲಿ ನಡೆದ ಘಟನೆ ಮರುಕಳಿಸಲಿದೆ. ಕೋಟ್ಯಂತರ ಜನರು ಮತ್ತೊಂದು ಬಾರಿ ದಾಖಲೆಗಳಿಗಾಗಿ ಸಾಲಿನಲ್ಲಿ ನಿಲ್ಲಬೇಕಾದ ಸ್ಥಿತಿ ಬರಲಿದೆ ಎಂದು ತಿಳಿಸಿದರು.

ಕೇಂದ್ರ ಸರಕಾರದ ಈ ನೀತಿಯಿಂದ ನಾವು ಭಾರತೀಯರು ಎಂದು ನಿರೂಪಿಸಿಕೊಳ್ಳಬೇಕಿದೆ. ಆದರೆ, ದೇಶದ ಅರ್ಧಕ್ಕಿಂತಲೂ ಅಧಿಕ ಜನರ ಬಳಿ ಸರಿಯಾದ ದಾಖಲೆಗಳಿರುವುದಿಲ್ಲ. ಹೀಗಾಗಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಗಿರುವ ಶಕ್ತಿ ಯಾರಿಗೂ ಇಲ್ಲ. ಎಲ್ಲರೂ ಸಿಎಎ, ಎನ್‌ಆರ್‌ಸಿ ವಿರುದ್ಧ ಒಟ್ಟಾಗಿ ಹೋರಾಟಕ್ಕೆ ಸಜ್ಜಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕಾನೂನು ಪ್ರಾಧ್ಯಾಪಕ ಬಾಬು ಮ್ಯಾಥ್ಯೂ, ಹಿರಿಯ ಸಮಾಜವಾದಿ ಬಾಪು ಹೆದ್ದೂರು ಶೆಟ್ಟಿ, ಅಂಕಣಕಾರ ರಘು, ವಕೀಲ ಮೋಹನ್ ಕುಮಾರ್, ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಮತ್ತಿತರಿದ್ದರು.

ಭಾರತದಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವೆ ನಿರಂತರ ಧರ್ಮಯುದ್ಧವನ್ನು ಕೇಂದ್ರ ಸರಕಾರ ಆರಂಭಿಸಿದೆ. ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರು 600 ವರ್ಷಗಳ ಕಾಲ ಸತತವಾಗಿ ಯುದ್ಧಗಳನ್ನು ಮಾಡಿಕೊಂಡು ಬಂದಿದ್ದಾರೆ. ಅದೇ ರೀತಿ ಎರಡು ಸಂಸ್ಕೃತಿಗಳ ನಡುವೆ ನಿರಂತರ ಸಂಘರ್ಷ ಇರುವಂತೆ ನೋಡಿಕೊಳ್ಳುವ ಹುನ್ನಾರದಿಂದ ಎನ್‌ಆರ್‌ಸಿ, ಸಿಎಎ ತರಲು ಮುಂದಾಗಿದ್ದಾರೆ. ಯುವ ಸಮೂಹ ಸಿಡಿದೆದ್ದಿರುವುದನ್ನು ನೋಡಿದರೆ ಭವಿಷ್ಯದ ಬಗ್ಗೆ ಭರವಸೆಯನ್ನು ಹುಟ್ಟು ಹಾಕಿದೆ. ಇವರೆಲ್ಲರೂ ಬೀದಿಗೆ ಇಳಿದಿರುವುದು ಮುಸ್ಲಿಮರ ಪರ ಅಲ್ಲ. ಸಂವಿಧಾನವನ್ನು ರಕ್ಷಣೆ ಮಾಡುವ ಸಲುವಾಗಿ.

-ಬಾಪು ಹೆದ್ದೂರು ಶೆಟ್ಟಿ, ಹಿರಿಯ ಸಮಾಜವಾದಿ

Please follow and like us:
error