‘ಮೈ ಲಾರ್ಡ್’ ಪದ ಬಳಸದಂತೆ ವಕೀಲರಿಗೆ ಮನವಿ ಮಾಡಿದ ಜಸ್ಟಿಸ್ ಮುರಳೀಧರ್

ಹೊಸದಿಲ್ಲಿ: ದಿಲ್ಲಿ ಹೈಕೋರ್ಟಿನಿಂದ ಇತ್ತೀಚೆಗೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟಿನ ನ್ಯಾಯಾಧೀಶರಾಗಿ ವರ್ಗಾವಣೆಗೊಂಡಿರುವ ಜಸ್ಟಿಸ್ ಎಸ್ ಮುರಳೀಧರ್ ಅವರು  ತಮ್ಮನ್ನು ‘ಮೈ ಲಾರ್ಡ್’, `ಯುವರ್ ಲಾರ್ಡ್‍ ಶಿಪ್’ ಎಂದು ಸಂಬೋಧಿಸದಂತೆ ವಕೀಲರಿಗೆ ಮನವಿ ಮಾಡಿದ್ದಾರೆ.

ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟಿನ ಮುಂದಿರುವ ಪ್ರಕರಣಗಳ ಪಟ್ಟಿ ಜತೆ ಇರಿಸಲಾಗಿರುವ ಟಿಪ್ಪಣಿಯಲ್ಲಿ ಈ ಕುರಿತು ಮನವಿ ಮಾಡಲಾಗಿದೆ.

ನ್ಯಾಯಾಧೀಶರನ್ನು `ಸರ್’ ಅಥವಾ `ಯುವರ್ ಆನರ್’ ಎಂದು ಸಂಬೋಧಿಸುವುದು ಸೂಕ್ತ ಎಂದು ಹೈಕೋರ್ಟ್ ವಕೀಲರುಗಳ ಸಂಘ ಕೆಲ ವರ್ಷಗಳ ಹಿಂದೆ ತನ್ನ ಸದಸ್ಯರಿಗೆ ಮನವಿ ಮಾಡಿತ್ತಾದರೂ ವಕೀಲರು ಮಾತ್ರ ನ್ಯಾಯಾಧೀಶರುಗಳನ್ನು ಯುವರ್ ಲಾರ್ಡ್‍ ಶಿಪ್ ಎಂದೇ ಸಂಬೋಧಿಸುತ್ತಿದ್ದರು.

ಜಸ್ಟಿಸ್ ಮುರಳೀಧರ್ ಅವರು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟಿನ ನ್ಯಾಯಾಧೀಶರಾಗಿ ಮಾರ್ಚ್ 6ರಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.

ಪ್ರಚೋದನಾತ್ಮಕ ಭಾಷಣ ಮಾಡಿದ ಮೂವರು ಬಿಜೆಪಿ ನಾಯಕರ ವಿರುದ್ಧ ಎಫ್‍ಐಆರ್ ದಾಖಲಿಸಲು ವಿಫಲರಾಗಿದ್ದ ದಿಲ್ಲಿ ಪೊಲೀಸರನ್ನು ಜಸ್ಟಿಸ್ ಮುರಳೀಧರ್ ನೇತೃತ್ವದ ದಿಲ್ಲಿ ಹೈಕೋರ್ಟ್ ಪೀಠ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಫೆಬ್ರವರಿ 26ರಂದು ಕೇಂದ್ರ ಸರಕಾರ ಅವರನ್ನು ವರ್ಗಾಯಿಸಿತ್ತು.

Please follow and like us:
error