ಮೈಸೂರು: ಅಮಿತ್ ಶಾ ವಿರುದ್ಧ ತಿರುಗಿ ಬಿದ್ದ ದಲಿತರು

ಸಂವಾದ ಕಾರ್ಯಕ್ರಮದಲ್ಲಿ ಗದ್ದಲ, ತಳ್ಳಾಟ, ಕೂಗಾಟ 

ಮೈಸೂರು,ಮಾ.30: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ವಿರುದ್ಧ ದಲಿತರು ಧಿಕ್ಕಾರ ಕೂಗಿ, ಆಕ್ರೋಶ ವ್ಯಕ್ತಪಡಿಸಿ, ಗದ್ದಲ, ಕೂಗಾಟ, ತಳ್ಳಾಟ ನಡೆಸಿ ಪರಸ್ಪರ ಕೈ ಕೈ ಮಿಲಾಯಿಸಿದ ಘಟನೆ ನಡೆಯಿತು.

ಕರುನಾಡ ಜಾಗ್ರತಿ ಯಾತ್ರೆ ಕೈಗೊಂಡಿರುವ ಅಮಿತ್ ಶಾ, ಶುಕ್ರವಾರ ನಗರದ ರಾಮಾನುಜ ರಸ್ತೆಯಲ್ಲಿರುವ ರಾಜೇಂದ್ರ ಕಲಾಮಂದಿರದಲ್ಲಿ ದಲಿತ ಮುಖಂಡರೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ದಲಿತರು ಅಮಿತ್ ಶಾ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿ ತೀವ್ರ ವಿರೋಧ ವ್ಯಕ್ತಪಡಿಸಿದರು.

ಭಾರತದ ಸಂವಿಧಾನ ಬದಲಾಯಿಸುವುದೇ ನಮ್ಮ ಗುರಿ ಎಂದಿದ್ದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆ ಸಂಬಂಧ ದಲಿತರು ಎತ್ತಿದ ಪ್ರಶ್ನೆಗೆ ನೇರವಾಗಿ ಉತ್ತರ ಕೊಡದೆ ನುಣುಚಿಕೊಳ್ಳಲು ಯತ್ನಿಸಿದ ಅಮಿತ್ ಶಾ ರ ವಿರುದ್ದ ತೀವ್ರ ಪ್ರತಿಭಟನೆ ವ್ಯಕ್ತವಾಯಿತು.

ಈ ಸಂವಾದಕ್ಕೆ ಜಿಲ್ಲೆಯ ಬಹುತೇಕ ದಲಿತ ಮುಖಂಡರು ಹಾಗೂ ಸಂಘಟನೆಗಳ ಪ್ರಮುಖರನ್ನು ಆಹ್ವಾನಿಸಲಾಗಿತ್ತು. ಈ ವೇಳೆ ಎಲ್ಲಾ ದಲಿತರ ಮುಖಂಡರು ಇತ್ತೀಚೆಗೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಸಂವಿಧಾನ ಬದಲಾಯಿಸಲು ನಾವು ಅಧಿಕಾರಕ್ಕೆ ಬಂದಿರುವುದು ಎಂಬ ಹೇಳಿಕೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಜೊತೆಗೆ ಬಿಜೆಪಿ ಮುಖಂಡ ವಿ.ಶ್ರೀನಿವಾಸಪ್ರಸಾದ್ ಕೂಡ ಪ್ರಾಸ್ತಾವಿಕವಾಗಿ ಮಾತನಾಡುವ ವೇಳೆ ಅನಂತಕುಮಾರ್ ಹೇಳಿಕೆಯನ್ನು ಖಂಡಿಸಿದರಲ್ಲದೇ ರಾಷ್ಟ್ರೀಯ ಅಧ್ಯಕ್ಷರು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಮುಜುಗರಕ್ಕೆ ಒಳಗಾದಂತೆ ಕಂಡ ಅಮಿತ್ ಶಾ ತಮ್ಮ ಮಾತು ಆರಂಭಿಸಿ, ಶ್ರೀನಿವಾಸ ಪ್ರಸಾದ್ ಅವರು ಸೇರಿದಂತೆ ಬಹುತೇಕ ಎಲ್ಲರೂ ಅನಂತಕುಮಾರ್ ಹೆಗಡೆ ಹೇಳಿಕೆಯನ್ನು ಪ್ರಸ್ತಾಪ ಮಾಡಿದ್ದಾರೆ. ಅನಂತಕುಮಾರ್ ಹೆಗಡೆ ಹೇಳಿಕೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಿದ್ದಂತೆಯೇ ಕೆಂಡಮಂಡಲರಾದ ದಲಿತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಎಡದೊರೆ ಮಹದೇವಯ್ಯ, ಜನ ಸಂಗ್ರಾಮ ಪರಿಷತ್ ವಿಭಾಗೀಯ ಸಂಚಾಲಕ ನಗರ್ಲೆ ವಿಜಯಕುಮಾರ್ ತೀವ್ರ ವಿರೋಧ ವ್ಯಕ್ತಪಡಿಸಿದರು. ‘ಹಾಗಿದ್ದರೆ ಅವರನ್ನು ಸಚಿವ ಸಂಪುಟದಿಂದ ಏಕೆ ಕೈಬಿಟ್ಟಿಲ್ಲ? ನಿಮ್ಮ ಪಕ್ಷದಲ್ಲಿ ಏಕೆ ಇಟ್ಟುಕೊಂಡಿದ್ದೀರಿ? ಇದೆಲ್ಲಾ ದಲಿತರನ್ನು ಓಲೈಸುವ ನಾಟಕ. ಇದೊಂದು ಚುನಾವಣಾ ಗಿಮಿಕ್. ನಿಮ್ಮ ಹೇಳಿಕೆಗೆ ಧಿಕ್ಕಾರ’ ಎಂದು ಕೂಗಿದರು.

ಒಂದು ಹಂತದಲ್ಲಿ ದಲಿತ ಮುಖಂಡರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಕೈ ಕೈ ಮಿಲಾಯಿಸುವ ಹಂತ ತಲುಪಿತಾದರೂ ತಕ್ಷಣ ಪೊಲೀಸರು ಮಧ್ಯ ಪ್ರವೆಶಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.

ಚೋರನಹಳ್ಳಿ ಶಿವಣ್ಣ ಅವರನ್ನು ಸಭೆಯಲ್ಲಿ ಹಾಜರಿದ್ದ ಬಹುತೇಕ ದಲಿತರು ಬೆಂಬಲಿಸಿ, ‘ಅವರು ಹೇಳುತ್ತಿರುವುದು ಸತ್ಯ. ಹಾಗಿದ್ದ ಮೇಲೆ ಅನಂತಕುಮಾರ್ ಹೆಗಡೆ ಅವರನ್ನು ಏಕೆ ಸಚಿವ ಸಂಪುಟದಲ್ಲಿ ಇಟ್ಟುಕೊಂಡಿದ್ದೀರಿ. ಮೊದಲು ಸ್ಪಷ್ಟಪಡಿಸಿ’ ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರ ನೀಡಲಾಗದೆ ಅಸಹಾಯಕರಾದ ಅಮಿತ್ ಶಾ, ನೆರೆದಿದ್ದವರನ್ನು ಕುಳಿತುಕೊಳ್ಳಿ, ಕುಳಿತುಕೊಳ್ಳಿ ಎಂದಷ್ಟೇ ಹೇಳಿದರು.

ಗಲಾಟೆ ಮತ್ತಷ್ಟು ಹೆಚ್ಚಾಗಬಹುದು ಎಂದು ಸಭೆಯಿಂದ ಚೋರನಹಳ್ಳಿ ಶಿವಣ್ಣ, ಎಡೆದೊರೆ ಮಹದೇವಯ್ಯ, ನಗರ್ಲೆ ವಿಜಯ್‍ಕುಮಾರ್ ಅವರನ್ನು ಪೊಲೀಸರು ಹೊರಗಡೆಗೆ ಎಳೆದೊಯ್ದರು. ಈ ವೇಳೆ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಈ ಮೂವರು ಮುಖಂಡರು, ‘ನಮ್ಮನ್ನು ಸಂವಾದಕ್ಕೆ ಆಹ್ವಾನಿಸಿ ಅವಮಾನ ಮಾಡುತ್ತಿದ್ದಾರೆ. ದಲಿತರ ಮೇಲೆ ಸವಾರಿ ಮಾಡಲು ಬಿಜೆಪಿ ನಾಯಕರು ಯತ್ನಿಸುತ್ತಿದ್ದಾರೆ. ಇವರಿಗೆ ಧಿಕ್ಕಾರ, ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಜಯವಾಗಲಿ. ಸಂವಿಧಾನ ನಮ್ಮ ಶ್ರೇಷ್ಠ ಗ್ರಂಥ. ದಲಿತರ ಭಾವನೆಗೆ ಧಕ್ಕೆ ಬಂದರೆ ಸಹಿಸುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿ ಹೊರನಡೆದರು.

ಸಂವಾದದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ದಲಿತ ಮುಖಂಡ ವಿ.ಶ್ರೀನಿವಾಸಪ್ರಸಾದ್, ಮಾಜಿ ಸಚಿವರಾದ ಸಿ.ಟಿ.ರವಿ, ಎಸ್.ಎ.ರಾಮದಾಸ್, ಎಸ್ಸಿ ಮೋರ್ಚಾ ಅಧ್ಯಕ್ಷ ಡಿ.ಎಸ್.ವೀರಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ, ಬಿಜೆಪಿ ಮುಖಂಡರಾದ ಕೆ.ಶಿವರಾಂ, ನಿಂಗರಾಜ್ ಮಲ್ಲಾಡಿ, ಮಾಜಿ ಜಿ.ಪಂ ಉಪಾಧ್ಯಕ್ಷ ಡಾ.ಶಿವರಾಂ, ಬಿಜೆಪಿ ಮುಖಂಡರಾದ ಶಶಿಕಲಾ ನಾಗರಾಜ್, ಡಾ.ಭಾರತಿ ಶಂಕರ್, ಎಸ್.ಮಹದೇವಯ್ಯ, ಸಿ.ರಮೇಶ್. ಚಿ.ನಾ.ರಾಮು ಉಪಸ್ಥಿತರಿದ್ದರು.

ದಲಿತ ಮುಖಂಡರಾದ ವಿ.ರಾಮಸ್ವಾಮಿ, ಡಾ.ಸದಾನಂದ, ರಮೇಶ್, ಮಹೇಶ್, ಬಸವರಾಜು, ಸೋಮಶೇಖರ್, ಡಾ.ಚಿದಾನಂದ್ ಸೇರಿದಂತೆ ಹಲವರು ಸಂವಾದದಲ್ಲಿ ಪಾಲ್ಗೊಂಡಿದ್ದರು.

courtesy : varthabharati

Please follow and like us: