ಮೇಲ್ಜಾತಿಗಳ ಭದ್ರಕೋಟೆಯಾಗಿರುವ ಭಾರತದ ಮಾಧ್ಯಮಗಳು

ಟಿವಿ ವಾರ್ತೆಗಳು (ಹಿಂದಿ ಮತ್ತು ಇಂಗ್ಲಿಷ್), ವರ್ತಮಾನ ಪತ್ರಿಕೆಗಳು, ಡಿಜಿಟಲ್ ಮೀಡಿಯಾ ಹಾಗೂ ಮ್ಯಾಗಝಿನ್‌ಗಳ ಅಧ್ಯಯನ, ಸಂಶೋಧನೆಯ ಬಳಿಕ ಬರೆಯಲಾದ ವರದಿಯು ಭಾರತದ ಮಾಧ್ಯಮರಂಗದ ಬಗ್ಗೆ ಬೆಚ್ಚಿಬೀಳಿಸುವ ಅಂಶಗಳನ್ನು ಬಯಲುಗೊಳಿಸಿದೆ. ಇವುಗಳಲ್ಲಿ ಅತ್ಯಂತ ಆಘಾತಕಾರಿ ಅಂಶ ಇದು: ‘‘121 ನ್ಯೂಸ್‌ರೂಮ್ ಲೀಡರ್‌ಶಿಪ್ ಹುದ್ದೆಗಳಲ್ಲಿ ಅಂದರೆ ಮುಖ್ಯ ಸಂಪಾದಕ, ಮ್ಯಾನೇಜಿಂಗ್ ಎಡಿಟರ್, ಕಾರ್ಯನಿರ್ವಾಹಕ ಸಂಪಾದಕ, ಬ್ಯೂರೋ ಮುಖ್ಯಸ್ಥ, ಇನ್‌ಪುಟ್/ಔಟ್‌ಪುಟ್ ಎಡಿಟರ್ ಹುದ್ದೆಗಳಲ್ಲಿ, ಟಿವಿ ನ್ಯೂಸ್ ಚಾನೆಲ್‌ಗಳಲ್ಲಿ, ವಾರ್ತಾ ವೆಬ್‌ಸೈಟ್‌ಗಳಲ್ಲಿ ಮತ್ತು ಮ್ಯಾಗಝಿನ್‌ಗಳಲ್ಲಿ 106 ಹುದ್ದೆಗಳನ್ನು ಹೊಂದಿರುವವರು ಮೇಲ್ಜಾತಿಗಳಿಗೆ ಸೇರಿದವರು; ಪರಿಶಿಷ್ಟ ಜಾತಿಗಳು(ಎಸ್ಸಿ) ಹಾಗೂ ಪರಿಶಿಷ್ಟ ವರ್ಗಗಳಿಗೆ (ಎಸ್ಟಿ) ಸೇರಿದವರು ಒಬ್ಬನೇ ಒಬ್ಬ ಕೂಡ ಇಲ್ಲ.’’

ಮಾಧ್ಯಮಗಳಲ್ಲಿ, ಟಿವಿಗಳಲ್ಲಿ ನಡೆಯುವ ಚರ್ಚೆಗಳಲ್ಲಿ ಪ್ರತಿ ನಾಲ್ವರು ಆ್ಯಂಕರ್‌ಗಳಲ್ಲಿ ಮೂವರು ಮೇಲ್ಜಾತಿಗಳಿಗೆ ಸೇರಿದವರು; ಒಬ್ಬನೇ ಒಬ್ಬ ಕೂಡ ದಲಿತ, ಆದಿವಾಸಿ ಅಥವಾ ಒಬಿಸಿ ಇಲ್ಲ. ಪತ್ರಿಕೆಗಳಲ್ಲಿ ಪ್ರಕಟವಾಗುವ 972 ಮುಖಪುಟ ಲೇಖನಗಳಲ್ಲಿ ಹತ್ತು ಲೇಖನಗಳು ಮಾತ್ರ ಜಾತಿಗೆ ಸಂಬಂಧಿಸಿದ ಸಮಸ್ಯೆಗಳು, ವಿಷಯಗಳ ಕುರಿತಾದ ಲೇಖನಗಳು. ಇಂಗ್ಲಿಷ್ ವರ್ತಮಾನ ಪತ್ರಿಕೆಗಳಲ್ಲಿ ಪ್ರಕಟವಾಗುವ ಒಟ್ಟು ಲೇಖನಗಳಲ್ಲಿ ದಲಿತರು ಅಥವಾ ಆದಿವಾಸಿಗಳು ಬರೆಯುವ ಲೇಖನಗಳು ಶೇ. 5 ಕ್ಕಿಂತ ಹೆಚ್ಚಿಲ್ಲ.

ಇವು ಭಾರತದ ಮೀಡಿಯಾದಲ್ಲಿ ಜಾತಿಗಳ ಪ್ರಾತಿನಿಧ್ಯದ ಬಗ್ಗೆ ಅಧ್ಯಯನ ನಡೆಸಿ ಪ್ರಕಟಿಸಲಾದ ಇತ್ತೀಚಿನ ಒಂದು ವರದಿ ಬಯಲುಗೊಳಿಸಿದ ಅಂಕಿಸಂಖ್ಯೆಗಳು. ‘‘ಹೂ ಟೆಲ್ಸ್ ಅವರ್ ಸ್ಟೋರೀಸ್ ಮ್ಯಾಟರ್ಸ್‌: ರೆಪ್ರಸೆಂಟೇಶನ್ ಆಫ್ ಮಾರ್ಜಿನಲೈಸ್ಡ್ ಕಾಸ್ಟ್ ಗ್ರೂಪ್ಸ್ ಇನ್ ಇಂಡಿಯನ್ ನ್ಯೂಸ್ ರೂಮ್ಸ್’’ ಎಂಬ ವರದಿಯನ್ನು ದಿಲ್ಲಿ ‘ದಿ ಮೀಡಿಯಾ ರಂಬ್ಲ್’ ಕಳೆದ ಆಗಸ್ಟ್ 2 ರಂದು ಬಿಡುಗಡೆಮಾಡಿತು. ಟಿವಿ ವಾರ್ತೆಗಳು (ಹಿಂದಿ ಮತ್ತು ಇಂಗ್ಲಿಷ್), ವರ್ತಮಾನ ಪತ್ರಿಕೆಗಳು, ಡಿಜಿಟಲ್ ಮೀಡಿಯಾ ಹಾಗೂ ಮ್ಯಾಗಝಿನ್‌ಗಳ ಅಧ್ಯಯನ, ಸಂಶೋಧನೆಯ ಬಳಿಕ ಬರೆಯಲಾದ ವರದಿಯು ಭಾರತದ ಮಾಧ್ಯಮರಂಗದ ಬಗ್ಗೆ ಬೆಚ್ಚಿಬೀಳಿಸುವ ಅಂಶಗಳನ್ನು ಬಯಲುಗೊಳಿಸಿದೆ. ಇವುಗಳಲ್ಲಿ ಅತ್ಯಂತ ಆಘಾತಕಾರಿ ಅಂಶ ಇದು: ‘‘121 ನ್ಯೂಸ್‌ರೂಮ್ ಲೀಡರ್‌ಶಿಪ್ ಹುದ್ದೆಗಳಲ್ಲಿ ಅಂದರೆ ಮುಖ್ಯ ಸಂಪಾದಕ, ಮ್ಯಾನೇಜಿಂಗ್ ಎಡಿಟರ್, ಕಾರ್ಯನಿರ್ವಾಹಕ ಸಂಪಾದಕ, ಬ್ಯೂರೋ ಮುಖ್ಯಸ್ಥ, ಇನ್‌ಪುಟ್/ಔಟ್‌ಪುಟ್ ಎಡಿಟರ್ ಹುದ್ದೆಗಳಲ್ಲಿ, ಟಿವಿ ನ್ಯೂಸ್ ಚಾನೆಲ್‌ಗಳಲ್ಲಿ, ವಾರ್ತಾ ವೆಬ್‌ಸೈಟ್‌ಗಳಲ್ಲಿ ಮತ್ತು ಮ್ಯಾಗಝಿನ್‌ಗಳಲ್ಲಿ 106 ಹುದ್ದೆಗಳನ್ನು ಹೊಂದಿರುವವರು ಮೇಲ್ಜಾತಿಗಳಿಗೆ ಸೇರಿದವರು; ಪರಿಶಿಷ್ಟ ಜಾತಿಗಳು(ಎಸ್ಸಿ) ಹಾಗೂ ಪರಿಶಿಷ್ಟ ವರ್ಗಗಳಿಗೆ (ಎಸ್ಟಿ) ಸೇರಿದವರು ಒಬ್ಬನೇ ಒಬ್ಬ ಕೂಡ ಇಲ್ಲ.’’

ಟಿವಿ ನ್ಯೂಸ್

ಅಧ್ಯಯನ ನಡೆಸಿದ ಸಂಶೋಧಕರು ಏಳು ಇಂಗ್ಲಿಷ್ ಹಾಗೂ ಹಿಂದಿ ನ್ಯೂಸ್ ಚಾನೆಲ್‌ಗಳನ್ನು ಆಯ್ದು ಕೊಂಡಿದ್ದರು. ಇಂಗ್ಲಿಷ್ ಚಾನೆಲ್‌ಗಳು: ಸಿಎನ್‌ಎನ್-ನ್ಯೂಸ್18, ಇಂಡಿಯಾ ಟುಡೆ, ಮಿರರ್ ನೌ, ಎನ್‌ಡಿಟಿವಿ 24×7, ರಾಜ್ಯಸಭಾ ಟಿವಿ, ರಿಪಬ್ಲಿಕ್ ಟಿವಿ ಮತ್ತು ಟೈಮ್ಸ್ ನೌ. ಅವರು ಆಯ್ದುಕೊಂಡ ಹಿಂದಿ ಚಾನೆಲ್‌ಗಳು: ಆಜ್‌ತಕ್, ನ್ಯೂಸ್18 ಇಂಡಿಯಾ, ಇಂಡಿಯಾ ಟಿವಿ, ಎನ್‌ಡಿಟಿವಿ ಇಂಡಿಯಾ, ರಾಜ್ಯ ಸಭಾ ಟಿವಿ, ರಿಪಬ್ಲಿಕ್ ಭಾರತ್ ಮತ್ತು ಝೀ ನ್ಯೂಸ್,

ವರದಿ ಹೇಳುವಂತೆ, ಇಂಗ್ಲಿಷ್ ಟಿವಿ ನ್ಯೂಸ್ ಚಾನೆಲ್‌ಗಳ ಲೀಡರ್‌ಶಿಪ್ ಹುದ್ದೆಗಳಲ್ಲಿ ಶೇ. 89 ಹುದ್ದೆಗಳು ಜನರಲ್ ಕೆಟೆಗರಿ (ಸಾಮಾನ್ಯ ವರ್ಗ)ಗೆ ಸೇರಿದವು ಮತ್ತು ಆ್ಯಂಕರ್‌ಗಳಲ್ಲಿ ಶೇ. 76 ಹುದ್ದೆಗಳು ಇದೇ ವರ್ಗಕ್ಕೆ ಸೇರಿದವುಗಳು, ಹಾಗೆಯೇ, ಇದೇ ಶೋಗಳಲ್ಲಿ ಭಾಗವಹಿಸಿದ ಪ್ಯಾನೆಲಿಸ್ಟ್‌ಗಳಲ್ಲಿ ಕೇವಲ ಶೇ. 5.6 ಮಂದಿ ಎಸ್ಸಿಗಳು ಮತ್ತು ಎಸ್ಟಿಗಳು ಒಂದು ಶೇಕಡಾ ಕೂಡ ಇಲ್ಲ.

ಕುತೂಹಲದ ವಿಷಯವೇನೆಂದರೆ, ಜಾತಿಗೆ ಸಂಬಂಧಿಸಿದ ಚರ್ಚೆಗಳು ನಡೆದಾಗ, ನ್ಯೂಸ್ ಚಾನೆಲ್‌ಗಳಲ್ಲಿ ಭಾಗವಹಿಸಿದವರಲ್ಲಿ ಶೇ. 62 ಮಂದಿ ಪ್ಯಾನೆಲಿಸ್ಟ್‌ಗಳು ಜನರಲ್ ಕೆಟಗರಿಗೆ ಸೇರಿದವರಾಗಿದ್ದರು. ಎಸ್ಟಿಗಳಿಗೆ ಇಂತಹ ಚರ್ಚೆಗಳಲ್ಲಿ ಬಹುತೇಕ ಪ್ರಾತಿನಿಧ್ಯ ಇರಲೇ ಇಲ್ಲ ಎನ್ನಬಹುದು. ಹಿಂದಿ ಚಾನೆಲ್‌ಗಳಲ್ಲಿ ತೀರ ಕೆಳ ಜಾತಿಯವರಿಗೆ ಪ್ರವೇಶವೇ ಇರಲಿಲ್ಲ, ಎನ್ನುತ್ತದೆ ವರದಿ; ಇಲ್ಲಿ ಲೀಡರ್‌ಶಿಫ್ ಹುದ್ದೆಗಳಲ್ಲಿ ಶೇ. 100 ಸಾಮಾನ್ಯ ವರ್ಗದವರು ಹಾಗೂ ಪ್ರೈಮ್ ಟೈಮ್ ಶೋಗಳ ಶೇ. 80 ಆ್ಯಂಕರ್‌ಗಳು ಕೂಡ ಸಾಮಾನ್ಯ ವರ್ಗದವರೇ. ಚರ್ಚಾ ಪ್ಯಾನೆಲ್‌ಗಳಲ್ಲಿ ಮೇಲ್ಜಾತಿಯವರ ಪ್ರಾತಿನಿಧ್ಯ ಗರಿಷ್ಠ ಶೇ. 89 ರಾಜ್ಯಸಭಾ ಟಿವಿಯಲ್ಲಿ ಕಂಡುಬಂತು.

ನ್ಯೂಸ್18 ಇಂಡಿಯಾ, ಇಂಡಿಯಾಟಿವಿ ಮತ್ತು ಪಬ್ಲಿಕ್ ಭಾರತ್ ಚಾನೆಲ್‌ಗಳಲ್ಲಿ ಬಾರ್ ಆ್ಯಂಡ್ ಬೆಂಚ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಹುತೇಕ ಎಲ್ಲ ಪ್ಯಾನೆಲಿಸ್ಟ್‌ಗಳು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರಾಗಿದ್ದರು. ಆದರೆ ಅಧ್ಯಯನದ ಆರು ತಿಂಗಳ ಅವಧಿಯಲ್ಲಿ ರಾಜ್ಯ ಸಭಾಟಿವಿ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ ಒಬ್ಬನೇ ಒಬ್ಬ ನ್ಯಾಯವಾದಿಯನ್ನಾಗಲಿ ಅಥವಾ ಕಾನೂನುತಜ್ಞನನ್ನಾಗಲಿ ಆ ಕಾರ್ಯಕ್ರಮಕ್ಕೆ ಆಹ್ವಾನಿಸಿರಲಿಲ್ಲ.

ವರ್ತಮಾನ ಪತ್ರಿಕೆಗಳು

ಅಧ್ಯಯನಕ್ಕೆ ಆರು ಇಂಗ್ಲಿಷ್ ಹಾಗೂ ಏಳು ಹಿಂದಿ ವರ್ತಮಾನ ಪತ್ರಿಕೆಗಳನ್ನು ಆಯ್ದುಕೊಳ್ಳಲಾಗಿತ್ತು. ಇಂಗ್ಲಿಷ್‌ನಲ್ಲಿ ದಿ ಇಕನಾಮಿಕ್ ಟೈಮ್ಸ್, ಹಿಂದುಸ್ಥಾನ್ ಟೈಮ್ಸ್, ದಿ ಹಿಂದೂ, ದಿ ಇಂಡಿಯನ್ ಎಕ್ಸ್‌ಪ್ರೆಸ್, ದಿ ಟೆಲಿಗ್ರಾಫ್ ಮತ್ತು ದಿ ಟೈಮ್ಸ್ ಆಫ್ ಇಂಡಿಯಾ, ಹಿಂದಿಯಲ್ಲಿ ದೈನಿಕ್ ಭಾಸ್ಕರ್, ಅಮರ್ ಉಜಾಲಾ, ನವಭಾರತ್ ಟೈಮ್ಸ್, ರಾಜಸ್ಥಾನ ಪತ್ರಿಕಾ, ಪ್ರಭಾತ್ ಖಬರ್, ಪಂಜಾಬ್ ಕೇಸರಿ ಮತ್ತು ಹಿಂದುಸ್ಥಾನ್ ಪತ್ರಿಕೆಗಳನ್ನು ಆಯ್ಕೆಮಾಡಲಾಗಿತ್ತು.

ವರದಿಯ ಪ್ರಕಾರ, ಸಮೀಕ್ಷೆಗೊಳಪಡಿಸಲಾದ ಆರು ಇಂಗ್ಲಿಷ್ ಹಾಗೂ ಏಳು ಹಿಂದಿ ವರ್ತಮಾನ ಪತ್ರಿಕೆಗಳಲ್ಲಿ ಕೆಳ ಜಾತಿಗಳ ಗುಂಪುಗಳ ಯಾವನೇ ಮಾಧ್ಯಮ ವೃತ್ತಿಪರರು ಯಾವುದೇ ನಾಯಕತ್ವ ಹುದ್ದೆಗಳನ್ನು ಹೊಂದಿಲ್ಲ.

2018ರ ಅಕ್ಟೋಬರ್ ಹಾಗೂ 2019ರ ಮಾರ್ಚ್ ನಡುವೆ ಪ್ರಕಟವಾದ 16,000 ಲೇಖನಗಳನ್ನು ಓದಿದ ಬಳಿಕ ಸಂಶೋಧಕರು ಗಮನಿಸಿದ ಅಂಶ ಹೀಗಿದೆ: ಶೇ. 60ಕ್ಕಿಂತಲೂ ಹೆಚ್ಚು ಲೇಖನಗಳು ಮೇಲ್ಜಾತಿಯ ಲೇಖಕರಿಂದ ಬರೆಯಲ್ಪಟ್ಟ ಲೇಖನಗಳು. ಆದರೆ ದಿ ಹಿಂದುವಿಗೆ ಲೇಖನ ಬರೆದವರಲ್ಲಿ ಶೇ. 26 ಲೇಖಕರ ಜಾತಿ ಯಾವುದೆಂದು ನಿರ್ಧರಿಸಲು ಸಂಶೋಧಕರಿಗೆ ಸಾಧ್ಯವಾಗಲಿಲ್ಲ.

ಸಂಶೋಧಕರು ಈ 16,000 ಲೇಖನಗಳನ್ನು ರಾಜಕಾರಣ, ಸಾರ್ವಜನಿಕ ಜೀವನ, ಕ್ರೀಡೆ, ಸರಕಾರ ಮತ್ತು ಅರ್ಥವ್ಯವಸ್ಥೆ ಸೇರಿದಂತೆ ಹನ್ನೊಂದು ವಿಭಾಗಗಳಾಗಿ ವರ್ಗೀಕರಿಸಿದರು. ಈ ಎಲ್ಲಾ ವರ್ಗಗಳಲ್ಲಿ, ಶೇ. 55-65 ಲೇಖನಗಳು ಮೇಲ್ಜಾತಿಗೆ ಸೇರಿದ ಲೇಖಕರು ಬರೆದ ಲೇಖನಗಳೆಂದು ತಿಳಿದುಬಂತು. ಜಾತಿಗೆ ಸಂಬಂಧಿಸಿದ ವಿಷಯಗಳಿಗೆ ದಿ ಇಂಡಿಯನ್ ಎಕ್ಸ್‌ಪ್ರೆಸ್ ಗರಿಷ್ಠ ಗಮನ ನೀಡಿತು. ಆ ಕುರಿತು ಪ್ರಕಟವಾದ ಒಟ್ಟು ಲೇಖನಗಳಲ್ಲಿ ಶೇ. 60 ಲೇಖನಗಳು ಅದರಲ್ಲಿ ಪ್ರಕಟವಾಗಿವೆ ಎನ್ನುತ್ತದೆ ಸಂಶೋಧನಾ ವರದಿ.

ಹಿಂದಿ ವರ್ತಮಾನ ಪತ್ರಿಕೆಗಳಲ್ಲಿ, ಶೇ. 56 ಲೇಖಕರು ಸಾಮಾನ್ಯ ವರ್ಗಕ್ಕೆ ಸೇರಿದವರು; ಶೇ. 8 ಎಸ್ಸಿಗೆ ಮತ್ತು ಶೇ. 1.1 ಮಾತ್ರ ಎಸ್ಟಿ ವರ್ಗಕ್ಕೆ ಸೇರಿದವರು. ಒಂದು ಧನಾತ್ಮ್ಮಕ ಅಂಶವೆಂದರೆ ಅಮರ್ ಉಜಾಲಾದಲ್ಲಿ ಜಾತಿಗೆ ಸಂಬಂಧಿಸಿ ಪ್ರಕಟವಾದ ಲೇಖನಗಳಲ್ಲಿ ಶೇ. 100 ಲೇಖನಗಳು ಸಮಾಜದ ಅಂಚಿನ ಜಾತಿ ಪಂಗಡಗಳಿಗೆ ಸೇರಿದ ಲೇಖಕರು ಬರೆದ ಲೇಖನಗಳು.ಶೇ. 10.2 ಪಡೆದಿರುವ ದೈನಿಕ್ ಭಾಸ್ಕರ್ ಈ ನಿಟ್ಟಿನಲ್ಲಿ ದ್ವಿತೀಯ ಸ್ಥಾನದಲ್ಲಿದೆ.

ವರದಿ ಹೇಳುವಂತೆ ಪತ್ರಿಕೆಗಳ ಕ್ರೀಡಾಪುಟಗಳಲ್ಲಿ ಬರೆಯುವ ಲೇಖಕರಲ್ಲಿ ಶೇ. 58 ಲೇಖಕರು ಮೇಲ್ಜಾತಿಗೆ ಸೇರಿದವರು ಮತ್ತು ಅವರು ಒಟ್ಟು ಲೇಖನಗಳಲ್ಲಿ ಶೇ.80 ಲೇಖನಗಳ ಲೇಖಕರು. ಯಾವುದೇ ಹಿಂದಿ ವರ್ತಮಾನ ಪತ್ರಿಕೆಗಳಲ್ಲಿ ಕ್ರೀಡಾಪುಟಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ ಒಬ್ಬನೇ ಒಬ್ಬ ಲೇಖಕನ ಲೇಖನ ಪ್ರಕಟವಾಗಿಲ್ಲ. ವಾಣಿಜ್ಯ ಪುಟಗಳಲ್ಲಿ ಕೂಡ ಮೇಲ್ಜಾತಿ ಲೇಖಕರೇ ಪ್ರಾಬಲ್ಯ ಹೊಂದಿದ್ದಾರೆ.

ಡಿಜಿಟಲ್ ಮೀಡಿಯಾ

ಸಂಶೋಧಕರು ಹನ್ನೊಂದು ಡಿಜಿಟಲ್ ಮೀಡಿಯಾ ಔಟ್‌ಲೆೆಟ್‌ಗಳನ್ನು ಆಯ್ದುಕೊಂಡರು. ಆ ಹನ್ನೊಂದು ಔಟ್‌ಲೆೆಟ್‌ಗಳು ಇವು: ಫಸ್ಟ್ ಪೋಸ್ಟ್, ನ್ಯೂಸ್ ಲಾಂಡ್ರಿ, ಸ್ಕ್ರಾಲ್ ಡಾಟ್ ಇನ್, ಸ್ವರಾಜ್ಯ, ದಿ ಕೆನ್, ದಿ ನ್ಯೂಸ್ ಮಿನಿಟ್, ದಿ ಪ್ರಿಂಟ್, ದಿ ಕ್ವಿಂಟ್, ದಿ ವೈರ್, ನ್ಯೂಸ್ ಲಾಂಡ್ರಿ (ಹಿಂದಿ) ಮತ್ತು ಸತ್ಯಾಗ್ರಹ (ಹಿಂದಿ). ಇಲ್ಲಿ ಡಿಜಿಟಲ್ ಮೀಡಿಯಾ ಔಟ್‌ಲೆೆಟ್‌ಗಳಲ್ಲಿ ಒಟ್ಟು ನಾಯಕತ್ವ ಹುದ್ದೆಗಳಲ್ಲಿ (ಲೀಡರ್ ಶಿಪ್ ಪೊಸಿಷನ್) ಶೇ. 84 ಹುದ್ದೆಗಳಲ್ಲಿ ಸಾಮಾನ್ಯ ವರ್ಗಕ್ಕೆ ಸೇರಿದವರು. ವರ್ತಮಾನ ಪತ್ರಿಕೆಗಳು ಹಾಗೂ ಟಿವಿ ಚಾನೆಲ್‌ಗಳಲ್ಲಿರುವ ಸ್ಥಿತಿಯೇ ಇಲ್ಲಿದೆ. ಈ ಡೊಮೈನ್ ನಲ್ಲಿ ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿಗಳಿಗೆ ಸೇರಿದವರಿಗೆ ಪ್ರಾತಿನಿಧ್ಯವೇ ಇಲ್ಲ.

ಈ ವೇದಿಕೆಗಳಲ್ಲಿ ಜಾತಿಗೆ ಸಂಬಂಧಿಸಿದ ಲೇಖನಗಳ ವಿಷಯಕ್ಕೆ ಬಂದರೆ ಶೇ. 56 ಮಂದಿ ಲೇಖಕರು ಸಾಮಾನ್ಯ ವರ್ಗಕ್ಕೆ ಸೇರಿದವರು. ‘ಸತ್ಯಾಗ್ರಹ’ದಲ್ಲಿ ಇದು ಶೇ. 24 ಇದ್ದರೆ ದಿ ನ್ಯೂಸ್ ಮಿನಿಟ್‌ನಲ್ಲಿ ಶೇ. 45 ಇರುವುದು ಕಂಡು ಬಂತು.

ನ್ಯೂಸ್ ಲಾಂಡ್ರಿಯಲ್ಲಿ ಶೇ. 49 ಹುದ್ದೆಗಳನ್ನು ಸಾಮಾನ್ಯ ವರ್ಗಕ್ಕೆ ಸೇರಿದವರು ಹೊಂದಿದ್ದರೆ, ನ್ಯೂಸ್ ಲಾಡ್ರಿ-ಹಿಂದಿಯಲ್ಲಿ ಶೇ. 60 ಹುದ್ದೆಗಳನ್ನು ಇದೇ ವರ್ಗದವರು ಹೊಂದಿದ್ದಾರೆ. ಅದೇ ರೀತಿಯಾಗಿ ಜಾತಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವವರು ಕೂಡ ಅನುಕ್ರಮವಾಗಿ ಶೇ. 49 ಹಾಗೂ ಶೇ. 53 ಮೇಲ್ಜಾತಿಗೆ ಸೇರಿದವರು. ‘‘ದಿ ಕೆನ್, ನ್ಯೂಸ್ ಲಾಂಡ್ರಿ ಸತ್ಯಾಗ್ರಹ ಮತ್ತು ನ್ಯೂಸ್ ಲಾಂಡ್ರಿ-ಹಿಂದಿಯಲ್ಲಿ ಪ್ರಕಟವಾದ ಎಲ್ಲ ಲೇಖನಗಳು ಮೇಲ್ಜಾತಿಯವರು ಬರೆದ ಲೇಖನಗಳು’’ ಎನ್ನುತ್ತದೆ ವರದಿ.

ಮ್ಯಾಗಝಿನ್‌ಗಳು

ಸಂಶೋಧಕರು ರಾಜಕಾರಣ, ವಾಣಿಜ್ಯ, ಸಂಸ್ಕೃತಿ, ಕ್ರೀಡೆ ಇತ್ಯಾದಿಗಳ ಕುರಿತಾದ ಲೇಖನಗಳನ್ನು ಪ್ರಕಟಿಸಿರುವ 12 ಮ್ಯಾಗಝಿನ್‌ಗಳನ್ನು ತಮ್ಮ ಅಧ್ಯಯನಕ್ಕಾಗಿ ಆಯ್ದುಕೊಂಡರು. ಬಿಸಿನೆಸ್ ಟುಡೆ, ಫೆಮಿನಾ, ಫ್ರಂಟ್ ಲೈನ್, ಇಂಡಿಯಾ ಟುಡೇ -ಹಿಂದಿ, ಆರ್ಗನೈಸರ್ ಔಟ್ ಲುಕ್, ಔಟ್ ಲುಕ್-ಹಿಂದಿ, ಸರಿತಾ, ಸ್ಪೋರ್ಟ್ಸ್ ಸ್ಟಾರ್, ತೆಹಲ್ಕಾ ಮತ್ತು ದಿ ಕಾರವಾನ್. ವರದಿಯ ಪ್ರಕಾರ ಟಿವಿ ನ್ಯೂಸ್ ಚಾನೆಲ್‌ಗಳು ಮತ್ತು ನ್ಯೂಸ್ ವೆಬ್ ಸೈಟ್‌ಗಳಿಗೆ ಹೋಲಿಸಿದರೆ ಮ್ಯಾಗಝಿನ್‌ಗಳ ನಾಯಕತ್ವ ಹುದ್ದೆಗಳಲ್ಲಿ ಒಬಿಸಿಗಳಿಗೆ ಹೆಚ್ಚಿನ ಪ್ರಾತಿನಿಧ್ಯವಿರುವುದು ಕಂಡು ಬಂದಿದೆ. ಆದರೆ ಇಲ್ಲಿ ಕೂಡ ಎಸ್ಸಿ ಹಾಗೂ ಎಸ್ಟಿಗಳಿಗೆ ಸ್ಥಾನವಿಲ್ಲ.

ಮ್ಯಾಗಝಿನ್‌ಗಳ ಒಟ್ಟು ಬರಹಗಳಲ್ಲಿ ಶೇ. 56 ಬರಹಗಳು ಮೇಲ್ಜಾತಿಯವರು ಬರೆದ ಬರಹಗಳು. ಎಸ್ಪಿಮತ್ತು ಎಸ್ಟಿ ವರ್ಗದವರು ಬರೆದ ಬರಹಗಳು ಕೇವಲ ಶೇ. 6.5. ಇತರ ಹಿಂದುಳಿದ ವರ್ಗಗಳಿಗೆ ಸೇರಿದವರು ಬರೆದ ಬರಹಗಳು ಶೇ. 17.

ಈ ಮ್ಯಾಗಝಿನ್‌ನಲ್ಲಿ ನಾಲ್ಕು ಮ್ಯಾಗಝಿನ್‌ಗಳು ಮಾತ್ರ ತಮ್ಮ ಮುಖಪುಟದಲ್ಲಿ ಜಾತಿ ಕುರಿತಾದ ವಿಷಯಗಳಿಗೆ ಅವಕಾಶ ನೀಡಿದ್ದವು. ಇಂಡಿಯಾಟುಡೇ, ಇಂಡಿಯಾ ಟುಡೇ-ಹಿಂದಿ, ದಿ ಕಾರವಾನ್ ಮತ್ತು ಸರಿತಾ. ಈ ಪತ್ರಿಕೆಗಳಲ್ಲಿ ಪ್ರಕಟವಾದ ಜಾತಿ ಸಂಬಂಧಿ ಲೇಖನಗಳಲ್ಲಿ ಶೇ. 36 ಲೇಖನಗಳು ಸಾಮಾನ್ಯ ವರ್ಗದ ಲೇಖಕರು ಬರೆದ ಲೇಖನಗಳು. ಇಂಡಿಯಾ ಟುಡೇಯಲ್ಲಿ ಇದು ಶೇ.99.5ರಷ್ಟು ಇತ್ತು. ‘‘ಈ ರೀತಿಯ ಮೇಲ್ಜಾತಿ ಪ್ರಾಬಲ್ಯಕ್ಕೆ ದಿ ಕಾರವಾನ್ ಒಂದು ಅಪವಾದ ಅನ್ನಿಸಿದರೂ ಅದರ ಲೇಖಕರಲ್ಲಿ ನಾಲ್ಕನೇ ಒಂದು ಭಾಗದಷ್ಟು ಲೇಖಕರ ಜಾತಿ ಯಾವುದೆಂದು ನಿರ್ಧರಿಸಲು ನಮಗೆ ಸಾಧ್ಯವಾಗಲಿಲ್ಲ’’ ಎಂದಿದೆ ವರದಿ.

ಸಂಶೋಧನಾ ವಿಧಾನ

ಸಂಶೋಧಕರ 2018ರ ಓದುಗರ ಸಮೀಕ್ಷೆಯನ್ನಾಧರಿಸಿ ಹಿಂದಿ ಮತ್ತು ಇಂಗ್ಲಿಷ್ ವರ್ತಮಾನ ಪತ್ರಿಕೆಗಳನ್ನು ತಮ್ಮ ಅಧ್ಯಯನಕ್ಕೆ ಆಯ್ದುಕೊಂಡಿದ್ದರು. ಸಮೀಕ್ಷೆಗೆ ಆನ್‌ಲೈನ್ ಆರ್ಖೈವ್‌ಗಳನ್ನು ಕೂಡ ಆಧಾರವಾಗಿ ಬಳಸಿಕೊಳ್ಳಲಾಗಿತ್ತು. 2018ರ ಅಕ್ಟೋಬರ್ ಮತ್ತು 2019ರ ಮಾರ್ಚ್ ನಡುವೆ ಪ್ರಕಟಿಸಲಾದ ಮುಖಪುಟ, ಅಭಿಪ್ರಾಯಗಳು, ಅರ್ಥವ್ಯವಸ್ಥೆ ಹಾಗೂ ಕ್ರೀಡಾ ವಿಭಾಗಗಳಲ್ಲಿ ಪ್ರಕಟವಾದ ಬರಹಗಳನ್ನು ಓದಿದ ಬಳಿಕ ದತ್ತಾಂಶಗಳನ್ನು ಸಂಗ್ರಹಿಸಲಾಗಿತ್ತು. ಟಿವಿ ಚಾನೆಲ್‌ಗಳಿಗಾಗುವಾಗ ಸಂಶೋಧಕರು ಪ್ರಮುಖ ಪ್ರೈಮ್‌ಟೈಮ್ ಚರ್ಚೆಗಳನ್ನು ವಿಶ್ಲೇಷಿಸಿದರು. ಆ್ಯಂಕರ್‌ಗಳ ಹಾಗೂ ಚರ್ಚೆಗಳಲ್ಲಿ ಭಾಗವಹಿಸಿದವರ ವಯಸ್ಸು ಇತ್ಯಾದಿ ವಿವರಗಳನ್ನು ಆ ಬಳಿಕ ದಾಖಲಿಸಿಕೊಳ್ಳಲಾಯಿತು.

ಡಿಜಿಟಲ್ ಔಟ್‌ಲೆಟ್‌ಗಳು ಒಂದು ವಿಶಿಷ್ಟ ಸಮಸ್ಯೆಯನ್ನು ಎದುರಿಗೆ ತಂದು ನಿಲ್ಲಿಸಿದವು: ‘‘ಆದ್ದರಿಂದ ಮೀಡಿಯಾ ವಿಶ್ಲೇಷಣೆಗೆ ಹಾಗೂ ಅಧ್ಯಯನಕ್ಕೆ ಪ್ರಸ್ತುತವಾದ ದತ್ತಾಂಶಗಳ ಸಂಗ್ರಹಣೆಗೆ ಒಂದು ಮುಕ್ತ-ಮೂಲ ಸಾಫ್ಟ್‌ವೇರ್ ಟೂಲ್ ಆಗಿರುವ ಮೀಡಿಯಾ ಕ್ಲೌಡ್ ಎಂಬ ಸಾಫ್ಟ್‌ವೇರನ್ನು ಬಳಸಿದೆವು ಮತ್ತು ನಮ್ಮ ಅಧ್ಯಯನದ ಅವಧಿಯಲ್ಲಿ ಕನಿಷ್ಠ ಐದು ಲೇಖನಗಳನ್ನು ನೀಡಿದ್ದ ಲೇಖಕರ ಬರಹಗಳಿಗೆ ನಮ್ಮ ವಿಶ್ಲೇಷಣೆಯನ್ನು ಸೀಮಿತಗೊಳಿಸಿದೆವು.’’

ಮ್ಯಾಗಝಿನ್‌ಗಳ ಅಧ್ಯಯನ ನಡೆಸುವಾಗ ವಿಶ್ಲೇಷಣೆಯನ್ನು ಮುಖಪುಟ ಲೇಖನಕ್ಕೆ ಹಾಗೂ ಮುಖಪುಟದಲ್ಲಿ ಉಲ್ಲೇಖಿಸಲಾದ ಲೇಖನಗಳಿಗೆ ಸೀಮಿತಗೊಳಿಸಲಾಯಿತು.

ನ್ಯೂಸ್ ರೂಮ್‌ಗಳಲ್ಲಿ ಇರುವ ಸಮಾಜದ ಅಂಚಿನ ಜಾತಿ ಪಂಗಡಗಳ ಪತ್ರಕರ್ತರ ಸಂಖ್ಯೆಯನ್ನಲ್ಲದೆ ಜಾತಿ ಪ್ರಾತಿನಿಧ್ಯವನ್ನು ಲೆಕ್ಕ ಹಾಕುವಾಗ ಇತರ ಎರಡು ಮಾನದಂಡಗಳನ್ನು ಬಳಸಲಾಯಿತು: ಅವರ ಕೆಲಸದ ಒಟ್ಟು ಪ್ರಮಾಣ ಮತ್ತು ಲೀಡರ್‌ಶಿಪ್ ಹುದ್ದೆಗಳಲ್ಲಿ ಅವರ ಹಾಜರಿ. ಈ ಅಂಶವನ್ನು ಪರಿಗಣಿಸುವಾಗ ಮುಖ್ಯ ಸಂಪಾದಕ, ಮ್ಯಾನೇಜಿಂಗ್ ಎಡಿಟರ್, ಕಾರ್ಯನಿರ್ವಾಹಕ ಸಂಪಾದಕ, ಬ್ಯೂರೋ ಮುಖ್ಯಸ್ಥ ಅಥವಾ ಇನ್‌ಪುಟ್, ಔಟ್‌ಪುಟ್ ಸಂಪಾದಕ ಪದನಾಮಗಳನ್ನು ಮಾತ್ರ ಪರಿಗಣಿಸಲಾಯಿತು.

ಅಧ್ಯಯನದಲ್ಲಿ ಕ್ರಿಶ್ಚಿಯನ್, ಮುಸ್ಲಿಂ, ಪಾರ್ಸಿ ಪತ್ರಕರ್ತರು ಲೇಖಕರು ಹಾಗೂ ಪ್ಯಾನಲಿಸ್ಟ್‌ಗಳಿಗೆ ‘ಲಭ್ಯವಿಲ್ಲ’ ಎಂಬ ವರ್ಗವನ್ನು ನೀಡಲಾಯಿತು. ಕಾರಣ ಅವರ ಹೆಸರುಗಳನ್ನು ಸುಲಭವಾಗಿ ಅವರ ಜಾತಿಗಳೊಂದಿಗೆ ಹೊಂದಿಸಲು ಸಾಧ್ಯವಾಗಲಿಲ್ಲ.

ಕೃಪೆ: newslaundry.com

Please follow and like us:
error