ಮುಸ್ಲಿಂ ಜೋಡಿ ವಿವಾಹ ತಡೆದು ರಾತ್ರಿಯಿಡೀ ಠಾಣೆಯಲ್ಲಿರಿಸಿದ ಪೊಲೀಸರು : ‘ಲವ್ ಜಿಹಾದ್’ ವದಂತಿ

ಲಕ್ನೋ: ಮುಸ್ಲಿಂ ವ್ಯಕ್ತಿಯೊಬ್ಬ ಹಿಂದು ಮಹಿಳೆಯನ್ನು ಮತಾಂತರಿಸಿ ವಿವಾಹವಾಗುತ್ತಿದ್ದಾನೆಂಬ ಮಾಹಿತಿ ನೀಡಿ ಬಂದ ದೂರವಾಣಿ ಕರೆಯೊಂದನ್ನಾಧರಿಸಿ ಉತ್ತರ ಪ್ರದೇಶದ ಕುಶಿನಗರ ಎಂಬಲ್ಲಿ ಮಂಗಳವಾರ ಪೊಲೀಸರು ವಿವಾಹ ಸಮಾರಂಭವೊಂದನ್ನು ನಿಲ್ಲಿಸಿದ್ದೇ ಅಲ್ಲದೆ ವಿವಾಹವಾಗಲಿದ್ದ ಜೋಡಿಯನ್ನು ರಾತ್ರಿಯಿಡೀ ಠಾಣೆಯಲ್ಲಿರಿಸಿ ನಂತರ ಮರುದಿನ ಅವರಿಬ್ಬರೂ ಮುಸ್ಲಿಮರು ಎಂದು  ತಿಳಿದ ಮೇಲೆ ಬಿಡುಗಡೆಗೊಳಿಸಿದ್ದಾರೆ. ಸಂತ್ರಸ್ತ ವ್ಯಕ್ತಿ, 39 ವರ್ಷದ ಹೈದರ್ ಅಲಿ ಘಟನೆಯ ಬಗ್ಗೆ ವಿವರಿಸಿ ತನಗೆ ಪೊಲೀಸರು ಬೆಲ್ಟಿನಿಂದ ಹಲ್ಲೆ ನಡೆಸಿ ಕಸ್ಯ ಪೊಲೀಸ್ ಠಾಣೆಯಲ್ಲಿ ಗಂಟೆಗಟ್ಟಲೆ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.

ವಧು ಶಬೀಲಾ ಖತೂನ್ (28) ಎಂಬಾಕೆಯ ಸೋದರ ಬುಧವಾರ ಠಾಣೆಗೆ ಹಾಜರಾಗಿ ವಿವಾಹಕ್ಕೆ ಕುಟುಂಬದ ಆಕ್ಷೇಪವಿಲ್ಲ ಎಂದು ಹೇಳಿದ ನಂತರ ಅವರನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ.

ಲವ್ ಜಿಹಾದ್ಎಂಬ ಸುಳ್ಳು ಸುದ್ದಿಯನ್ನು ಕಿಡಿಗೇಡಿಗಳು ಹರಡಿದ್ದರಿಂದ ಇಂತಹ ಒಂದು ವಿದ್ಯಮಾನ ಸಂಭವಿಸಿದೆ ಎಂದು ಕಸ್ಯ ಠಾಣಾಧಿಕಾರಿ ಸಂಜಯ್ ಕುಮಾರ್ ಹೇಳಿದ್ದಾರೆ. ಇಬ್ಬರೂ ವಯಸ್ಕರು ಹಾಗೂ ಒಂದೇ ಧರ್ಮದವರು ಎಂದು ತಿಳಿದ ನಂತರ ಹಾಗೂ ಯುವತಿ ತಾನು ಸ್ವಇಚ್ಛೆಯಿಂದ ವಿವಾಹವಾಗುತ್ತಿರುವುದಾಗಿ ತಿಳಿಸಿದ ನಂತರ ಅವರನ್ನು ಬಿಡುಗಡೆಗೊಳಿಸಲಾಯಿತು ಎಂದೂ ಅವರು ಹೇಳಿದ್ದಾರೆ.

 

ಆದರೆ ಹೈದರ್ ಅಲಿ ಮೇಲೆ ಠಾಣೆಯಲ್ಲಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ

ವಿವಾಹ ಸಂಬಂಧ ಕುದುರಿಸಿದ್ದ ಅರ್ಮಾನ್ ಖಾನ್ ಎಂಬಾತನ ಪ್ರಕಾರ ಕೆಲ ಹಿಂದು ಯುವ ವಾಹಿನಿ ಸದಸ್ಯರು ಪೊಲೀಸರಿಗಿಂತ ಮುನ್ನವೇ ಅಲ್ಲಿಗೆ ಆಗಮಿಸಿ ವಧೂವರರನ್ನು ಪ್ರಶ್ನಿಸಿದ್ದರು.

Please follow and like us:
error