ಮುಟ್ಟು ಏನಿದರ ಒಳಗುಟ್ಟು ? ಫೇಸ್ ಬುಕ್ ಲೈವ್ ಕಾರ್ಯಕ್ರಮದ ಮೂಲಕ ಪುಸ್ತಕ ಲೋಕಾರ್ಪಣೆ

 ಮುಟ್ಟಿನ ಬಗ್ಗೆ ಮಹಿಳೆಯರಿಗಿಂತ ಪುರುಷರಲ್ಲಿ ಜಾಗೃತಿ ಮೂಡಿಸಬೇಕಿದೆ- ಭಾರತಿ ಗುಡ್ಲಾನೂರು

ಕೊಪ್ಪಳ :  ಮಹಿಳೆಯ ಸಹಜ ನೈಸರ್ಗಿಕ ಕ್ರಿಯೆಯಾಗಿರುವ ಮುಟ್ಟಿನ ಬಗ್ಗೆ ಮಾತನಾಡುವುದಕ್ಕೆ ಈಗಲೂ ನಮ್ಮ ಸಮಾಜ ಹಿಂಜರಿಕೆ ಮಾಡುತ್ತೆ. ಮಹಿಳೆಯರಿಗಿಂತ ಪುರುಷರಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಸಾಮಾಜಿಕ ಕಾರ್ಯಕರ್ತೆ  ಭಾರತಿ ಗುಡ್ಲಾನೂರ ಹೇಳಿದರು. ಅವರು ಕೊಪ್ಪಳ ನಗರದ ಸೇವಾ ಸಂಸ್ಥೆ, ಅಂಗಳ ಪ್ರಕಾಶನದ ಸಹಯೋಗದಲ್ಲಿ ನಡೆದ ಮುಟ್ಟು ಏನಿದರ  ಒಳಗುಟ್ಟು ? ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಫೇಸ್ ಬುಕ್ ಲೈವ್ ಕಾರ್ಯಕ್ರಮದ ಮುಖಾಂತರ ಪುಸ್ತಕ ಬಿಡುಗಡೆ ಮಾಡಲಾಯಿತು.

ಈಗಲೂ ಸ್ಯಾನಿಟರಿ ಪ್ಯಾಡುಗಳನ್ನು ಮೆಡಿಕಲ್ ಶಾಪ್ ನಲ್ಲಿ ಕದ್ದು ಮುಚ್ಚಿ ನೀಡಲಾಗುತ್ತಿದೆ. ಮನೆಗಳಲ್ಲೂ ಸಹ ಯಾರೂ ನೋಡದ ಜಾಗೆಯಲ್ಲಿ ಅವುಗಳನ್ನು ಇಡಲಾಗುತ್ತಿದೆ.  ಮುಟ್ಟಿನ ಬಗ್ಗೆ ಮಹಿಳೆಯರಿಗೆ  ಸಂಕೋಚ, ಆತಂಕ, ಕೀಳರಿಮೆಗಳೇ ಹೆಚ್ಚಾಗಿವೆ. ಇದಕ್ಕೆ ಕಾರಣ ಅದರ ಬಗ್ಗೆ ನಮ್ಮ ಸಮಾಜದಲ್ಲಿ ಇರುವ ಅಭಿಪ್ರಾಯಗಳೇ ಕಾರಣ. ಪುರುಷರಿಗೆ ಇದರ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಇದರಿಂದ ಕುಟುಂಬ ವ್ಯವಸ್ಥೆಗೆ ಒಳ್ಳೆಯದಾಗುತ್ತೆ ಎಂದು ಹೇಳಿದರು. ಲೇಖಕಿ, ಸಂಪಾದಕಿ ಜ್ಯೋತಿ ಹಿಟ್ನಾಳ ಮಾತನಾಡಿ ಮುಟ್ಟಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುವಾಗ ಬಹಳಷ್ಟು ವಿಷಯಗಳು ತಿಳಿದುಬಂದವು. ಅದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ನಿರ್ಧರಿಸದಾಗ ಇಡೀ ನಾಡಿನ ಪ್ರಖ್ಯಾತ ಬರಹಗಾರರು, ಸಾಮಾಜಿಕ ಕಾರ್ಯಕರ್ತರು ತಮ್ಮ ಬರಹಗಳನ್ನು ನೀಡಿ ಪ್ರೋತ್ಸಾಹಿಸಿದರು. ಇದನ್ನು ನಮ್ಮ ಜಿಲ್ಲೆಯಲ್ಲಿ ಬಿಡುಗಡೆಗೊಳಿಸುತ್ತಿರುವುದು ನಿಜಕ್ಕೂ ಖುಷಿ ಕೊಡುವ ವಿಚಾರ ಎಂದು ಹೇಳಿದರು. ಪತ್ರಕರ್ತ ಸಿರಾಜ್ ಬಿಸರಳ್ಳಿ  ಲೇಖಕಿ ಜ್ಯೋತಿ ಹಿಟ್ನಾಳ್, ಹಾಗೂ ಭಾರತಿ ಗುಡ್ಲಾನೂರರ ಸಾಮಾಜಿಕ ಕಾರ್ಯವನ್ನು ಶ್ಲಾಘಿಸಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸವಾಗಲಿ ಎಂದು ಹಾರೈಸಿದರು.  ಕಾರ್ಯಕ್ರಮದಲ್ಲಿ ಗೌತಮಿ, ಪ್ರಭುಕುಮಾರ್ ಗಾಳಿ, ಬಸವರಾಜ್ ಮರಡೂರು, ಇಸ್ಮಾಯಿಲ್ ಹ್ಯಾಟಿ, ಮಹೇಶ್  ಉಪಸ್ತಿತರಿದ್ದರು.

Please follow and like us:
error