ಮುಖ್ಯಮಂತ್ರಿಗಳೇ ಕೇಂದ್ರದ ಒತ್ತಡಕ್ಕೆ ಮಣಿಯದಿರಿ, ಕಾರ್ಮಿಕರು,ರೈತರ ಬದುಕಿನ ಜೊತೆ ಚೆಲ್ಲಾಟವಾಡದಿರಿ-ಸಂಘಟನೆಗಳ ಮನವಿ

ಮುಖ್ಯಮಂತ್ರಿಗಳೇ_ಕೇಂದ್ರದ_ಒತ್ತಡಕ್ಕೆ_ಮಣಿಯದಿರಿ_ಕಾರ್ಮಿಕರು_ಹಾಗೂ_ರೈತರ_ಬದುಕಿನ_ಜೊತೆ_ಚೆಲ್ಲಾಟವಾಡದಿರಿ

ಮಾನ್ಯ ಮುಖ್ಯಮಂತ್ರಿಗಳೇ,
ಕೊರೋನಾ ಪಿಡುಗಿನ ಸಂಕಷ್ಟಗಳಿಂದ ಈಗಾಗಲೇ ದುಡಿಯುವ ಜನರು ತತ್ತರಿಸಿಹೋಗಿದ್ದರೆ. ವಲಸೆ ಕಾರ್ಮಿಕರ ಕಣ್ಣೀರು ನಿಮ್ಮ ಕಣ್ಣಿಗೆ ಬಿದ್ದಿದೆಯೋ ಇಲ್ಲವೋ ಗೊತ್ತಿಲ್ಲ. ಸರಿಯಾದ ಊಟವಿಲ್ಲದ ಮಕ್ಕಳ ಆಕ್ರಂದನವಾದರೂ ಕೇಳಿಸಿರಬೇಕು. ಕೋಟ್ಯಾಂತರ ಕೈಗಳು ಕೆಲಸವಿಲ್ಲದೆ ಕೂತಿವೆ. ಮನೆಮಂದಿಗೆ ಸಾಕಾಗುವಷ್ಟು ಬಹುಪಾಲು ದುಡಿಯುವ ಜನರ ಮನೆಗಳಲ್ಲಿ ಇಲ್ಲ. ಸಮಗ್ರ ಆಹಾರ ಸಾಮಗ್ರಿ ಕಿಟ್ ಕೊಡಿ ಎಂದರೆ. ಅದರ ಬದಲು ತರಾತುರಿಯಲ್ಲಿ ಮಧ್ಯದ ಅಂಗಡಿಗಳನ್ನು ತೆರೆದು ಜನರ ಇದ್ದಬದ್ದ ಹಣವನ್ನೂ ಬಾಚಲು ಅವಕಾಶ ಮಾಡಿಕೊಟ್ಟಿದ್ದೀರಿ. ಜನ ಆತಂಕದಲ್ಲಿ, ಅನಿಶ್ಛಿತತೆಯಲ್ಲಿ, ಹಸಿವಿನಲ್ಲಿ ದಿನ ದೂಡುತ್ತಿದ್ದಾರೆ.
ಪರಿಸ್ಥಿತಿ ಹೀಗಿರುವಾಗ ಗಾಯದ ಮೇಲೆ ಬರೆ ಎಳೆದಂತೆ ಕಾರ್ಮಿಕರ ಮತ್ತು ರೈತರ ಹಿತಕಾಯಲು ಇದ್ದ ಕಾನೂನುಗಳನ್ನು ಕಿತ್ತು ಕಾರ್ಪೊರೇಟ್ ಶಕ್ತಿಗಳ ದರೋಡೆಗೆ ಅವಕಾಶ ಮಾಡಿಕೊಡುವ ನೀತಿಗಳನ್ನು ಕೇಂದ್ರ ಸರ್ಕಾರ ಪ್ರಸ್ತಾಪಿಸುತ್ತಿದೆ. ಕಾರ್ಮಿಕರ ದುಡಿಮೆಯ ಅವಧಿಯನ್ನು ಹೆಚ್ಚಿಸುವ, ಕಾರ್ಮಿಕರ ಹಿತ ರಕ್ಷಿಸಲು ಇದ್ದ ಕಾನೂನುಗಳನ್ನು ರದ್ದುಗೊಳಿಸುವ ಪ್ರಕ್ರಿಯೆ ದೇಶದಾದ್ಯಂತ ಈಗಾಗಲೇ ಪ್ರಾರಂಭವಾಗಿದೆ. ಇದಲ್ಲದೆ ಕೃಷಿ ಯೋಗ್ಯ ಭೂಮಿಯನ್ನು ಕಾರ್ಪೊರೇಟ್ ಶಕ್ತಿಗಳಿಗೆ ಪರಭಾರೆ ಮಾಡಲು ಗೇಣಿ ನೀತಿಯಲ್ಲಿ, ಕೃಷಿ ಭೂಮಿಯ ಖರೀದಿಯ ನಿಯಮಗಳಲ್ಲಿ ಬದಲಾವಣೆ ತರುತ್ತಿರುವುದಲ್ಲದೆ, ರೈತರ ಬೆಳೆಗೆ ಒಂದಷ್ಟಾದರೂ ಬೆಲೆ ಸುರಕ್ಷತೆಯನ್ನು ಕೊಡುತ್ತಿದ್ದ ಎಪಿಎಂಸಿಯನ್ನು ದುರ್ಬಲಗೊಳಿಸುವ ನೀತಿಯೂ ನಿಮ್ಮ ಮುಂದಿದೆ. ಕಾರ್ಮಿಕರ ಶ್ರಮಶಕ್ತಿಯನ್ನು ಮತ್ತು ರೈತರ ಭೂಮಿ ಮತ್ತು ಬೆಳೆಯನ್ನು ಅಗ್ಗದ ದರದಲ್ಲಿ ಕಬಳಿಸುವ ಕಾರ್ಪೊರೇಟ್ ಷಡ್ಯಂತ್ರ ಇದರ ಹಿಂದೆ ಇದೆ ಎಂಬುದು ನಮಗೆಲ್ಲಾ ಸ್ಪಷ್ಟವಿದೆ.
ಅದೇನೇ ಇರಲಿ ಕಾರ್ಮಿಕ ಮತ್ತು ಕೃಷಿ ವಲಯದ ನೀತಿಗಳನ್ನು ತಿರುಚುವ ಕೆಲಸವನ್ನು ಕೂಡಲೇ ಕೈಬಿಡಬೇಕೆಂದು ಆಗ್ರಹಿಸುತ್ತಿದ್ದೇವೆ. ಕಾರ್ಪೊರೇಟ್ ಒತ್ತಡಕ್ಕೆ ಮಣಿಯಬಾರದು, ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ಒಪ್ಪಬಾರದು ಎಂದು ನಿಮ್ಮನ್ನು ಒತ್ತಾಯಿಸುತ್ತಿದ್ದೇವೆ. ಹಾಗಾಗದೆ ನೀವು ಸಹ ಕಾರ್ಪೊರೇಟ್ ಬಕಾಸುರರ ಬಾಯಿಗೆ ಕಾರ್ಮಿಕರನ್ನು ಮತ್ತು ರೈತರನ್ನು ಬಲಿಕೊಡುವ ಪ್ರಯತ್ನ ಮಾಡಿದಲ್ಲಿ ಇಡೀ ರಾಜ್ಯದ ತೀವ್ರ ವಿರೋಧವನ್ನು ಖಂಡಿತ ಎದುರಿಸಬೇಕಾಗುತ್ತದೆ.
ಕೆಳಕಂಡ ಸಂಘಟನೆಗಳಾದ ನಾವು ಜಂಟಿಯಾಗಿ ಮೇ 20 ರಿಂದ 27ರ ತನಕ “ಶ್ರಮಿಕ ಹಕ್ಕು ಅಭಿಯಾನ”ವನ್ನು ಹಮ್ಮಿಕೊಂಡಿದ್ದೇವೆ. ಮೇ 22 ರಂದು ನಡೆಯಲಿರುವ ಅಖಿಲ ಭಾರತ ಕಾರ್ಮಿಕರ ಹೋರಾಟದಲ್ಲಿ ಮತ್ತು ಮೇ 27ರಂದು ನಡೆಯಲಿರುವ ಅಖಿಲ ಭಾರತ ರೈತರ ಹೋರಾಟದಲ್ಲಿ ನಾವು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದೇವೆ. ಈ ಅಭಿಯಾನದಲ್ಲಿ ಮತ್ತು ಹೋರಾಟದಲ್ಲಿ ಕೈಜೋಡಿಸಬೇಕೆಂದು ಎಲ್ಲಾ ರೈತ, ಕಾರ್ಮಿಕ ಹಾಗೂ ಪ್ರಜಾತಾಂತ್ರಿಕ ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ.
ವಂದನೆಗಳೊಂದಿಗೆ
ಮಲ್ಲಿಗೆ , ರಾಜ್ಯ ಸಂಚಾಲಕರು : ಕರ್ನಾಟಕ ಜನಶಕ್ತಿ. 8892939771
ವರದ ರಾಜೇಂದ್ರ,  ರಾಜ್ಯ ಸಂಚಾಲಕರು : ಕರ್ನಾಟಕ ಶ್ರಮಿಕ ಶಕ್ತಿ 9986598959,
ಮಾನಸಯ್ಯ: ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ
ಬಾಲನ್: ಭಾರತೀಯ ಫ್ಯಾಸಿಸ್ಟ್ ವಿರೋಧಿ ಒಕ್ಕೂಟ
ಬಸವರಾಜು: ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ
ಕುಮಾರ್ ಸಮತಳ: ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ
ಶಾರದಾ ಗೋಪಾಲ್ : ಆಹಾರ ಹಕ್ಕು ಸಮಿತಿ.
ಡಿ. ಹೆಚ್. ಪೂಜಾರ್: ಕರ್ನಾಟಕ ರೈತ ಸಂಘಟನೆ
ಸಹಭಾಗಿ ಸಂಘಟನೆಗಳು: Bbmp contract workers union, race syces union , bengalore &Mysore, bwssb contract workers union, HAL, BEML, BHEL contract workers union, quarry & constructions workers union, BMTC-KSRTC workers’ union, Mico boash contract workers union.
Please follow and like us:
error