ಮುಂಬೈಯ 14 ವರ್ಷದ ಈ ಪೋರಿ ರಿದಾಳ ಸಮಾಜಸೇವೆ  …ವಾಹ್! ರಿದಾ!

ಈ ಲಾಕ್ ಡೌನ್ ಸಮಯದಲ್ಲಿ ಹೆಚ್ಚಿನ ಮಕ್ಕಳು ಸ್ಮಾರ್ಟ್ ಹಿಡಿದು ವಾಟ್ಸ್ ಆಪ್ ನಲ್ಲಿ ಚಾಟ್ ಮಾಡುತ್ತಲೋ, ಮೆಸೇಜ್ ವಿನಿಮಯ ಮಾಡುತ್ತಲೋ ಅಥವಾ ವೀಡಿಯೋ ನೋಡುತ್ತಲೋ ಸಮಯ ಕಳೆಯುತ್ತಿರುವುದು ಸಾಮಾನ್ಯ ಸಂಗತಿ. ಆದರೆ, ಮುಂಬೈಯ 14 ವರ್ಷದ ಈ ಪೋರಿ ಅದೇ ವಾಟ್ಸ್ ಆಪ್ ಬಳಸಿ ಲಾಕ್ ಡೌನ್ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಆಪದ್ಭಾಂಧವಳಾಗಿ ನೆರವಾಗುತ್ತಿದ್ದಾಳೆ.

ರಿದಾ ಖಾನ್ ಮುಂಬೈಯ ಮಾಹೀಮ್ ನ ಶ್ರೀಮಂತ ಶಿಕ್ಷಣ ಸಂಸ್ಥೆ ‘ಬಾಂಬೇ ಸ್ಕಾಟಿಷ್ ಸ್ಕೂಲ್’ ನ 9ನೇ ತರಗತಿಯ ವಿದ್ಯಾರ್ಥಿನಿ. ಈಕೆಯ ತಂದೆ ಸಲ್ಮಾನ್ ಖಾನ್ ಒಬ್ಬ ಹಿರಿಯ ಬ್ಯೂರಾಕ್ರಾಟ್. ಟಿವಿಯಲ್ಲಿ, ಪತ್ರಿಕೆಗಳಲ್ಲಿ ಹಠಾತ್ ಲಾಕ್ ಡೌನ್ ಗೆ ಸಿಕ್ಕ ವಲಸೆ ಮಾರ್ಮಿಕರು ಪಡುತ್ತಿದ್ದ ಒದ್ದಾಟದ ವರದಿಗಳನ್ನು ನೋಡಿ ಸಹಿಸದಾದ ರಿದಾ ಅವರಿಗೆ ತನ್ನಿಂದಾದ ಏನಾದರೂ ಸಹಾಯ ಮಾಡಬೇಕು ಎಂದು ಆಲೋಚಿಸಿ ಬಡ ಮಕ್ಕಳು ಮತ್ತು ಸ್ತ್ರೀಯರ ಜೀವನ ಸುಧಾರಿಸಲು ಶ್ರಮಿಸುತ್ತಿರುವ ‘ಚೋಟೀಸಿ ಆಶಾ’ ಎಂಬ ಸಾಮಾಜಿಕ ಸಂಸ್ಥೆಗೆ ಸ್ವಯಂಸೇವಕಳಾಗಿ ಸೇರುತ್ತಾಳೆ. ತನ್ನ ಸ್ನೇಹಿತರು, ಸಂಬಂಧಿಕರ ನೆರವಿನಿಂದ ಹಣ ಸಂಗ್ರಹಿಸಿ ಸುಮಾರು 150 ವಲಸೆ ಕಾರ್ಮಿಕ ಕುಟುಂಬಗಳಿಗೆ ಪರಿಹಾರ ಸಾಮಾಗ್ರಿಗಳನ್ನು ಒದಗಿಸುತ್ತಾಳೆ. ನಂತರ, ತಾನು ಇನ್ನೂ ಹೆಚ್ಚು ಜನ ಸಂತೃಸ್ತರನ್ನು ತಲುಪಬೇಕು ಎಂದು ನಿಶ್ಚಯಿಸಿ ‘ಸಲಾಂ ಬಾಂಬೇ’ ಎಂಬ ಹಲವು ದಶಕಗಳಿಂದ ಬಡಬಗ್ಗರ ಏಳಿಗೆಗಾಗಿ ಕೆಲಸ ಮಾಡುತ್ತಿರುವ ಸಾಮಾಜಿಕ ಸಂಸ್ಥೆಯನ್ನು ಸೇರಿ ಸುಮಾರು 7000 ದಷ್ಟು ಲಾಕ್ ಡೌನ್ ಸಂತೃಸ್ತ ಕುಟುಂಬಗಳಿಗೆ ಸಹಾಯ ಒದಗಿಸುತ್ತಾಳೆ.

ಈ ಮಧ್ಯೆ ವಲಸೆ ಕಾರ್ಮಿಕನೊಬ್ಬನ ಹೃದಯ ತೊಂದರೆ ಇದ್ದ 10 ವರ್ಷ ಪ್ರಾಯದ ಮಗನಿಗೆ ತುರ್ತು ಹೃದಯದ ಶಸ್ತ್ರಚಿಕಿತ್ಷೆ ಮಾಡಬೇಕಾಗಿ ಬಂದ ವಿಚಾರ ಈಕೆಯ ಗಮನಕ್ಕೆ ಬಂತು. ಆಗ ಈಕೆ ತನ್ನ ಸ್ನೇಹಿತರು, ಸಂಬಂಧಿಕರು ಮತ್ತು ವಾಟ್ಸ್ ಆಪ್ ಮೂಲಕ ಕ್ರೌಡ್ ಫಂಡಿಂಗ್ ನಡೆಸಿ 3 ಲಕ್ಷ ರುಪಾಯಿಗಳನ್ನು ಸಂಗ್ರಹಿಸಿ ಕೊಟ್ಟು ಆ ಹುಡುಗನಿಗೆ ನೆರವಾಗುತ್ತಾಳೆ. ವಾಹ್! ರಿದಾ!

 

ಪಂಜು ಗಂಗೊಳ್ಳಿ

Please follow and like us:
error