ಮಾ.31ರವರೆಗೆ ರಾಜ್ಯದ ಎಲ್ಲ ಶಾಲೆಗಳ ಶಿಕ್ಷಕರಿಗೆ ರಜೆ ಘೋಷಣೆ

ಬೆಂಗಳೂರು, ಮಾ.22: ಕೊರೋನ ವೈರಸ್ ಭೀತಿ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಶಾಲೆಗಳ ಶಿಕ್ಷಕರಿಗೆ ಮಾ.31ರ ವರೆಗೆ ರಜೆಯನ್ನು ಘೋಷಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ರಾಜ್ಯದ ಎಲ್ಲ ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿನ ಎಲ್ಲ ಶಿಕ್ಷಕರು, ಭೋದಕೇತರ ಸಿಬ್ಬಂದಿಗಳು, ಸಂಶೋಧಕರು ಹಾಗೂ ಇತರೇ ಎಲ್ಲಾ ಸಿಬ್ಬಂದಿಗಳಿಗೆ ಮಾ.31ರ ವರೆಗೆ ಮನೆಯಿಂದಲೇ ಶಾಲಾ ಕೆಲಸ ನಿರ್ವಹಿಸಲು ಅನುಮತಿ ನೀಡಲಾಗಿದೆ.

ಅಲ್ಲದೇ ಶಿಕ್ಷಕರು, ಭೋದಕ ಸಿಬ್ಬಂದಿಗಳು ಈ ಅವಧಿಯಲ್ಲಿ ಆನ್‌ಲೈನ್ ಮೂಲಕ ಬೋಧನೆ, ಆನ್‌ಲೈನ್ ಮೂಲಕ ಮೌಲ್ಯಮಾಪನ ಮಾಡಲು ಅಗತ್ಯವಿರುವ ಪಠ್ಯವಸ್ತು ಅಭಿವೃದ್ಧಿ ಪಡಿಸುವುದು. ಮುಂದಿನ ಶೈಕ್ಷಣಿಕ ವರ್ಷಕ್ಕೆ ಅಗತ್ಯವಿರುವ ಪಠ್ಯ ಯೋಜನೆ, ಟಿಪ್ಪಣಿಯನ್ನು ಸಿದ್ಧಪಡಿಸುವುದು ಹಾಗೂ ತಾವು ಬೋಧಿಸುವ ವಿಷಯದ ಪಠ್ಯವಸ್ತುವನ್ನು ಅಭಿವೃದ್ಧಿ ಪಡಿಸುವುದು.

ಮಾ.31ರ ವರೆಗೆ ಶಿಕ್ಷಕರು, ಬೋಧಕೇತರ ಸಿಬ್ಬಂದಿ, ಸಂಶೋಧಕರು, ಗುತ್ತಿಗೆ, ಗೌರವ ಶಿಕ್ಷಕರು ಸೇರಿದಂತೆ ಎಲ್ಲ ಸಿಬ್ಬಂದಿ ವರ್ಗದವರ ರಜಾ ಅವಧಿಯನ್ನು ಕರ್ತವ್ಯದ ಅವಧಿ ಎಂದು ಪರಿಗಣಿಸುವುದು. ಈ ರಜಾ ಅವಧಿಯಲ್ಲಿ ಶಿಕ್ಷಕರು, ಬೋಧಕೇತರ ಸಿಬ್ಬಂದಿಗಳು ಯಾವುದೇ ಕಾರಣಕ್ಕೂ ಕೇಂದ್ರ ಸ್ಥಾನವನ್ನು ಬಿಡತಕ್ಕದಲ್ಲ. ಸರಕಾರಕ್ಕೆ ಶಿಕ್ಷಕರ, ಬೋಧಕೇತರ ಸಿಬ್ಬಂದಿಯವರ ಸೇವೆ ಅಗತ್ಯವಿದ್ದಾಗ ಕಡ್ಡಾಯವಾಗಿ ಸೇವೆಗೆ ಹಾಜರಾಗತಕ್ಕದ್ದು ಎಂಬುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.

Please follow and like us:
error