ಮಾರಕ ಕಾಯಿಲೆ ಕ್ಯಾನ್ಸರ್ ಬಗ್ಗೆ ಇರಲಿ ಎಚ್ಚರ


ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ.  ಉತ್ತಮ ಅಭ್ಯಾಸ, ಹವ್ಯಾಸ ಮತ್ತು ಜೀವನ ಶೈಲಿಯಿಂದ ಹಲವಾರು ಕಾಯಿಲೆಗಳಿಂದ ನಾವು ದೂರವಿರಬಹುದು.  ಕೆಟ್ಟ ಚಟಗಳು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತವೆ. ಅದಕ್ಕಾಗಿಯೇ ನಮ್ಮ ಹಿರಿಯರು ಹೇಳಿರುವುದು, ಮಾನವ ಜನ್ಮ ಬಲು ದೊಡ್ಡದು, ಹುಚ್ಚಪ್ಪಗಳಿರಾ ಅದನ್ನು ಹಾಳು ಮಾಡಿಕೊಳ್ಳಬೇಡಿ ಎಂದು. ಆರೋಗ್ಯವೇ ಭಾಗ್ಯ ಎಂದು ನಮಗೆಲ್ಲರಿಗೂ ತಿಳಿದಿರುವ ಹಾಗೆ ನಾವು ಆರೋಗ್ಯದಿಂದ ಇದ್ದಾಗ ಮಾತ್ರ ಏನೆಲ್ಲವನ್ನೂ ಮಾಡಲು ಸಾಧ್ಯ.
ಇತ್ತೀಚಿನ ನಮ್ಮ ಒತ್ತಡದ ಜೀವನ, ಆಹಾರ ಶೈಲಿ, ನಾವು ರೂಢಿಸಿಕೊಂಡಿರುವ ಹಲವಾರು ಅಭ್ಯಾಸ-ಹವ್ಯಾಸಗಳು, ಇಂದಿನ ಯುವ ಜನಾಂಗದವರು ಕೂಡ ಹಲವಾರು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ನಮ್ಮ ಆಯುಷ್ಯ ಕಡಿಮೆಯಾಗುತ್ತಿರುವುದಕ್ಕೆ ಕಾರಣವಾಗಿದೆ.  ಹಲವಾರು ಮಾರಕ ಕಾಯಿಲೆಗಳಲ್ಲಿ ಕ್ಯಾನ್ಸರ್ ಕೂಡ ಒಂದಾಗಿದ್ದು, ಜಾಗತಿಕ ಮಟ್ಟದಲ್ಲಿ ಸಂಭವಿಸಬಹುದಾದ 6 ಸಾವುಗಳಲ್ಲಿ 1 ಸಾವು ಕ್ಯಾನ್ಸರ್‌ನಿಂದ ಸಂಭವಿಸುತ್ತದೆ. ಕ್ಯಾನ್ಸರ್ ರೋಗವು ಸಾವಿನ ಸರಣಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಶೇ.70 ರಷ್ಟು ಸಾವುಗಳು ಕೆಳ ಮತ್ತು ಮಧ್ಯಮ ಆದಾಯ ರಾಷ್ಟçಗಳಲ್ಲಿಯೇ ಸಂಭವಿಸುತ್ತವೆ.
ಪುರುಷರಲ್ಲಿ ಶ್ವಾಸಕೋಶದ ಕ್ಯಾನ್ಸರ್, ಬಾಯಿ ಕ್ಯಾನ್ಸರ್, ಜಠರ ಮತ್ತು ಅನ್ನನಾಳದ ಕ್ಯಾನ್ಸರ್ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದರೆ, ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್, ಗರ್ಭಕಂಠ ಮತ್ತು ಗರ್ಭಕೋಶದ ಕ್ಯಾನ್ಸರ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತವೆ. ಭಾರತೀಯ ಸಂಶೋಧನಾ ಪರಿಷತ್ (ಐಸಿಎಮ್ ಆರ್) ನ 2012-2016 ರ ವರೆಗಿನ ವರದಿಯಂತೆ ಸಮುದಾಯ ಮಟ್ಟದ ದಾಖಲೆಯಂತೆ 4,27,524 ಕ್ಯಾನ್ಸರ್ ರೋಗಿಗಳು ಹಾಗೂ ಸಂಸ್ಥಾವಾರು ದಾಖಲೆಯಂತೆ 6,67,666 ಪ್ರಕರಣಗಳು ಒಟ್ಟು 1,09,590 ಪ್ರಕರಣಗಳಾಗಿವೆ.
ಕರ್ನಾಟಕದಲ್ಲಿ ಶೇ. 10 ರಷ್ಟು ಶ್ವಾಸಕೋಶದ ಕ್ಯಾನ್ಸರ್‌ಗಳು, ಶೇ. 7 ರಷ್ಟು ಜಠರ ಕ್ಯಾನ್ಸರ್, ಶೇ. 6 ರಷ್ಟು ಪ್ರಾಸ್ಟೆಟ್ ಕ್ಯಾನ್ಸರ್‌ಗಳು ಪುರುಷರಲ್ಲಿ ಮತ್ತು ಮಹಿಳೆಯರಲ್ಲಿ ಶೇ. 28 ರಷ್ಟು ಸ್ತನ ಕ್ಯಾನ್ಸರ್, ಶೇ. 12 ರಷ್ಟು ಗರ್ಭಕಂಠದ ಕ್ಯಾನ್ಸರ್, ಶೇ. 6 ರಷ್ಟು ಅಂಡಾಶಯದ ಕ್ಯಾನ್ಸರ್ ಕಂಡು ಬರುತ್ತಿರುವುದು ದೃಢಪಟ್ಟಿದೆ. ಕ್ಯಾನ್ಸರ್‌ಗೆ ಕಾರಣ ಆಹಾರ ಪದ್ಧತಿ ಮತ್ತು ಜೀವನ ಶೈಲಿ.  ಹೆಚ್ಚಿನ ದೇಹ ವಿನ್ಯಾಸ, ಕಡಿಮೆ ಪ್ರಮಾಣದಲ್ಲಿ ಹಣ್ಣು ಮತ್ತು ತರಕಾರಿಗಳ ಸೇವನೆ, ಕಡಿಮೆ ದೈಹಿಕ ಚಟುವಟಿಕೆ,  ತಂಬಾಕು ಸೇವನೆಯಿಂದಲೇ ಶೇ. 22 ರಷ್ಟು ಸಾವು ಸಂಭವಿಸುತ್ತವೆ.  ಮದ್ಯಪಾನ, ವಿಕಿರಣ, ನೇರಳಾತೀತ ಕಿರಣಗಳು, ನಗರಗಳಲ್ಲಿನ ಕಲುಷಿತ ವಾತಾವರಣ, ವಾಯುಮಾಲಿನ್ಯ, ಅಡುಗೆಗೆ ಕಟ್ಟಿಗೆ ಮತ್ತು ಬೆರಣಿ ಬಳಸುವುದಾಗಿದೆ.
ಕ್ಯಾನ್ಸರ್ ರೋಗದ ನಿರ್ಮೂಲನೆ ಮತ್ತು ಅದರ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ ಫೆಬ್ರವರಿ.04 ರಂದು ವಿಶ್ವ ಕ್ಯಾನ್ಸರ್ ಜಾಗೃತಿ ದಿನವನ್ನಾಗಿ ಆಚರಿಸುತ್ತಿದ್ದು, ಈ ದಿನದಂದು ಸರ್ಕಾರಿ ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.
ರಾಷ್ಟಿçÃಯ ಕ್ಯಾನ್ಸರ್, ಮಧುಮೇಹ, ಹೃದಯ ರೋಗ ಮತ್ತು ಪಾರ್ಶ್ವವಾಯು ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ 30 ವರ್ಷ ಮೇಲ್ಪಟ್ಟ ಎಲ್ಲಾ ವಯಸ್ಕರಿಗೂ  ಪ್ರತಿ 5 ವರ್ಷಕ್ಕೆ ಒಂದು ಬಾರಿಯಂತೆ ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್‌ಗೆ ಪೂರ್ವಭಾವಿ ತಪಾಸಣೆ ಕೈಗೊಂಡು ರೋಗ ಪತ್ತೆ ಮತ್ತು ಚಿಕಿತ್ಸೆಗೆ ಒಳಪಡಿಸುವ ಅವಕಾಶವಿರುತ್ತದೆ.  ಸಮುದಾಯ ಮಟ್ಟದಲ್ಲಿ ಬೇಗ ಗುರುತಿಸಲು ಸಾಧ್ಯ ಹಾಗೂ ಸಕಾಲದ ಚಿಕಿತ್ಸೆಯಿಂದ ಗುಣಪಡಿಸಬಹುದು.  ಶೇ. 34 ರಷ್ಟು ಜನರು ಕ್ಯಾನ್ಸರ್ ನಿಂದ ಸಾಯುವವರನ್ನು ಈ ಹಂತದಲ್ಲಿಯೇ ಗುಣಪಡಿಸಬಹುದಾಗಿದೆ.
ಈಗಾಗಲೇ ಕ್ಯಾನ್ಸರ್ ಪೀಡಿತರಾಗಿದ್ದು, ಉಲ್ಬಣಾವಸ್ಥೆಯ ವಾಸಿ ಮಾಡಲಾಗದ ಸ್ಥಿತಿಗೆ ತಲುಪಿದಲ್ಲಿ, ಉಪಶಾಮಕ ಆರೈಕೆಗೂ ರಾಷ್ಟಿçÃಯ ಉಪಶಾಮಕ ಚಿಕಿತ್ಸಾ ಕಾರ್ಯಕ್ರಮದ ಅಡಿ ಆರೈಕೆ ಮತ್ತು ನೋವು ನಿವಾರಕ ಚಿಕಿತ್ಸೆಗೆ ಅವಕಾಶವಿದೆ. ಈ ಸೌಲಭ್ಯಗಳು ಸಮಾಜದ ಕಟ್ಟಕಡೆಯ ಮನುಷ್ಯನನ್ನು ಒಳಗೊಳ್ಳಬೇಕೆಂಬುದು  ಈ ಕಾರ್ಯಕ್ರಮದ ಆಶಯವಾಗಿದ್ದು, ಶೇ.80 ರಷ್ಟು ಕ್ಯಾನ್ಸರ್ ರೋಗಿಗಳಿಗೆ ನೋವು ನಿವಾರಕ ಚಿಕಿತ್ಸೆ ಅಗತ್ಯವಿದ್ದು ಈ ರೋಗಿಗಳಿಗೆ ಮಾರ್ಫಿನ್ ಮಾತ್ರೆಗಳು ಲಭ್ಯವಾಗುವಂತೆ ರಾಷ್ಟಿçÃಯ ಉಪಶಾಮಕ ಚಿಕಿತ್ಸಾ ಕಾರ್ಯಕ್ರಮದಡಿ ಒದಗಿಸಲಾಗುತ್ತದೆ.
ಫೆಬ್ರವರಿ.04, 2021 ರಂದು ಆಚರಿಸುತ್ತಿರುವ ವಿಶ್ವ ಕ್ಯಾನ್ಸರ್ ಜಾಗೃತಿ ದಿನದ ಈ ವರ್ಷದ ಘೋಷ ವಾಕ್ಯ `‘ನಾನು ಸಿದ್ದನಿದ್ದೇನೆ ಮತ್ತು ನಾನು ಮಾಡಿಯೇ ತೀರುತ್ತೇನೆ’’ ಎಂಬುದಾಗಿದ್ದು, ಬದಲಾವಣೆ ನಮ್ಮಿಂದಲೇ ಶುರುವಾಗಲೆಂದು ಹೆಜ್ಜೆ ಮುಂದಿಡುತ್ತಾ, ಬನ್ನಿ ಮೊದಲು ನಾವು ನಮ್ಮ ಕುಟುಂಬ ಮತ್ತು ಆಪ್ತರು ಸೇರಿ ಕ್ಯಾನ್ಸರ್ ತಡೆಯುವ ನಿಟ್ಟಿನಲ್ಲಿ ಪಣ ತೊಡೋಣ.

ಜಿ. ಸುರೇಶ.   ಸಹಾಯಕ ನಿರ್ದೇಶಕರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೊಪ್ಪಳ

Please follow and like us:
error